ಸಚಿವ ಸಿ.ಆರ್.ಎಸ್ ಕುರಿತು ವ್ಯಂಗ್ಯ: ಸಿ.ಆರ್.ರಮೇಶ್ ಖಂಡನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.29: ಕಾವೇರಿ ಆರತಿ ಅಧ್ಯಯನ ಪ್ರವಾಸ ಕೈಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕುರಿತು ವ್ಯಂಗ್ಯವಾಗಿ ಮಾತನಾಡಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ನಿಲುವನ್ನು ತಾಲೂಕು ಕಾಂಗ್ರೆಸ್ ಉಸ್ತುವಾರಿ ಸಿ.ಆರ್.ರಮೇಶ್ ಖಂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಿಂದ ಹತಾಶರಾಗಿರುವ ಪ್ರತಿ ಪಕ್ಷದ ನಾಯಕರು ಕಾಂಗ್ರೆಸ್ ಸಚಿವರ ಪ್ರತಿಯೊಂದು ಪ್ರಗತಿದಾಯಕ ಕೆಲಸಗಳನ್ನು ಹಳದಿ ಕಣ್ಣುಗಳಿಂದ ನೋಡುತ್ತಿದ್ದಾರೆಂದರು.
ಸರ್ಕಾರಿ ಹಣದಲ್ಲಿ ಮೋಜು-ಮಸ್ತಿ ಮಾಡುವ ಪ್ರವೃತ್ತಿ ಬಿಜೆಪಿಗರದ್ದು. ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಡಬೇಕು. ಬಿಜೆಪಿಗರು ಮಾತ್ರ ಹಿಂದುಗಳಲ್ಲ. ದೇಶದಲ್ಲಿರುವ ಬಹುಪಾಲು ಜನರು ಹಿಂದುಗಳೇ ಎಂಬುದನ್ನು ಬಿಜೆಪಿಗರು ಮರೆತಿದ್ದಾರೆ. ಧರ್ಮ ಧರ್ಮಗಳ ನಡುವೆ ಮತ್ತು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿರುವ ಬಿಜೆಪಿಗರು ದೇಶವನ್ನು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಒಗ್ಗೂಡಿಸುವ ಬದಲು ವಿಭಜನೆ ಮಾಡಲೊರಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.
ಹಿಂದುಗಳ ಆಚಾರ-ವಿಚಾರಗಳ ಬಗ್ಗೆ ಕಾಂಗ್ರೆಸ್ಸಿಗರು ಇವರಿಂದ ಪಾಠ ಕಲಿಯಬೇಕಿಲ್ಲ. ದೇಶಕ್ಕೆ ಸ್ವಾತಂತ್ರ?ಯ ಬರುವ ಮೊದಲೆ ಕಾಂಗ್ರೆಸ್ ಪಕ್ಷ ಉದಯವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಟೀಕಿಸುವ ಮುನ್ನ ಮಂಡ್ಯ ಜಿಲ್ಲೆಗೆ ಆರ್.ಅಶೋಕ್ ಕೊಡುಗೆ ಏನೆಂಬುದನ್ನು ತಿಳಿಸಲಿ. ಈ ಹಿಂದಿನ ಬಿಜೆಪಿ ಸರ್ಕರದ ಅವಧಿಯಲ್ಲಿ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಬಿಜೆಪಿಗರು ರೂಪಿಸಿ ಜಾರಿಗೆ ತಂದಿರುವ ಅಭಿವೃದ್ದಿ ಕಾಮಗಾರಿಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ ಸಿ.ಆರ್.ರಮೇಶ್
ಉತ್ತರ ಭಾರತಕ್ಕೆ ಗಂಗಾ ನದಿ ಎಷ್ಟು ಮುಖ್ಯವೋ ಹಾಗೆಯೇ ದಕ್ಷಿಣ ಭಾರತಕ್ಕೆ ಕಾವೇರಿ ನದಿ ಅಷ್ಟೇ ಮುಖ್ಯ ಎಂಬುದನ್ನು ಮರೆತು ಬಿಜೆಪಿ ಅಧಿಕಾರವಿರುವ ಉತ್ತರ ಭಾರತದ ಪರವಾಗಿ ಆರ್.ಅಶೋಕ್ ಮಾತನಾಡುತ್ತಿದ್ದಾರೆ. ಅವರಿಗೆ ಕಾವೇರಿ ಆರತಿ ಮಾಡುವುದು ಬೇಡವಾಗಿದೆ. ಕಾಂಗ್ರೆಸ್ ಸರ್ಕಾರಕ್ಮೆ ಹೆಸರು ಬರಲಿದೆ ಎಂಬ ಭಯದಿಂದ ಕಾಮಾಲೆ ಕಣ್ಣಿನವರಿಗೆ ಎಲ್ಲವೂ ಹಳದಿ ಎಂಬಂತೆ ಒಳ್ಳೆಯ ಕೆಲಸಕ್ಕೆ ಕೆಸರೆರಚಲು ಹೊರಟಿದ್ದಾರೆ ಎಂದು ರಮೇಶ್ ದೂರಿದರು.