ಕೂಸಿನ ಮನೆ ಕೇಂದ್ರದ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳಿ: ಜಿ.ಪಂ.ಸಿಇಒ ರಿಷಿ ಆನಂದ ಸೂಚನೆ
ವಿಜಯಪುರ,ಜು. 25: ಬಸವನ ಬಾಗೇವಾಡಿ ತಾಲೂಕಿನ ಯರನಾಳ ಮತ್ತು ಮುತ್ತಗಿ ಗ್ರಾಮ ಪಂಚಾಯತಿ ಹಾಗೂ ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅವರು ಬುಧವಾರ ಭೇಟಿ ನೀಡಿ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಯರನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2023-24ನೇ ಸಾಲಿನಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ತೆರೆದ ಬಾವಿ ಕಾಮಗಾರಿ ವೀಕ್ಷಣೆ ಮಾಡಿ ಕಾಮಗಾರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಯರನಾಳ ಗ್ರಾಮದಲ್ಲಿನ ಸರಕಾರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿ ಕಟ್ಟಡ, ಮಕ್ಕಳ ಹಾಜರಾತಿ, ದಾಸ್ತಾನು ಸಂಗ್ರಹಣೆ ಕೋಣೆ, ಸುತ್ತ-ಮುತ್ತಲಿನ ಸ್ವಚ್ಛತೆಯನ್ನು ವೀಕ್ಷಿಸಿ,ಅಂಗನವಾಡಿ ಕೇಂದ್ರದ ಸುತ್ತಲೂ ದಿನನಿತ್ಯ ಸ್ವಚ್ಛತೆಯನ್ನು ಕಾಪಾಡಬೇಕು ಮತ್ತು ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಗ್ರಾಮದಲ್ಲಿನ ಜಲ ಜೀವನ ಮಿಷನ್ ಯೋಜನೆಯಡಿ ಪ್ರತಿ ಮನೆ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಗಳನ್ನು ಪರಿಶೀಲಿಸಿದರು. ತದನಂತರ ಸರಕಾರಿ ಪ್ರೌಢ ಶಾಲೆ ಹಾಗೂ ಗ್ರಂಥಾಲಯಗಳಿಗೆ ಭೇಟಿ ನೀಡಿ ಗ್ರಂಥಾಲಯದಲ್ಲಿನ ಮಕ್ಕಳ ನೋಂದಣಿ, ಹಾಜರಾತಿ, ವಿಶಾಲ ಸ್ಥಳ ಹೊಂದಿರುವ ಗ್ರಂಥಾಲಯದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಂಥಾಲಯಲದಲ್ಲಿ ಕಂಪ್ಯೂಟರ್ ವ್ಯವಸ್ಥೆ, ಗ್ರಂಥಾಲಯ ಚಿತ್ರೀಕರಣ ಮತ್ತು ಗ್ರಂಥಾಲಯ ಸುತ್ತಲೂ ಕಂಪೌAಡ್ ನಿರ್ಮಾಣ ಮಾಡಲು ಹಾಗೂ ಮಾದರಿ ಗ್ರಂಥಾಲಯ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಾದ ನಂತರ ಬಸವನ ಬಾಗೇವಾಡಿ ಬಸವೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆವರಣದಲ್ಲಿ ಪಂಚಾಯತ್ ರಾಜ್ ಇಲಾಖೆಯಡಿ ಅನುಷ್ಠಾನಗೊಳ್ಳುತ್ತಿರುವ ಶಾಲಾ ಕಟ್ಟಡ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅದೇ ಶಾಲಾ ಅವರಣದಲ್ಲಿನ ಕಟ್ಟಡಗಳನ್ನು ಗಣಕಯಂತ್ರ ಕೊಠಡಿ ಹಾಗೂ ಪ್ರಯೋಗಾಲಯಗಳನ್ನಾಗಿ ಮಾರ್ಪಾಡು ಮಾಡಬೇಕು ಹಾಗೂ ಗ್ರಂಥಾಲಯ ಕೋಣೆಗಳಿಗೆ ಹೊಸ ವಿನ್ಯಾಸ ಮಾಡಬೇಕು ಎಂದು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಿದರು.
ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ರಾಜೀವ ಗಾಂಧಿ ಸೇವಾ ಕೇಂದ್ರ ಕಾಮಗಾರಿಯನ್ನು ವೀಕ್ಷಣೆ ಮಾಡಿ ಸುತ್ತಲೂ ಕಂಪೌAಡ್ ನಿರ್ಮಾಣ, ಗೇಟ್ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
2019-20 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ನಿರ್ಮಾಣ ಗೊಂಡ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿ ಮುಂದಿನ ಸ್ಥಳವನ್ನು ಕಂಪೌAಡ್ ಕಟ್ಟುವುದರ ಮೂಲಕ ವಿಸ್ತರಿಸಿಕೊಳ್ಳಬೇಕು ಎಂದರು. ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳೊಂದಿಗೆ ಸಂವಾದ ನಡೆಸಿ, ಪೌಷ್ಟಿಕ ಆಹಾರ, ಆಟದ ಸಾಮಗ್ರಿಗಳು ಮತ್ತು ಪರಿಕರಗಳನ್ನು ದಿನನಿತ್ಯ ನೀಡುವ ಬಗ್ಗೆ ಚರ್ಚಿಸಿದರು. ಪ್ರತಿ ನಿತ್ಯ ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ಪೌಷ್ಠಿಕ ಆಹಾರ ಒದಗಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಳಿಕ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಂಗನವಾಡಿಗೆ ಕಂಪೌAಡ್ ನಿರ್ಮಾಣ ಮಾಡಿಕೊಳ್ಳಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುತ್ತಗಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಬಿಸಿಯೂಟದ ಅಡುಗೆ ಕೋಣೆಯನ್ನು ವೀಕ್ಷಣೆ ಮಾಡಿ, ಪ್ರತಿದಿನ ಮಧ್ಯಾಹ್ನ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟದ ಆಹಾರವನ್ನು ವೀಕ್ಷಣೆ ಮಾಡಿ ಖುದ್ದಾಗಿ ಆಹಾರ ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅದೇ ಶಾಲಾ ಆವರಣದಲ್ಲಿನ ಕೂಸಿನ ಮನೆಗೆ ಭೇಟಿ ನೀಡಿ ಕೂಸಿನ ಮನೆಯಲ್ಲಿನ ಮಕ್ಕಳಿಗೆ ನೀಡುತ್ತಿರುವ ಆಹಾರದ ಕುರಿತು ಪರಿಶೀಲಿಸಿ, ಮಕ್ಕಳಿಗೆ ದಿನನಿತ್ಯ ಉತ್ತಮವಾದ ಆಹಾರವನ್ನು ನೀಡಬೇಕು. ಕೂಸಿನ ಮನೆಯಲ್ಲಿ ಹೆಚ್ಚಿನ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು, ಆಟಿಕೆ ಸಾಮಾನು ಹಾಗೂ ಇತರೆ ಪರಿಕರಗಳನ್ನು ಕಲ್ಪಿಸಬೇಕು. ಕೂಸಿನ ಮನೆ ಕೇಂದ್ರದಲ್ಲಿ ಈಗಿರುವ ಮಕ್ಕಳ ನೋಂದಣಿ, ಮಕ್ಕಳ ಹಾಜರಾತಿ, ವಿತರಿಸುತ್ತಿರುವ ಪೌಷ್ಠಿಕ ಆಹಾರ, ಆಟದ ಸಾಮಗ್ರಿಗಳನ್ನು ವೀಕ್ಷಿಸಿ, ಮಕ್ಕಳ ನೊಂದಣಿ ಸಂಖ್ಯೆಯನ್ನು ಹೆಚ್ಚಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಕೂಸಿನ ಮನೆ ಕೇಂದ್ರದ ಮಕ್ಕಳ ಆರೈಕೆದಾರರಿಗೆ ಇಲ್ಲಿ ಬರುವ ಮಕ್ಕಳನ್ನು ಪ್ರೀತಿ-ಕಾಳಜಿಯಿಂದ ನೋಡಿಕೋಳ್ಳಬೇಕು. ಕೂಸಿನ ಮನೆ ಕೇಂದ್ರವನ್ನು ಸೇವಾ ಮನೋಭಾವದಿಂದ ಕಾಣಬೇಕು. ಕೇಂದ್ರವನ್ನು ಸತತ ಸ್ವಚ್ಛತೆಯಿಂದ ನೋಡಿಕೊಳ್ಳುವುದರ ಜೊತೆಗೆ ಜವಾಬ್ದಾರಿಯಿಂದ ನಿರ್ವಹಣೆ ಮಾಡಬೇಕು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಮಕ್ಕಳ ಆರೈಕೆದಾರರಿಗೆ ಸೂಚಿಸಿದರು.
