ಅಧಿಕಾರಿ ಪರವಾಗಿ ಸಹಿ ಮಾಡಿ ವಂಚನೆ: ದೂರು ದಾಖಲು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.29:- ಅಧಿಕಾರಿ ಕರ್ತವ್ಯನಿರತನಾಗಿದ್ದರೂ ಅವರ ಪರವಾಗಿ ಅಧೀನ ಸಿಬ್ಬಂದಿ ಸಹಿ ಮಾಡಿ ವಂಚಿಸಿರುವ ಪ್ರಕರಣ ಪಟ್ಟಣದ ಪುರಸಭೆಯಲ್ಲಿ ನಡೆದಿದ್ದು ಅಧೀನ ಸಿಬ್ಬಂದಿ ವಿರುದ್ಧ ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಸೇರಿ ಹಲವು ಇಲಾಖೆ ಮುಖ್ಯಸ್ಥರಿಗೆ ದೂರು ಸಲ್ಲಿಸಿದ್ದಾರೆ.
ಪುರಸಭೆಯ ಮುಖ್ಯಾಧಿಕಾರಿ ರಾಜು ಕೆ.ವಠಾರ ಪ್ರಕರಣ ಸಂಬಂಧ ಲೋಕಾಯುಕ್ತ ಪೆÇಲೀಸ್ ಮತ್ತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪುರಸಭಾ ಕಚೇರಿಯ ಅಧೀನ ಸಿಬ್ಬಂದಿ ಕಚೇರಿ ವ್ಯವಸ್ಥಾಪಕಿ ಕಾಂಚನಾ ಹಾಗು ಕಂದಾಯ ಅಧಿಕಾರಿ ರವಿಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.
ಮಂಡ್ಯ ನಗರ ಮತ್ತು ಗ್ರಾಮಾಂತರ ಯೋಜನೆಯ ಸಹಾಯಕ ನಿರ್ದೇಶಕ ಹಾಗೂ ಉಪ ನೋಂದಣಾಧಿಕಾರಿಗಳಿಗೆ ಈ ಇಬ್ಬರು ಸಿಬ್ಬಂದಿ ಸಹಿ ಹಾಕಿರುವ ಕಡತಗಳನ್ನು ರದ್ದು ಮಾಡಿ, ಮುಖ್ಯಾಧಿಕಾರಿ ಸಹಿ ಹಾಕಿರುವ ಕಡತಗಳನ್ನು ಮಾತ್ರ ಪರಿಗಣಿಸುವಂತೆ ಮನವಿ ಸಲ್ಲಿಸಿದ್ದಾರೆ.
ಈ ಇಬ್ಬರು ಸಿಬ್ಬಂದಿ ರೂಪಾರೇಖಾ ನಕ್ಷೆ ಪ್ರಮಾಣ ಪತ್ರ ಕೋರಿ ಬಂದಿದ್ದ ಅರ್ಜಿಗಳನ್ನು ತಾನು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ ಈ ಇಬ್ಬರು ಸಿಬ್ಬಂದಿ ನನಗೆ ತಿಳಿಯದ ರೀತಿ ನನ್ನ ಪರವಾಗಿ ಸಹಿ ಮಾಡಿ ನಗರ ಮತ್ತು ಗ್ರಾಮಾಂತರ ಯೋಜನೆಯ ಸಹಾಯಕ ನಿರ್ದೇಶಕರಿಗೆ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಸದ್ಯ 8 ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಂದಾಯ ಅಧಿಕಾರಿ 06 ಹಾಗೂ ಕಚೇರಿ ವ್ಯವಸ್ಥಾಪಕಿ 02 ಕಡತಗಳಿಗೆ ಅಕ್ರಮವಾಗಿ ಸಹಿ ಹಾಕಿದ್ದಾರೆ. ಇದರ ಜೊತೆಗೆ ಮತ್ತಷ್ಟು ಪ್ರಕರಣಗಳು ನಡೆದಿರುವ ಶಂಕೆ ಇದೆ. ಅದನ್ನೂ ಪರೀಶೀಲಿಸಬೇಕಿದೆ. ಆದ್ದರಿಂದ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ನನ್ನ ಪರವಾಗಿ ಸಹಿ ಮಾಡಿ ಕಳಿಸಿರುವ ಅರ್ಜಿಗಳನ್ನು ತಡೆ ಹಿಡಿಯಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮುಖ್ಯಾಧಿಕಾರಿ ರಾಜು ಕೆ.ವಠಾರ ಮೂರು ತಿಂಗಳ ಹಿಂದಷ್ಟೆ ಕೆ.ಆರ್.ಪೇಟೆ ಪುರಸಭೆ ಮುಖ್ಯಾಧಿಕಾರಿಯಾಗಿ ನೇಮಕಗೊಂಡಿದ್ದು, ಈ ವೇಳೆಯಲ್ಲಿ ಅಕ್ರಮ ನಡೆದಿದ್ದು ತಕ್ಷಣ ಬಯಲಾಗಿದೆ. ಇದಕ್ಕಿಂತ ಮೊದಲು ಎಷ್ಟು ಕಡತಗಳಿಗೆ ಈ ರೀತಿ ಸಹಿ ಮಾಡಿದ್ದಾರೆ ಎಂಬುದು ತನಿಖೆಯಿಂದಷ್ಟೆ ಬೆಳಕಿಗೆ ಬರಬೇಕಿದೆ. ಈ ಹಿಂದೆ ಕೂಡ ಅಧಿಕಾರಿಗಳ ಸಹಿಯನ್ನು ನಕಲು ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿರುವುದನ್ನು ಸ್ಮರಿಸಬಹುದು.