ಅ.01ರಂದು ಧರಣಿ ಸತ್ಯಾಗ್ರಹ: ಮರಿಸ್ವಾಮಿ
ಸಂಜೆವಾಣಿ ವಾರ್ತೆ
ತಿ.ನರಸೀಪುರ.ಸೆ.29:– ನಿವೃತ್ತ ಸರ್ಕಾರಿ ನೌಕರರ ಬೇಡಿಯ್ಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರದ ಗಮನವನ್ನು ಸೆಳೆಯಲು ಕರ್ನಾಟಕ ನಿವೃತ್ತ ನೌಕರರ ವೇದಿಕೆಯಡಿ ಅ.1ರ ಮಂಗಳವಾರ ವಿಶ್ವ ಹಿರಿಯ ನಾಗರಿಕರ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಒಂದು ದಿನ ನಿವೃತ್ತ ನೌಕರರು ಕಪ್ಪು ಪಟ್ಟಿ ಧರಿಸಿ ಧರಣಿ ಸತ್ಯಾಗ್ರಹ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಹಾಗೂ ನಿಕಟ ಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಶನಿವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಏಳನೇ ವೇತನ ಆಯೋಗ ಲೆಕ್ಕಾಚಾರದ ಅನುಸಾರ 2022ರ ಜು.1 ರಿಂದ 2024 ರ ಜು.31 ರವರೆ ನಿವೃತ್ತರಾದ ಸರ್ಕಾರಿ ನೌಕರರಿಗೆ ಡಿಸಿ ಆರ್ ಜಿ, ಕಮ್ಯುಟೇಷನ್, ಗಳಿಕೆ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಬೇಕೆಂದು ಈಗಾಗಲೇ ಹೋರಾಟವನ್ನು ಆರಂಭಿಸಿರುವುದರಿಂದ ಮುಂದುವರೆದ ಭಾಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಡಿ.ಮಾದಪ್ಪ ಮಾತನಾಡಿ, ನಮ್ಮೆಲ್ಲರ ನ್ಯಾಯಯುತ ಬೇಡಿಕೆಗಳನ್ನ ರಾಜ್ಯ ಸರ್ಕಾರ ಈಡೇರಿಸಿ, ನೋವುಗಳಿಗೆ ಸ್ಪಂದಿಸಬೇಕೆಂದು ಕಳೆದ ಸೆ.19 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸರಿಸುಮಾರು 12,000 ನಿವೃತ್ತ ನೌಕರರ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಸಮಾವೇಶವನ್ನು ನಡೆಸಿದ್ದೇವೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಂಸದರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಮೂಲಕ ಮುಖ್ಯಮಂತ್ರಿಗಳಿಗೆ ಮನೆ ಪತ್ರವನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಬೇಡಿಕೆ ನೀಡಿರುವವರೆಗೂ ನಿವೃತ್ತ ನೌಕರರು ಹೋರಾಟದಿಂದ ವಿರಮಿಸುವ ಪ್ರಶ್ನೆಯೇ ಇಲ್ಲ. ರಾಜ್ಯ ಸರ್ಕಾರ ಹಾಗೂ ಮುಖ್ಯ ಮಂತ್ರಿಗಳು ನಮ್ಮ ಬೇಡಿಕೆಯನ್ನು ಪರಿಗಣಿಸಿ, ಪರಿಹರಿಸಬೇಕು. ಹೋರಾಟವನ್ನು ತೀವ್ರ ಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕರಾದ ರಾಜೇಂದ್ರಪ್ಪ, ಎಸ್.ವಿ.ಕುಮಾರ್, ನಾಗಯ್ಯ, ಮಂಜುನಾಥ್, ರಾಜಯ್ಯ, ಶ್ರೀಕಂಠಮೂರ್ತಿ, ರಾಜಮ್ಮ ಹಾಗೂ ಸಣ್ಣಮದಪ್ಪ ಇದ್ದರು.