ತದನಂತರ ಶಾಲಾ ಅಭಿವೃದ್ಧಿಗೆ ಮತ್ತು ಗ್ರಾಮದ ಅಭಿವೃದ್ಧಿಗಾಗಿ ಅವಶ್ಯಕತೆ ಇರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಚರ್ಚಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾದ ಫಲಾನುಭವಿ ಮನೆಗೆ ಭೇಟಿ ನೀಡಿ ಫಲಾನುಭವಿಯೊಂದಿಗೆ ಸಂವಾದ ನಡೆಸಿ, ಕಾಮಗಾರಿ ಸಂಪೂರ್ಣ ಅನುಷ್ಠಾನದ ಕುರಿತು ಫಲಾನುಭವಿ ಮಾತಿನಲ್ಲಿ ಅನುಭವಗಳನ್ನಾಲಿಸಿದರು. ನಂತರ ತೆಲಗಿ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣಗೊಂಡ ಸರಕಾರಿ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕುರಿತು ಪರಿಶೀಲಿಸಿ, ಆಗಸ್ಟ್ 15ರಂದು ಉದ್ಘಾಟನೆಗೆ ಕ್ರಮ ವಹಿಸುವಂತೆ ತಿಳಿಸಿದರು.
ಗ್ರಂಥಾಲಯದಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಗಾಳಿ, ಬೆಳಕು, ವಿದ್ಯುತ್ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಓದಲು ವಿವಿಧ ವಿಷಯಗಳುಳ್ಳ ಪುಸ್ತಕಗಳು, ಸ್ಪರ್ಧಾತ್ಮಕ ಪುಸ್ತಕಗಳು, ಸ್ಪೋಕನ್ ಇಂಗ್ಲೀಷ್ ಪುಸ್ತಕಗಳು ಹಾಗೂ ಇತರೆ ಉತ್ತಮ ವಿಷಯಗಳನ್ನೊಳಗೊಂಡ ಪುಸ್ತಕಗಳು, ಸ್ಮಾರ್ಟ್ ಟಿ.ವ್ಹಿ, ಇ-ಮೊಬೈಲ್ ವ್ಯವಸ್ಥೆ ಹಾಗೂ ವಿವಿಧ ಸೌಕರ್ಯಗಳನ್ನು ವ್ಯವಸ್ಥಿತಗೊಳಿಸಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಗೆ ಸೂಚನೆ ನೀಡಿದರು.
ತೆಲಗಿ ಗ್ರಾಮದ 4ನೇ ವಾರ್ಡ್ ನಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ 5ಕ್ಕೆ ಭೇಟಿ ನೀಡಿ, ಈ ಕೇಂದ್ರಗಳ ಮಕ್ಕಳಿಗೆ ಸರಿಯಾಗಿ ಶಾಲಾ ಪೂರ್ವ ಶಿಕ್ಷಣ ನೀಡಬೇಕು. ಕೇಂದ್ರದಲ್ಲಿ ಪ್ರತಿನಿತ್ಯ ಸ್ವಚ್ಛತೆ ಕಾಪಾಡಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಶಿಸ್ತು ಪಾಲನೆ ಹಾಗೂ ಕಲಿಕೆಗೆ ಆದ್ಯತೆ ನೀಡಬೇಕು. ಪ್ರತಿ ತಿಂಗಳು ಕಡ್ಡಾಯವಾಗಿ ಮಕ್ಕಳು, ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರದ ಸಮರ್ಪಕ ವಿತರಣೆ ಮಾಡಬೇಕು. ಪ್ರತಿ ತಿಂಗಳು ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತರು ಹಾಗೂ ಮೇಲ್ವಿಚಾರಕರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಸವನ ಬಾಗೇವಾಡಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ, ಕೊಲ್ಹಾರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ, ಜಿಲ್ಲಾ ಪಂಚಾಯತಿಯ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವಿಲಾಸ್ ರಾಠೋಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ. ಬಿ. ಗೊಂಗಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲಾ ಸುರಪುರ, ಯರನಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿ ಗುಂಡಳ್ಳಿ, ಮುತ್ತಗಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ನೀಲಾ ಪಾಟೀಲ, ಮುತ್ತಗಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಬಸವರಾಜ ಬಡಿಗೇರ, ಬಸವೇಶ್ವರ ಪ್ರೌಢಶಾಲೆಯ ಮುಖ್ಯಗುರು ಎಸ್. ಡಿ. ಪಾಟೀಲ, ಶಾಖಾಧಿಕಾರಿ ಎನ್. ಬಿ. ನಾಯಕ, ತೆಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರವಿಂದ ಕೊಪ್ಪದ, ತೆಲಗಿ ಗ್ರಾಮ ಪಂಚಾಯಿತಿ ಅಭಿವೃಧ್ದಿ ಅಧಿಕಾರಿ ದಸ್ತಗೀರಸಾಬ ಬಿಳೇಕುದರೆ, ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ಸರ್ವಸದಸ್ಯರು, ಅಧಿಕಾರಿಗಳು, ಸಿಬ್ಬಂದಿಯವರು ಹಾಗೂ ಇತರರು ಉಪಸ್ಥಿತರಿದ್ದರು.