ದುಬಾರಿ ಶುಲ್ಕ ವಸೂಲಿ: ಸೂಕ್ತ ಕ್ರಮಕ್ಕೆ ಒತ್ತಾಯ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.೨೫: ತಾಲೂಕಿನ ಕೆಲ ಖಾಸಗಿ ಶಾಲೆಗಳು ಸರ್ಕಾರದ ನಿಯಮಗಳನ್ನು ಪಾಲಿಸದೆ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದು ಪೋಷಕರ ಸುಲಿಗೆ ಮಾಡುತ್ತಿರುವ ಶಾಲೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿರುವ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮ್ ರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್ ತಾಲ್ಲೂಕಿನಲ್ಲಿ ಬಹುತೇಕ ಸರ್ಕಾರಿ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಪ್ರತಿವರ್ಷ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಬಡ ಮತ್ತು ಮಧ್ಯಮ ವರ್ಗದ ಪಾಲಕರ ಮಕ್ಕಳಿಗೆ ಸಹಕಾರಿಯಾಗದೇ ವಿಷಕಾರಿಯಾಗುತ್ತಿವೆ.ವ್ಯಾಪಾರದ ಕೇಂದ್ರವನ್ನಾಗಿ ಮಾಡಿ ಅಕ್ಷರಗಳನ್ನು ಆಯಾ ಸಂಸ್ಥೆಯವರು ತಕ್ಕಡಿಯಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಸರ್ಕಾರದ ಸಂವಿಧಾನಾತ್ಮಕ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಸಮರ್ಪಕವಾಗಿ ಜಾರಿಯಾಗದೇ ನೂರಾರು ಸರ್ಕಾರಿ ಶಾಲಾ?ಕಾಲೇಜುಗಳನ್ನು ಮುಚ್ಚಲಾಗುತ್ತಿದೆ ಎಂದು ದೂರಿದರು. ಬಲಿಷ್ಠ ರಾಜಕಾರಣಿಗಳು ಮತ್ತು ಶ್ರೀಮಂತರು ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಪ್ರಾರಂಭಿಸಿದ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಬಡವರ ರಕ್ತ ಹೀರಿ ಜೀವಿಸುತ್ತಿವೆ. ಡೊನೇಷನ್, ದುಬಾರಿ ಶುಲ್ಕ, ಕಿರುಕುಳ, ಕಡಿಮೆ ಅಂಕ ಎಂದು ಮುಗ್ದ ಮಕ್ಕಳ ಪೋಷಕರಿಗೆ ಮಾನಸಿಕ ಹಿಂಸೆ ನೀಡುತ್ತಿವೆ. ವೈಜ್ಞಾನಿಕ ಶಿಕ್ಷಣಕ್ಕೆ ಒತ್ತು ನೀಡದೆ, ವ್ಯಾಪಾರದ ಕೇಂದ್ರಗಳಾಗಿ ಬದಲಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಕೆಲವೊಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಧರ್ಮ, ಜಾತಿ, ಮತ, ಪಂಥಗಳಿಗೆ ಒತ್ತು ಕೊಡುತ್ತ ಅವೈಜ್ಞಾನಿಕವಾಗಿ ಮೌಢ್ಯಗಳನ್ನು ಮಕ್ಕಳಲ್ಲಿ ಬಿತ್ತುತ್ತ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿರುವ ಶಾಲೆಗಳಿಗೆ ಶೀಘ್ರವೇ ಕಡಿವಾಣ ಹಾಕಬೇಕು. ರಾಜ್ಯ ಸರ್ಕಾರವು ಖಾಸಗಿ ಶಾಲೆಗಳೊಂದಿಗೆ ಕೈಜೋಡಿಸದೆ ಸಮಾನ ಶಿಕ್ಷಣದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು.೨೦೨೪-೨೫ ನೇ ಶೈಕ್ಷಣಿಕ ವರ್ಷದಲ್ಲಾದರೂ ಖಾಸಗಿ ಶಾಲೆಗಳ ದುಬಾರಿ ಶುಲ್ಕ ದಂಧೆಯಿಂದ ಪೋಷಕರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ನೀಡಿ ಆಗ್ರಹಿಸಿದರು.
ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಕಾಮನಹಳ್ಳಿ ಮಹೇಶ್, ಕಾರ್ಯಾಧ್ಯಕ್ಷ ಕೆರೆಕೋಡಿ ಆನಂದ, ಉಪಾಧ್ಯಕ್ಷ ಯೋಗೇಶ್, ಶಂಕರ್, ಅರುಣ್, ಶಶಿ, ಶಿವು ಮೋಹನ್, ದಿಲೀಪ್, ಸೇರಿದಂತೆ ಇತರರಿದ್ದರು.