ಖಾಲಿ ಚೊಂಬು, ತೆಂಗಿನಕಾಯಿ ಚಿಪ್ಪು ಕೊಟ್ಟ ಕೇಂದ್ರ
ಸಂಜೆವಾಣಿ ನ್ಯೂಸ್
ಮೈಸೂರು: ಜು.೨೫:- ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳನ್ನು ಸಂಪೂರ್ಣ ಕಡೆಗಣಿಸಿದ್ದು, ಕರ್ನಾಟಕಕ್ಕೆ ಖಾಲಿ ಚೊಂಬು, ತೆಂಗಿನಕಾಯಿ ಚಿಪ್ಪು ನೀಡಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವ್ಯಂಗ್ಯವಾಡಿದರು.
ಬುಧವಾರ ಕಾಂಗ್ರೆಸ್ ಭವನದಲ್ಲಿ ಖಾಲಿ ಚೊಂಬು, ಮೂರು ನಾಮ ಬಳಿದ ತೆಂಗಿನ ಕಾಯಿ ಚಿಪ್ಪುಗಳನ್ನು ಪ್ರದರ್ಶಿಸುತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರು, ಯುವಕರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತ ವಿರೋಧಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದರೂ ಅವುಗಳಿಗೆ ಸ್ಪಂದಿಸಿಲ್ಲ. ರಾಜ್ಯದಿಂದ ಆಯ್ಕೆಯಾದ ಸಂಸದರು, ಸಚಿವರ ಸಭೆ ನಡೆಸಿ ಮಾಡಿಕೊಂಡಿದ್ದ ಮನವಿಯಿಂದಲೂ ಪ್ರಯೋಜನವಾಗಿಲ್ಲ. ಆ ಬಜೆಟ್‌ನಲ್ಲಿ ಕರ್ನಾಟಕದ ಪ್ರಸ್ತಾಪವೇ ಇಲ್ಲ. ಖಾಲಿ ಚೊಂಬು ಹಾಗೂ ತೆಂಗಿನಕಾಯಿ ಚಿಪ್ಪು ನೀಡಿರುವ ಬಿಜೆಪಿಯನ್ನು ರಾಜ್ಯದ ಮತದಾರರು ಬೆಂಬಲಿಸಬೇಕೆ ಎಂಬುದನ್ನು ಇನ್ನಾದರೂ ಯೋಚಿಸಬೇಕು ಎಂದರು.
ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ, ಜೆಡಿಎಸ್‌ನ ೧೯ ಮಂದಿ ಸಂಸದರು ಏನು ಮಾಡುತ್ತಿದ್ದಾರೆ? ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಂದಲೂ ಏನೇನೂ ಪ್ರಯೋಜನವಾಗಿಲ್ಲ. ಮೈಸೂರಿನ ಸಂಸದ ಯದುವೀರ್ ಎಲ್ಲಿದ್ದಾರೆ? ಅವರೂ ಯಾವ ಯೋಜನೆಯನ್ನೂ ತರಲಿಲ್ಲ ಎಂದರು.
ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಯತ್ನ: ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಇಡಿ, ಐಟಿ ಹಾಗೂ ಸಿಬಿಐ ಮೂಲಕ ಪ್ರಯತ್ನಿಸುತ್ತಿರುವ ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಮನಮೋಹನ್ ಸಿಂಗ್ ಅಧಿಕಾರದಿಂದ ಕೆಳಗಿಳಿಯುವವರೆಗೆ ೫೩ ಲಕ್ಷ ಕೋಟಿ ಸಾಲವನ್ನಷ್ಟೆ ಮಾಡಲಾಗಿತ್ತು. ನರೇಂದ್ರ ಮೋದಿ ಸರ್ಕಾರ ೧೦ ವರ್ಷಗಳಲ್ಲಿ ಬರೋಬ್ಬರಿ ೧೮೩ ಲಕ್ಷ ಕೋಟಿ ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿಸಿದೆ ಎಂದು ದೂರಿದರು.
ರಾಜ್ಯದಿಂದ ಪ್ರತಿ ವರ್ಷ ೪.೫೦ ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಕೊಡುತ್ತಿದ್ದೇವೆ. ಆದರೆ, ಈ ಬಜೆಟ್‌ನಲ್ಲಿ ರಾಜ್ಯಕ್ಕೆ ಒಂದು ಯೋಜನೆಯನ್ನೂ ಕೊಟ್ಟಿಲ್ಲ. ಮೋದಿ ಅವರು ಅಧಿಕಾರ ಉಳಿಸಿಕೊಳ್ಳಲು ಮಂಡಿಸಿರುವ ಕುರ್ಚಿ ಬಚಾವೊ ಬಜೆಟ್ ಇದಾಗಿದೆ ಎಂದು ಟೀಕಿಸಿದರು.
ದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಸಂಖ್ಯೆ ೬೭ ಕೋಟಿ ಇದೆ. ಆದರೆ, ಆ ಸಮಾಜದವರಿಗೆ ಕೇವಲ ೫೬ ಸಾವಿರ ಕೋಟಿಯನ್ನಷ್ಟೆ ಕೊಡಲಾಗಿದೆ. ಇದೆಲ್ಲವನ್ನೂ ಪರಿಶಿಷ್ಟರು ಅರ್ಥ ಮಾಡಿಕೊಳ್ಳಬೇಕು. ಜನಸಂಖ್ಯೆಯನ್ನು ಆಧರಿಸಿಯಾದರೂ ಹಣ ಎತ್ತಿಡಬೇಕಿತ್ತು ಎಂದರು.
ಯುವಜನರಿಗೆ ಕೌಶಲ ತರಬೇತಿ ಸೇರಿದಂತೆ ನಮ್ಮ ಪ್ರಣಾಳಿಕೆಯಲ್ಲಿದ್ದ (ನ್ಯಾಯಪತ್ರ) ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ನಕಲು ಮಾಡಿ ಘೋಷಿಸಿದೆ ಎಂದು ದೂರಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮನಕಟ್ಟಿಕೊಡುತ್ತೇವೆ ಎಂದು ಹೇಳಿದೆ. ಆದರೆ ಕೇಂದ್ರ ಸರ್ಕಾರದಿಂದ ೭೨ ಸಾವಿರ ಮಾತ್ರ ಹಣ ಬಿಡುಗಡೆ ಮಾಡುವುದು. ರಾಜ್ಯ ಸರ್ಕಾರ ೧.೩೦ ಲಕ್ಷ ಹಣ ನೀಡುತ್ತದೆ. ಶೇ.೩೨ ಜಿ.ಎಸ್.ಟಿ ಕಟ್ಟಬೇಕು ಇದರಲ್ಲಿ ೩೮ ಸಾವಿರ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಹಾಗಿದ್ದ ಮೇಲೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಉದ್ದೇಶವಾದರು ಏನು ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರುಗಳಾದ ಆರ್.ಅಶೋಕ್, ಸಿ.ಟಿ.ರವಿ, ಯತ್ನಾಳ್ ಎಸ್ಸಿ, ಎಸ್ಟಿಗಳ ಬಗ್ಗೆ ಬಹಳ ಪ್ರೀತಿ ಇರೋರ ಹಾಗೆ ಮಾತನಾಡುತ್ತಾರೆ. ಎಸ್ಸಿ, ಎಸ್ಟಿಗಳಿಗೆ ನಿಮ್ಮ ಸರ್ಕಾರ ಏನು ಮಾಡಿದೆ ಎಂಬುದನ್ನು ಹೇಳಿ. ಕೇಂದ್ರ ಸರ್ಕಾರ ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆ ದೇಶದಲ್ಲೇ ಕೇವಲ ೫೬ ಸಾವಿರ ಕೋಟಿ ಮಾತ್ರ ಮೀಸಲಿಟ್ಟಿದೆ. ಇದು ಎಸ್ಸಿ, ಎಸ್ಟಿಗಳ ಅಭಿವೃದ್ಧಿನಾ? ನಮ್ಮ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯ ಒಂದರಲ್ಲೇ ೪೩ ಸಾವಿರ ಕೋಟಿ ಮೀಸಲಿಟ್ಟಿದೆ. ದೇಶದಲ್ಲಿ ೬೭ ಕೋಟಿಯಷ್ಟಿರುವ ಎಸ್ಸಿ, ಎಸ್ಟಿಗಳಿಗೆ ನೀವು ಇಟ್ಟಿರುವ ಅನುದಾನ ಸಾಕಾಗುತ್ತದೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಿ ಎಂದು ತಿರುಗೇಟು ನೀಡಿದರು.
ಗೋಷ್ಠಿಯಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಎಚ್.ವಿ.ರಾಜೀವ್, ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಬಿ.ಎಂ.ರಾಮು, ಪುಷ್ಪವಲ್ಲಿ, ಕೆ.ವಿ.ಮಲ್ಲೇಶ್, ಟಿ.ಬಿ. ಚಿಕ್ಕಣ್ಣ ಇದ್ದರು.