ನಾಡಿದ್ದು ಉದ್ಯೋಗ ಮೇಳ ಆಯೋಜನೆ
ಕೆ.ಆರ್. ಪುರ,ಜು.೨೫- ಸರ್ವರಿಗೂ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆಯಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು ನಿರುದ್ಯೋಗಿ ಯುವ ಜನತೆ ಸದುಪಯೋಗಪಡಿಸಿಕೊಳ್ಳುವಂತೆ ನಗರಮಂಡಲ ಅಧ್ಯಕ್ಷ ಮನೋಹರರೆಡ್ಡಿ ಅವರು ಮನವಿ ಮಾಡಿದರು.
ಮಹದೇವಪುರ ಕಾರ್ಯಪಡೆ ಅಧ್ಯಕ್ಷರು ಮತ್ತು ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಹಾಗು ಶಾಸಕರಾದ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ, ಸಾಮಾಜಿಕ ಸಬಲೀಕರಣ ಕಾರ್ಯಪಡೆಯ ವತಿಯಿಂದ ಇದೇ ೨೭ರಂದು ಶನಿವಾರ ಬೆಳಿಗ್ಗೆ ೯.೦೦ ರಿಂದ ಸಂಜೆ ೫.೦೦ ರವರೆಗೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿ. ಚನ್ನಸಂದ್ರ. ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಮೇಳದಲ್ಲಿ ೫೦ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ, ೩೦೦೦ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಲಿದ್ದು, ಈಗಾಗಲೇ ೧೧೬೨ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಉದ್ಯೋಗಾಕಾಂಕ್ಷಿಗಳ ಅನುಕೂಲಕ್ಕಾಗಿ, ಪದವೀಧರರು, ಮುಂದುವರಿದ ಪದವೀಧರರು ಐಟಿಐ/ಡಿಪ್ಲೊಮಾ, ಪದವೀಧರರಲ್ಲದವರು ಎಂದು ೪ ವರ್ಗಗಳಾಗಿ ವಿಂಗಡಿಸಲಾಗಿದೆ, ಸಂಬಂಧಪಟ್ಟ ಉದ್ಯೋಗಾಕಾಂಕ್ಷಿಗಳು ಅವರ ಅರ್ಹತೆಗೆ ಅನುಗುಣವಾಗಿ ಭಾಗವಹಿಸಲು ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಭಾಗವಹಿಸುವ ಉದ್ಯೋಗಾಕಾಂಕ್ಷಿಗಳಿಗೆ ಉಚಿತ ಊಟ, ವಾಹನ ವ್ಯವಸ್ಥೆ ಮಾಡಲಾಗಿದೆ, ಉದ್ಯೋಗ ಮೇಳವನ್ನು ಸುಗಮವಾಗಿ ನಡೆಸಲು ೧೦೦ಕ್ಕೂ ಹೆಚ್ಚು ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಿ ಎಂದರು.
ಸಂಬಂಧಪಟ್ಟ ಕಂಪನಿಗಳು ಉದ್ಯೋಗಿ ಆಕಾಂಕ್ಷಿಗಳಿಗೆ ಸ್ಥಳದಲ್ಲೇ ನೇಮಕಾತಿ ಆದೇಶಗಳನ್ನು ನೀಡುವಂತೆ ಕೋರಲಾಗಿದೆ. ಉದ್ಯೋಗ ನೋಂದಣಿ ಮಾಡದೆ ನೇರವಾಗಿ ಬಂದು ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳುವವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ವಿಶೇಷಚೇತನ ಯುವಕ ಯುವತಿಯರಿಗೆ ಹಾಗೂ ಮಂಗಳಮುಖಿಯರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಂತರ ಮಂಡಲ ಅಧ್ಯಕ್ಷ ನಟರಾಜ್,ಸಾಮಾಜಿಕ ಸಬಲೀಕರಣ ಕಾರ್ಯಪಡೆಯ ಅಧ್ಯಕ್ಷ ಪಾಪಣ್ಣ, ಮುಖಂಡರಾದ ನಾಗೇಶ್ ರೆಡ್ಡಿ, ಪ್ರಸಾದ್ ಮತ್ತಿತರರು ಇದ್ದರು.