ಸಿದ್ದರಾಮಯ್ಯ ನಿವೇಶನಗಳನ್ನು ಸರೆಂಡರ್ ಮಾಡಲಿ
ಸಂಜೆವಾಣಿ ನ್ಯೂಸ್
ಮೈಸೂರು: ಜು.೨೫:- ಸಿಎಂ ಸಿದ್ದರಾಮಯ್ಯ ಅವರ ಮೇಲಿನ ಕಾಳಜಿ, ಗೌರವದಿಂದ ಮುಡಾದಿಂದ ೫೦:೫೦ ಅನುಪಾತದಡಿ ಪಡೆದುಕೊಂಡ ನಿವೇಶನಗಳನ್ನು ಸೆರೆಂಡರ್ ಮಾಡಿ ಎಂದು ಸಲಹೆ ಕೊಟ್ಟಿದ್ದೆ. ಅದನ್ನು ಅರ್ಥ ಮಾಡಿಕೊಳ್ಳದ ಮುಡಾ ಅಧ್ಯಕ್ಷ ಕೆ.ಮರೀಗೌಡನಂತಹ ಬಕ್ರಾಗಳನ್ನು ತಮ್ಮ ಜೊತೆಯಲ್ಲಿಟ್ಟುಕೊಂಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದರು.
ನಗರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಒಂದೂವರೆ ತಿಂಗಳು ತಲೆ ಮರೆಸಿಕೊಂಡಿದ್ದ ಮರೀಗೌಡ. ಅಂತಹ ವ್ಯಕ್ತಿಯನ್ನು ಈಗ ಮುಡಾ ಅಧ್ಯಕ್ಷನನ್ನಾಗಿ ಮಾಡಿದ್ದೀರಾ. ಅವನೊಬ್ಬ ಬಕ್ರಾ ಎಂದು ಟೀಕಿಸಿದರು.
ನಾನು ಎರಡು ಬಾರಿ ಸಂಸದನಾಗಿದ್ದೆ. ಜಿ-ಕೆಟಗರಿ ಸೈಟ್‌ನಲ್ಲಿ ಕಾನೂನಾತ್ಮಕ ಸಿಆರ್ ಕೊಡಿ ಎಂದು ಕೇಳಿದ್ದೆ. ಜುಜುಬಿ ಶೇ.೨೫ರಷ್ಟು ದಂಡ ಉಳಿಸಲು ಹೋಗಿಲ್ಲ. ಕಾನೂನು ರೀತಿ ಇಲ್ಲವೆಂದು ನಾನೇ ಮುಡಾ ಆಯುಕ್ತರಿಗೆ ಹೇಳಿ ರದ್ದು ಮಾಡಿಸಿದ್ದೆ. ನಾನು ಕಟ್ಟಬೇಕಿರುವುದು ಸಾವಿರ, ಒಂದೆರಡು ಲಕ್ಷ ರೂಪಾಯಿ ದಂಡ. ಅದಕ್ಕೂ ಮುಡಾದ ಕೋಟ್ಯಾಂತರ ರೂಪಾಯಿ ೫೦:೫೦ ಅನುಪಾತದಡಿ ನಿವೇಶನ ಹಂಚಿಕೆ ಹಗರಣಕ್ಕೂ ಏನು ಸಂಬಂಧ? ಇಂತಹ ತಿಳಿಗೇಡಿ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದರು.
ಕನಿಷ್ಠ ಜ್ಞಾನವಿಲ್ಲದ ಮರೀಗೌಡ ಒಬ್ಬ ಬಕ್ರಾ. ಇಂತಹ ಬಕ್ರಾಗಳಿಂದಲೇ ಸಿಎಂಗೆ ಕೆಟ್ಟ ಹೆಸರು ಬರುತ್ತಿದೆ. ಸಿಆರ್ ಕಾನೂನು ರೀತಿ ಇಲ್ಲದ ಕಾರಣ ನಾನೇ ಅದನ್ನು ರದ್ದುಮಾಡಿಸಿಕೊಂಡಿದ್ದೇನೆ. ಈ ಪ್ರಕರಣಕ್ಕೂ-ಮೂರ್ನಾಲ್ಕು ಸಾವಿರ ಕೋಟಿ ರೂ. ಹಗರಣಕ್ಕೂ ಸಂಬಂಧವಿಲ್ಲ. ಸಂಬಂಧವೇ ಇಲ್ಲದ ವಿಚಾರವನ್ನು ಇನ್ನೊಂದಕ್ಕೆ ಹೋಲಿಸಬಾರದು ಎಂಬ ಸಣ್ಣ ಪ್ರಮಾಣದ ಕನಿಷ್ಠ ತಿಳಿವಳಿಕೆ ಇಲ್ಲದ ತಿಳಿಗೇಡಿ ಎಂದು ಕಿಡಿಕಾರಿದರು.
