ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಜು.೨೫:- ಶೋಷಿತರು, ದುರ್ಬಲ ವರ್ಗದವರ ಸಮಗ್ರ ಅಭಿವೃದ್ದಿಗೆ ಜಾರಿಗೊಳಿಸಿದ್ದ ಯೋಜನೆಗಳನ್ನು ದುರ್ಬಲಗೊಳಿಸುತ್ತಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಪುರಭವನ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಪ್ರಬುದ್ಧ ಯೋಜನೆ ಜಾರಿಗೊಳಿಸಿ ಸಹಾಯಧನ ನೀಡಿನ ಪರಿಣಾಮವಾಗಿ ಇದುವರೆಗೆ ೯ ದಲಿತ ವಿದ್ಯಾರ್ಥಿಗಳು ವಿದೇಶಿ ವಿವಿಗಳಲ್ಲಿ ಸಂಶೋಧನೆ ನಡೆಸಿದ್ದಾರೆ. ಆದರೆ ಈ ಬೆಳವಣಿಗೆಯನ್ನು ಸಹಿಸದೆ ಯೋಜನೆಯನ್ನು ಮೊಟಕುಗೊಳಿಸಿ ಸಂಶೋಧನಾ ವಿದ್ಯಾಭ್ಯಾಸಕ್ಕೆ ನೀಡುತ್ತಿದ್ದ ಧನಸಹಾಯ ನಿಲ್ಲಿಸಲಾಗಿದೆ. ಅಲ್ಲದೆ ದಲಿತ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಉತ್ತೇಜಿಸುವ ಸಲುವಾಗಿ ಮೆಟ್ರಿಕ್ ನಂತರದ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಶೇ.೬೦ಕ್ಕಿಂತ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹಿಂದಿನ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹಧನಕ್ಕೆ ಕತ್ತರಿ ಹಾಕಿ ದಲಿತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಕಿಡಿ ಕಾರಿದರು.
ಎಸ್‌ಸಿಪಿ, ಟಿಎಸ್‌ಪಿ ಯೋಜನೆಗೆ ಕಾಯ್ದಿರಿಸಿದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಯೋಜನೆಯ ಹಣವನ್ನು ದುರ್ಬಳಕೆ ಮಾಡಿಕೊಂಡ ಒಬ್ಬ ಅಧಿಕಾರಿಯನ್ನೂ ಇದುವರೆಗೆ ಶಿಕ್ಷೆಗೆ ಗುರಿಪಡಿಸಿಲ್ಲ. ಜನವಿರೋಧಿ ಮತ್ತು ಸಂವಿಧಾನವಿರೋಧಿ ಹೊರಗುತ್ತಿಗೆ ಪದ್ಧತಿ ಜಾರಿಗೊಳಿಸಿ ಶೋಷಿತರು ಮತ್ತು ಹಿಂದುಳಿದವರನ್ನು ಸರ್ಕಾರಿ ನೌಕರಿಗಳಿಂದ ದೂರ ಇಡುವ ದುರುದ್ದೇಶವಾಗಿದೆ ಎಂದು ಕಿಡಿಕಾರಿದರು.
ಹಕ್ಕೊತ್ತಾಯಗಳು: ಅನಗತ್ಯ ನಿಬಂಧನೆಗಳನ್ನು ತೆಗೆದುಹಾಕಿ, ಪ್ರಬುದ್ಧ ಯೋಜನೆಯಡಿ ಹಳೇ ನಿಯಮದಂತೆ ಸಂಶೋಧನಾ ವಿದ್ಯಾರ್ಥಿಗಳಿಗೂ ಸಹಾಯಧನ ನೀಡಬೇಕು. ಮೆಟ್ರಿಕ್ ನಂತರದ ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೂ ಆದಾಯ ಮಿತಿ ಕಡ್ಡಾಯಗೊಳಿಸದೇ ಪ್ರೋತ್ಸಾಹಧನ ವಿತರಿಸಬೇಕು. ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆಗೆ ದುರುದ್ದೇಶದಿಂದ ಸೇರ್ಪಡೆ ಮಾಡಿರುವ ಸೆಕ್ಷನ್ ೭ಸಿಯನ್ನು ರದ್ದುಗೊಳಿಸಬೇಕು. ವಾಲ್ಮೀಕಿ ನಿಗಮದ ಹೆಸರಿನಲ್ಲಿ ಲೂಟಿ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸರ್ಕಾರದ ಖಜಾನೆಗೆ ಹಣ ಜಮೆ ಮಾಡಬೇಕು. ಇಡಬ್ಲ್ಯೂಎಸ್ ವರ್ಗಕ್ಕೆ ಆದಾಯ ಮಿತಿ ೮ ಲಕ್ಷ ಇದ್ದು, ಶೋಷಿತರಿಗೆ ೨.೫ ಲಕ್ಷ ನಿಗಧಿಪಡಿಸಿರುವುದನ್ನು ೧೦ ಲಕ್ಷಕ್ಕೆ ಏರಿಸಲು ಕ್ರಮ ಕೈಗೊಳ್ಳಬೇಕು. ಆರ್‌ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ.ಜಾ, ಪ.ಪಂ ಮಕ್ಕಳಿಗೆ ೧೦ನೇ ತರಗತಿವರೆಗೆ ಸರ್ಕಾರವೇ ಶುಲ್ಕ ಪಾವತಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಚಾಲಕ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಕಿರಂಗೂರುಸ್ವಾಮಿ, ಹಾರೋಹಳ್ಳಿ ನಟರಾಜ್, ಶಿವಮೂರ್ತಿ ಶಂಕರಪುರ, ಸಣ್ಣಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.