ಸರ್ಕಾರದ ವೈಫಲ್ಯ ಖಂಡಿಸಿ ಡಿಎಸ್ ಎಸ್ ಪಂಜಿನ ಮೆರವಣಿಗೆ
ವಿಜಯಪುರ,ಜು.25:ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಜಯಪುರ ಜಿಲ್ಲಾ ಶಾಖೆ ವತಿಯಿಂದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರದ ವೈಫಲ್ಯವನ್ನು ಖಂಡಿಸಿ ಬುಧವಾರ ರಾತ್ರಿ ವಿಜಯಪುರದಲ್ಲಿ ಬೃಹತ್ ಪಂಜಿನ ಮರವಣಿಗೆಯನ್ನು ಮಾಡಲಾಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ ಸರ್ಕಲ್‌ದಿಂದ ಗಾಂಧಿ ವೃತ್ತದ ಮಾರ್ಗವಾಗಿ ಪಂಜಿನ ಮೆರವಣಿಗೆ ನಡೆಸಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರ ಶ್ರೀನಿವಾಸ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ ಆಸೆಯಂತೆ ದುರ್ಬಲರನ್ನು ರಕ್ಷಿಸಿ ಅವರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರಿಗೆ ಮತ್ತು ಇತರ ಜನರ ನಡುವೆ ಇರುವ ಭಾರಿ ಅಂತರವನ್ನು ಕಡಿಮೆ ಮಾಡಲು ನಿರ್ಧಿಷ್ಟ ಕ್ರಮಗಳನ್ನು ಕೈಗೊಳ್ಳಿ ಎಂದೆಲ್ಲಾ ನಮ್ಮ ಸಂವಿಧಾನ ಆಶಯ, ಆಡಳಿತ ನಡೆಸುವ ಸರ್ಕಾರಗಳಿಗೆ ಕಿವಿ ಮಾತು ಹೇಳಿದೆ. ದುರ್ಬಲರ ಮತ್ತು ಪ.ಜಾತಿ/ಪಂಗಡದವರ ಪರವಾಗಿರುವ ಎಲ್ಲಾ ಆಯೋಗಗಳು ಮತ್ತು ಇವರ ಸ್ಥಿತಿಗತಿ ಕುರಿತು ಬಂದಿರುವ ಬಹುತೇಕ ಕೋರ್ಟ್ ತೀರ್ಪುಗಳು ಕೂಡಾ ಈ ಅಂಶವನ್ನು ಒತ್ತಿ ಹೇಳಿವೆ. ಆದರೆ ಇವೆಲ್ಲವೂ ಬೋರಗಲ್ಲ ಮೇಲೆ ಮಳೆಗರೆದಂತೆ ಆಗಿದೆ. ವಿಜಯಪುರ ಜಿಲ್ಲೆಯ ದಲಿತರ ಅನೇಕ ದೌರ್ಜನ್ಯ ಮತ್ತು ಅನ್ಯಾಯಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ಪದೆ ಪದೆ ತರಲಾಗಿದೆ.
ವಿಜಯಪುರ ಜಿಲ್ಲೆಯ ಕೊಲ್ದಾರ ತಾಲೂಕಿನ ನಾಗರದಿನ್ನಿ ಗ್ರಾಮದ ರಿ.ಸ.ನಂ.56 ಮತ್ತು 75,77ರಲ್ಲಿ ಹೆಚ್ಚುವರಿ ಜಮೀನನ್ನು 19 ದಲಿತ ಕುಟುಂಗಳಿಗೆ 74 ಏಕರೆ 17 ಗುಂಟೆ ಜಮೀನನ್ನು ಭೂನ್ಯಾಯ ಮಂಡಳಿ 1981ರಲ್ಲಿ ಅಂದರೆ 43 ವರ್ಷಗಳಿಂದ ಪರಿಶಿಷ್ಟ ಜಾತಿ ಜನರು ನಿರಂತರ ಜಮೀನಗಳನ್ನು ಸಾಗುವಳಿ ಮಾಡಿಕೊಂಡು ಬದುಕನ್ನು ಕಟ್ಟಿಕೊಂಡಿದ್ದಾರೆ. ವಿಚಾರವನ್ನು ವಿವಿಧ ನ್ಯಾಯಾಲಯದಲ್ಲಿ ಸರ್ಕಾರಪರ ನ್ಯಾಯವಾದಿಗಳನ್ನು ನೇಮಿಸಿ ದಲಿತರಿಗ ಜಮೀನು ಉಳಿಕೊಡುವಲ್ಲಿ ವಿಫಲವಾಗಿದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ, ಜಿಲ್ಲಾ ಸಂಚಾಲಕ ಅಶೋಕ ಚಲವಾದಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆ ಬಳುಸವುದು ಸರಿಯಲ್ಲ. ದಲಿತರ ಬಗ್ಗೆ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ ಗ್ಯಾರಂಟಿ ಯೋಜನೆಗಳಲ್ಲಿ ಬಳಸಿದ ಹಣವನ್ನು ವಾಪಸ್ ಇಟ್ಟು ಅದನ್ನು ಎಸ್.ಸಿ/ಎಸ್.ಟಿ ಸಮುದಾಯಗಳ ಅಭಿವೃದ್ಧಿಗೆ ಬಳಸಬೇಕು ಎಂದು ಆಗ್ರಹಿಸಿದರು. ಸರ್ಕಾರ ಶೀಘ್ರಗತಿಯಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಬ್ಯಾಗ್‌ಲಾಕ್ ಹುದ್ದೆಗಳು ಭರ್ತಿ ಮಾಡಬೇಕು. ಎಸ್.ಸಿ./ಎಸ್.ಟಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರೋತ್ಸಾಹಧನ ಸ್ಥಗಿತ ಮಾಡಿರುವುದು. ಪುನರ ಚಾಲ್ತಿ ಮಾಡಬೇಕು. ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳ ಸಹಾಯಧನವನ್ನು ಕತ್ತರಿ ಹಾಕಿರುವುದು. ಮರಳಿ ಪುನರ್ ಚಾಲ್ತಿ ಮಾಡಿ ವಿದ್ಯಾರ್ಥಿಗಳಿಗೆ ಅನಿಕೂಲ ಮಾಡಬೇಕು. ಎಸ್.ಸಿ/ಎಸ್.ಟಿ ನಿಗಮಗಳಿಗೆ ಭೂಮಿ ಹಂಚಲು ಪಲಾನುಭವಿಗಳನ್ನು ಹಣವು ವಿಳಂಬವಾಗುತ್ತಿರುವುದು. ಕೂಡಲೇ ಹಣ ಒದಗಿಸಬೇಕು. ಶಾಲೆ ಮತ್ತು ಕಾಲೇಜು ಪ್ರಾರಂಭವಾದ ಕೂಡಲೇ ಹಾಸ್ಟೇಲ್ ಗಳನ್ನು ಪ್ರಾರಂಭಿಸಬೇಕು.
ಕೊಲ್ದಾರ ತಾಲೂಕಿನ ನಾಗರದಿನ್ನಿ ಗ್ರಾಮದ 1981ರಲ್ಲಿದಲಿತರಿಗೆ ಕೊಟ್ಟ ಭೂಮಿ ಬಗ್ಗೆಸರ್ಕಾರ ಪರ ಸುಪ್ರೀಂ ಕೋರ್ಟಿನಲ್ಲಿ ನ್ಯಾಯವಾದಿಗಳನ್ನು ನೇಮಿಸಿಬೇಕು. ಅಲ್ಲಿಯ ದಲಿತರಿಗೆ ಪರ್ಯಾಯಾ ಭೂಮಿ ಒದಗಿಸಬೇಕು. ಹಾಲಿಹಾಳ ಗ್ರಾಮದಲ್ಲಿ ದಲಿತರಿಗೆ ಮನೆಗೆ ಹಾದು ಹೋಗಲು ರಸ್ತೆಯನ್ನು ಒದಗಿಸಿಕೊಡಬೇಕು.
ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತರು ಅನುದಾನ ದುರ್ಬಳಕ್ಕೆ ಆಗಿದ್ದು, ಈ ಕೂಡಲೇ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಯಶೋಧಾ ಮೇಲಿನಕೇರಿ, ರವಿ ಮ್ಯಾಗೇರಿ, ಶಿವಾನಂದ ಮೂರಮಾನ, ಮಂಜುನಾಥ ಎಂಟಮಾನ, ರಾಜಕುಮಾರ ಸಿಂಧಗೇರಿ, ರವಿಚಂದ್ರ ಚಲವಾದಿ, ಲಕ್ಷ್ಮಣ ಹಾಲಿಹಾಳ, ಚಂದ್ರಶೇಖರ ಕೆಳಗಿನಮನಿ, ಸಂತೋಷ ಟಕ್ಕೆ, ಸಿದ್ದು ಬಾರಿಗಿಡದ, ಸುಭದ್ರಾ ಮೇಲಿನಮನಿ, ಚಂದ್ರಕಲಾ ಮಸಳಿಕೇರಿ ಮಹಿಳಾ ತಾಲೂಕ ಸಂಚಾಲಕರು ಮತ್ತಿತರರು ಉಪಸ್ಥಿತರಿದ್ದರು.