ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ಖಂಡಿಸಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಜು.೨೫:- ಕೇಂದ್ರ ಸರಕಾರ ಮಂಡಿಸಿರುವ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪ ಅಮರ್‌ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಭವನದ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಡಾ.ಪುಷ್ಪ ಅಮರ್‌ನಾಥ್ ಮಾತನಾಡಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ನಲ್ಲಿ ಕನ್ನಡಿಗರಿಗೆ ಮೋಸವಾಗಿದೆ. ಅದಕ್ಕೆ ಖಾಲಿ ಚೊಂಬು ಹಿಡಿದು ಪ್ರತಿಭಟನೆ ಮಾಡುತ್ತಿದ್ದೇವೆ. ಕರ್ನಾಟಕದ ಯೋಜನೆಗೆ ಕೇಂದ್ರದಿಂದ ಒಂದೇ ಒಂದು ಯೋಜನೆಗೂ ಅನುದಾನ ಕೊಟ್ಟಿಲ್ಲ. ಬಿಜೆಪಿ ಮತ್ತು ಜೆಡಿಎಸ್‌ನಿಂದ ೧೯ ಮಂದಿ ಸಂಸದರಾಗಿ ಆಯ್ಕೆಯಾಗಿದ್ದರೂ ರಾಜ್ಯದ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಕಿಡಿಕಾರಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಜೆಟ್ ಬಗ್ಗೆ ಗುಣಗಾನ ಮಾಡಿದ್ದಾರೆ. ನಮ್ಮ ರಾಜ್ಯಕ್ಕೇನು ಪ್ರಯೋಜನವಾಗಿದೆ ಎಂಬುದರ ಬಗ್ಗೆ ಮಾತನಾಡಲಿ. ಈ ಬಜೆಟ್ ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದೆ. ನೀರು, ಭಾಷೆ, ಅಭಿವೃದ್ಧಿ ವಿಚಾರದಲ್ಲಿ ಒಂದೇ ಒಂದು ರೂಪಾಯಿ ಅನುದಾನ ಇಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಹಲವಾರು ರಾಜ್ಯಕ್ಕೆ ಮೋಸ ಮಾಡಿದ್ದಾರೆ. ಅವರ ಮಿತ್ರ ಪಕ್ಷ ರಾಜ್ಯಗಳಿಗೆ ಮಾತ್ರ ಕೇಂದ್ರ ಬಿಜೆಪಿ ಸರಕಾರ ಅನುದಾನ ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಿಗರಾದ ನಾವು ಸ್ವಾಭಿಮಾನಿಗಳು. ನಮಗೂ ಕೇಂದ್ರ ಸರಕಾರ ಬಜೆಟ್‌ನಲ್ಲಿ ಸರಿಯಾಗಿ ಅನುದಾನ ನೀಡಬೇಕು. ನಮ್ಮ ರಾಜ್ಯದಿಂದ ನಾವು ಹೆಚ್ಚು ತೆರಿಗೆ ಕೊಡುತ್ತೇವೆ. ನಮ್ಮ ತೆರಿಗೆ ನಮ್ಮ ಹಕ್ಕಾಗಿದೆ. ನಮ್ಮಿಂದ ತೆರಿಗೆ ಪಡೆಯುವ ಕೇಂದ್ರ ಸರಕಾರ ರಾಜ್ಯಕ್ಕೇನು ಕೊಟ್ಟಿದೆ? ಬಿಜೆಪಿ-ಜೆಡಿಎಸ್‌ನಿಂದ ಆಯ್ಕೆಯಾದ ಸಂಸದರು ಏನು ಮಾಡುತ್ತಿದ್ದಾರೆ. ಇವರೆಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಮಹಿಳಾ ಉಪಾಧ್ಯಕ್ಷೆ ಪುಷ್ಪವಲ್ಲಿ, ನಗರ ಮಹಿಳಾ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಗ್ರಾಮಾಂತರ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ. ಮಾಜಿ ಮೇಯರ್‌ಗಳಾದ ಮೋದಾಮಣಿ, ಪುಷ್ಪಲತಾ ಜಗನ್ನಾಥ್, ಮುಖಂಡರಾದ ನಾಗರತ್ನ, ಮಂಜುಳಾ, ಸುಶೀಲಾ ನಂಜಪ್ಪ, ಭವ್ಯ, ಇಂದ್ರ, ರಾಧಾಮಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.