ಸಿಎಂ ಅವರೇ ನಿಮಗೆ ಬಂದಿರುವ ನಿವೇಶನವನ್ನು ಮುಡಾಕ್ಕೆ ವಾಪಸ್ ಕೊಡಿ. ೪೦ ವರ್ಷಗಳ ಸಿದ್ದರಾಮಯ್ಯ ಅವರ ರಾಜಕಾರಣ ನೋಡಿದರೆ ಅವರನ್ನು ಭ್ರಷ್ಟ ಎನ್ನಲು ಸಾಧ್ಯವಿಲ್ಲ. ಆದರೆ, ಈಗ ಸಿದ್ದರಾಮಯ್ಯನವರ ಬಗ್ಗೆಯೂ ಅನುಮಾನ ಶುರುವಾಗಿದೆ. ನಿವೇಶನ ವಾಪಸ್ ಕೊಟ್ಟು ತನಿಖೆ ಮಾಡಿಸಿ. ಇಲ್ಲದಿದ್ದರೆ ಸಿಎಂ ಕುಟುಂಬದ ಕೇಸ್ ಇಟ್ಟುಕೊಂಡು ಹಲವರು ಬಚಾವ್ ಆಗಲಿದ್ದಾರೆ. ೪೦ ವರ್ಷಗಳಲ್ಲಿ ಕಳಂಕ ಅಂಟಿಸಿಕೊಳ್ಳದಿರುವ ನೀವು ಇದ್ಯಾವುದೋ ೧೬ ಸೈಟುಗಳಿಗೋಸ್ಕರ ಕಳಂಕ ಅಂಟಿಸಿಕೊಳ್ಳುತ್ತಿದ್ದೀರಿ. ಇದು ನಿಮಗೆ ಬೇಕಾ ಎಂದು ಪ್ರಶ್ನಿಸಿದರು.
ಮುಂದಿನ ಮೂರೂವರೆ ವರ್ಷಗಳ ಕಾಲ ನೀವೆ ಸಿಎಂ ಆಗಿ ಇರುತ್ತೀರಾ. ಇಡೀ ಮೂರುವರೆ ವರ್ಷಗಳ ಕಾಲ ಇದೇ ಆರೋಪಕ್ಕೆ ತುತ್ತಾಗುತ್ತೀರಿ. ನೊಣ ತಿಂದು ಜಾತಿ ಕೆಡಿಸಿಕೊಳ್ಳುವುದು ಬೇಡ ಎಂದರು.
ರಾಜ್ಯದಲ್ಲಿ ಈ ಹಿಂದೆ ಸಿಎಂ ಆಗಿದ್ದವರ ಆಸ್ತಿ ನೋಡಿದರೆ ಸಿದ್ದರಾಮಯ್ಯನವರ ಆಸ್ತಿ ಏನೂ ಅಲ್ಲ. ಮುಡಾ ಹಗರಣವನ್ನು ಜಸ್ಟಿಸ್ ಎನ್.ಸಂತೋಷ್ ಹೆಗ್ಡೆ, ಕುಮಾರ್ ಅವರಂತಹ ವ್ಯಕ್ತಿಗಳಿಂದ ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದರು.
ಮುಡಾದಲ್ಲಿ ಒಂದು ಸೈಟ್ ಪಡೆದಿಲ್ಲ:
ಕೆ.ಮರೀಗೌಡ ಒಬ್ಬ ದಡ್ಡ ಶಿಖಾಮಣಿ. ನಾನು ಮುಡಾದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಒಂದು ಸೈಟ್ ಕೊಡಿಸಿದ್ದರೆ, ತೆಗೆದುಕೊಂಡಿದ್ದರೆ ತೋರಿಸಲಿ. ನಾನು ಮುಡಾಕ್ಕೆ ಯಾವತ್ತೂ ವ್ಯವಹಾರಕ್ಕೆಂದು ಹೋಗಿಲ್ಲ. ಪಾಲಿಟಿಕ್ಸ್‌ನಲ್ಲಿ ಮುಂದೆ ಏನು ಮಾಡುತ್ತೇವೆ ಎಂಬುದನ್ನು ಹೇಳಬಾರದು. ಹೇಳಿದರೆ ಕೆಲವರು ಅದಕ್ಕೂ ಬೇರೆ ಸ್ಕೀಂ ಹಾಕಿ ಬಿಡುತ್ತಾರೆ. ತಾಯಿ ಚಾಮುಂಡೇಶ್ವರಿ ನನಗೆ ಮುಂದಿನ ದಾರಿ ತೋರಿಸುತ್ತಾಳೆ. ನಾನು ಜನರಿಂದ ತಿರಸ್ಕೃತನಾದ ವ್ಯಕ್ತಿಯಲ್ಲ. ಏನೋ ಕೆಲವರಿಂದ ಟಿಕೆಟ್ ಕೈತಪ್ಪಿತು. ಹಾಗೆಂದು ಇದೇ ಅಂತಿಮವಲ್ಲ. ಸಿದ್ದರಾಮಯ್ಯ ಮೂರೂವರೆ ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ಅವರ ಹಿಂಬಾಲಕರು ಹೇಳುತ್ತಿರುತ್ತಾರೆ. ಹೀಗಾಗಿ, ನಾನು ಸಹ ಅದನ್ನು ಹೇಳಿದೆ ಅಷ್ಟೇ ಎಂದು ನುಡಿದರು.