ಶೈಕ್ಷಣಿಕ ಜೀವನದಲ್ಲಿ ಪರಿಶ್ರಮದ ಕಲಿಕೆ ಇದ್ದರೆ ಮಾತ್ರ ಸಾಧನೆಯ ಗುರಿ ತಲುಪಬಹುದು
ಸಂಜೆವಾಣಿ ನ್ಯೂಸ್
ಮೈಸೂರು:ಜು.೨೫:- ಶೈಕ್ಷಣಿಕ ಜೀವನದಲ್ಲಿ ಪರಿಶ್ರಮದ ಕಲಿಕೆ ಇದ್ದರೆ ಮಾತ್ರ ಸಾಧನೆಯ ಗುರಿ ತಲುಪಬಹುದು ಎಂದು ಚಾಮರಾಜನಗರ ಆರಾಧ್ಯ ಟ್ರಸ್ಟ್ ಅಧ್ಯಕ್ಷರಾದ ಅಗರ ರಾಮಾರಾಧ್ಯ ತಿಳಿಸಿದರು.
ನಗರದ ಚಾಮುಂಡಿಪುರಂ ಬಳಿ ಇರುವ ಆರಾಧ್ಯ ಮಹಾಸಭಾ ಸಭಾಂಗಣದಲ್ಲಿ ಉಮಾ ಮಹೇಶ್ವರ ಹಾಗೂ ಪಂಚಾಚಾರ್ಯರ ದೇವಸ್ಥಾನ ವತಿಯಿಂದ ನಡೆದ ೨೦೨೩ – ೨೪ನೇ ಸಾಲಿನ ಎಸ್‌ಎಸ್‌ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಯಾವುದೇ ಕ್ಷೇತ್ರದಲ್ಲಿ ಸಾಧನೆಯ ಗುರಿ ತಲುಪಬೇಕಾದರೆ ನಮ್ಮಲ್ಲಿ ಆತ್ಮವಿಶ್ವಾಸವಿರಬೇಕು ಎಂದು ತಿಳಿಸಿ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನ ಮತ್ತಷ್ಟು ಉನ್ನತವಾಗಿರಲಿ ಎಂದು ಶುಭ ಕೋರಿದರು.
ನಿವೃತ್ತ ಉಪನ್ಯಾಸಕರಾದ ಹೆಗ್ಗಡಹಳ್ಳಿ ಗುರುಮಠದ ನಾಗಭೂಷಣಾರಾಧ್ಯ ಅವರು ಮಾತನಾಡಿ ಉತ್ತಮ ಬಾಂಧವ್ಯದ ಜೀವನದಿಂದ ಪ್ರೀತಿ ವಿಶ್ವಾಸ ಬೆಳೆದಾಗ ಕುಟುಂಬದ ಅಭಿವೃದ್ಧಿ ಸಾಧ್ಯ, ಹಣದಿಂದ ಎಲ್ಲವನ್ನೂ ಕೊಂಡುಕೊಳ್ಳಲು ಸಾಧ್ಯವಿಲ್ಲ ಸ್ವಂತ ಪರಿಶ್ರಮ ಇದ್ದಾಗ ಮಾತ್ರ ಸಾಧನೆಯ ಗುರಿ ತಲುಪಬಹುದು ಎಂದರು.
ನಿವೃತ್ತ ತಹಶೀಲ್ದಾರ್ ಡಿ.ಎಸ್ ಶಿವಕುಮಾರಸ್ವಾಮಿ ಅವರು ಮಾತನಾಡಿ ಆರಾಧ್ಯ ಜನಾಂಗಕ್ಕೆ ತನ್ನದೇ ಆದ ಇತಿಹಾಸವಿದ್ದು ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಸಮಾಜದ ವಿದ್ಯಾರ್ಥಿಗಳು ಉತ್ತಮ ಕಲಿಕೆಯ ಮೂಲಕ ಉನ್ನತ ಹುದ್ದೆ ಅಲಂಕರಿಸುತ್ತಿರುವುದು ಶ್ಲಾಘನೀಯ ಎಂದರು.
ಆರಾಧ್ಯ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಎ.ಎನ್ ವಿಶ್ವಾರಾಧ್ಯ, ದೇವಸ್ಥಾನ ಸಮಿತಿ ಅಧ್ಯಕ್ಷರಾದ ಸೋಮಶೇಖರಾರಾಧ್ಯ ಅವರು ಮಾತನಾಡಿ ಸಮಾಜದ ಅಭಿವೃದ್ಧಿಗೆ ಎಲ್ಲರು ಸಹಕರಿಸುವಂತೆ ಕೋರಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಆರಾಧ್ಯ ಮಹಾಸಭಾ ಗೌರವಾಧ್ಯಕ್ಷರಾದ ವಿಜಯಸ್ವಾಮಿ ಮತ್ತು ಅವರ ಪತ್ನಿ ಗಾಯತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು, ಮಂಡ್ಯ ಜಿಲ್ಲೆ ಹೆಚ್.ಮಲ್ಲಿಗೆರೆಯ ಸುಮಿತ್ರಮ್ಮ ರಾಮರಾಧ್ಯರ ಮಗಳು ದಿವಂಗತ ಉಷಾ ರಾಣಿ (ಉಪನ್ಯಾಸಕಿ) ಇವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು,
ಪಿರಿಯಪಟ್ಟಣ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ, ಪತ್ರಕರ್ತ ಗಿರೀಶ್ ಆರಾಧ್ಯ ಸೇರಿದಂತೆ ಸಮಾಜದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು, ಈ ಸಂದರ್ಭ ಆರಾಧ್ಯ ಮಹಾಸಭಾ ಕಾರ್ಯದರ್ಶಿ ಟಿ.ಎನ್ ಮಹೇಶ್ವರರಾಧ್ಯ, ಸಹ ಕಾರ್ಯದರ್ಶಿ ಚನ್ನವೀರಣ್ಣರಾಧ್ಯ, ಖಜಾಂಚಿ ಶಶಿ ಶೇಖರ್, ನಿರ್ದೇಶಕರಾದ ನಂಜುಂಡರಾಧ್ಯ, ನಾಗರತ್ನಮ್ಮ ಮತ್ತಿತರರಿದ್ದರು.