ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಆರೋಗ್ಯ ಶಿಬಿರಗಳು ಅತ್ಯವಶ್ಯಕ: ಎಚ್.ಎಂ. ಗಣೇಶ್‍ಪ್ರಸಾದ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ. 29– ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಸಹಕಾರಿಯಾಗಿವೆ. ಹರವೆ ಭಾಗದಲ್ಲಿ ಈ ಶಿಬಿರ ನಡೆಯುತ್ತಿರುವುದು ಸಂತಸವಾಗಿದೆ ಎಂದು ಗುಂಡ್ಲುಪೇಟೆ ಶಾಸಕ ಎಚ್.ಎಸ್. ಗಣೇಶ್ ಪ್ರಸಾದ್ ತಿಳಿಸಿದರು.
ತಾಲೂಕಿನ ಹರವೆ ಶ್ರೀ ಚನ್ನಬಸವೇಶ್ವರ ವಿದ್ಯಾಸಂಸ್ಥೆಯ ಅವರಣದಲ್ಲಿ ನಡೆದ ಮೈಸೂರಿನ ಜೆಎಸ್‍ಎಸ್ ಅಸ್ಪತ್ರೆ, ಹರವೆ ಶ್ರೀ ಚನ್ನಬಸವೇಶ್ವರ ಪ್ರತಿಷ್ಠಾನ, ಮೈಸೂರಿನ ಶ್ರೀ ಚಾಮರಾಜೇಶ್ವರಿ ಅಕ್ಕನ ಬಳಗ, ಐಎಲ್‍ವೈಎಫ್ ಮೈಸೂರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅನೇಕ ವರ್ಷಗಳಿಂದ ಮೈಸೂರಿನ ಜೆಎಸ್‍ಎಸ್ ಅಸ್ಪತ್ರೆ ಹಾಗೂ ಹರವೆ ಶ್ರೀಗಳ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯುತ್ತಿದೆ. ಸಾವಿರಾರು ಮಂದಿ ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ರೈತರು ಹಾಗೂ ಕೂಲಿಕಾರ್ಮಿಕರು ತಮ್ಮ ದೈನಂದಿನ ಕಾರ್ಯ ಒತ್ತಡಗಳ ನಡುವೆಯು ತಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು. ಸ್ವಲ್ವದರಲ್ಲಿಯೇ ತಪಾಸಣೆ ಮಾಡಿಸಿಕೊಂಡು ಸಲಹೆ ಸೂಚನೆಗಳನ್ನು ಪಡೆದು ಔಷೋದೋಪಾರ ಮಾಡಿಸಿಕೊಂಡರೆ, ದೊಡ್ಡ ಆಸ್ಪತ್ರೆಗಳಿಗೆ ಹೋಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಶಿಬಿರದಲ್ಲಿ ತಜ್ಞ ವೈದ್ಯರ ತಂಡವೇ ನಮ್ಮ ಗ್ರಾಮಕ್ಕೆ ಬಂದಿದೆ. ಉಚಿತವಾಗಿ ಇಸಿಜಿ, ರಕ್ತ ಪರೀಕ್ಷೆ, ಶುಗರ್ ಇತರೇ ಪರೀಕ್ಷೆಗಳನ್ನು ಮಾಡುತ್ತಾರೆ. ನಂತರ ವೈದ್ಯರು ತಮಗೆ ಆಗುತ್ತಿರುವ ತೊಂದರೆಗಳಿಗೆ ಸೂಕ್ತ ಔಷಧಿಗಳನ್ನು ನೀಡಿ ಗುಣಪಡಿಸುತ್ತಾರೆ. ತಾವುಗಳು ಮೈಸೂರು, ಚಾ.ನಗರ ಇತರೇ ಕಡೆಗಳಿಗೆ ಹೋಗುವುದು ತಪ್ಪುತ್ತದೆ ಎಂದು ಗಣೇಶ್ ಪ್ರಸಾದ್ ತಿಳಿಸಿದರು.
ಹರವೆ ವಿರಕ್ತ ಮಠಾಧ್ಯಕ್ಷರಾದ ಶ್ರೀ ಸರ್ಪ ಭೂಷಣಸ್ವಾಮೀಜಿ ಮಾತನಾಡಿ, ಪ್ರತಿ ವರ್ಷವು ಸಹ ನಡೆಯುವ ಶಿಬಿರದಲ್ಲಿ ಹರವೆ ಹಾಗೂ ಸುತ್ತಮುತ್ತಲಿನ ಗ್ರಾಮಗಳು ನೂರಾರು ಮಂದಿ ಶಿಬಿರದಲ್ಲಿ ಭಾಗವಹಿಸುತ್ತಾರೆ. ಈ ಬಾರಿಯು ಸಹ ಜೆಎಸ್‍ಎಸ್ ಸಂಸ್ಥೆ, ಚಾಮರಾಜೇಶ್ವರಿ ಅಕ್ಕನ ಬಳಗ ಹಾಗೂ ಐಎಲ್‍ವೈಎಫ್ ಹಾಗೂ ಇತರೇ ಸಂಘ ಸಂಸ್ಥೆಗಳ ಮುಖಂಡರು ಭಾಗಿಯಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದ್ದಾರೆ. ಇದೊಂದು ಪುಣ್ಯ ಕಾರ್ಯವಾಗಿದ್ದು, ಆರೋಗ್ಯ ಭಾಗ್ಯ ಇದ್ದರೆ ಇತರೇ ಎಲ್ಲಾ ಭಾಗ್ಯವನ್ನು ಪಡೆದುಕೊಳ್ಳಲು ಸಾಧ್ಯ. ಹೀಗಾಗಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ, ದೊಡ್ಡ ಗಂಡಾಂತರಗಳು ತಪ್ಪುತ್ತದೆ ಎಂದರು.
ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಹರವೆಯಲ್ಲಿ ನಡೆಯುತ್ತಿ ಆರೋಗ್ಯ ತಪಾಸಣಾ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆಯುತ್ತದೆ. ನಮ್ಮ ಜಿಲ್ಲೆಯಿಂದ ಮೈಸೂರಿನಲ್ಲಿ ವಾಸವಾಗಿರುವ ಮಹಿಳೆಯರು ಚಾಮರಾಜೇಶ್ವರಿ ಅಕ್ಕನ ಬಳಗವನ್ನು ರಚನೆ ಮಾಡಿಕೊಂಡು ನಮ್ಮ ಜಿಲ್ಲೆಯ ಜನರಿಗೆ ನಮ್ಮ ಸೇವೆ ಲಭಿಸಬೇಕೆಂಬ ಮಹಾದಾಸೆಯಿಂದ ಇಲ್ಲಿಗೆ ಬಂದಿದ್ದಾರೆ. ಅವರ ಸೇವೆ ಕಾರ್ಯಗಳು ಇನ್ನು ಹೆಚ್ಚಿನ ರೀತಿಯಲ್ಲಿ ನಡೆಯಲಿದೆ. ನನ್ನ ಜಿಲ್ಲೆಯ ಜನರಿಗೆ ಇದು ಲಭಿಸಲಿ ಎಂದು ಬಳಗದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಚಾಮರಾಜೇಶ್ವರಿ ಅಕ್ಕನ ಬಳಗದ ಅಧ್ಯಕ್ಷ ಮಾದಲಾಂಬಿಕೆ ಮಾತನಾಡಿ, ಚಾ.ನಗರದಿಂದ ಮೈಸೂರಿನಲ್ಲಿರುವ ನಾವೆಲ್ಲರು ಒಂದೆಡೆ ಸೇರಿ ಮೈಸೂರಿನಲ್ಲಿ ಸಂಘಟನೆ ಮಾಡಿ, ಸುತ್ತೂರುಶ್ರಿಗಳ ನೇತೃತ್ವದಲ್ಲಿ ಉದ್ಗಾಟಿಸಲು ಮುಂದಾದವೆ. ಅವರು ನಮ್ಮ ಸಂಘಕ್ಕೆ ಚಾಮರಾಜೇಶ್ವರಿ ಅಕ್ಕನ ಬಳಗ ಎಂದು ನಾಮಕರಣ ಮಾಡಿ, ಮೈಸೂರಿನವರಿಗೆ ನಿಮ್ಮ ಸೇವೆ ಸಲ್ಲುವುದಕ್ಕಿಂತ ಚಾಮರಾಜನಗರದಲ್ಲಿ ಸೇವಾ ಕಾರ್ಯಗಳನ್ನು ಮಾಡಿ ಎಂದು ಆಶೀರ್ವಾದ ಮಾಡಿದರು. ಅಲ್ಲಿಂದ ಸೇವಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಂದು ಹರವೆಯಲ್ಲಿ ಸರ್ಪಭೂಷಣ ಶ್ರೀಗಳ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯುತ್ತಿದೆ. ನಮ್ಮ ತಂಡದ ಎಲ್ಲ ಸದಸ್ಯರ ಸಹಕಾರ ಉತ್ತಮವಾಗಿದೆ. ನಮ್ಮ ಚಾಮರಾಜನಗರ ಜನರು ಉತ್ತಮ ಆರೋಗ್ಯವನ್ನು ಹೊಂದಬೇಕು. ಅವರು ಆರ್ಥಿಕವಾಗಿ ಇನ್ನು ಹೆಚ್ಚಿನ ರೀತಿಯಲ್ಲಿ ಪ್ರಬಲರಾಗಬೇಕೆಂಬ ಉದ್ದೇಶದಿಂದ ಬಳಗದ ಎಲ್ಲರು ನಮ್ಮ ವ್ಯಾಪ್ತಿಯಲ್ಲಿ ಆಗುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.
ನಂತರ ಆರೋಗ್ಯ ತಪಾಸಣೆ ಶಿಬಿರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದು 650ಕ್ಕು ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಶಿಬಿರದಲ್ಲಿ ಹಂಗಳಶ್ರೀಗಳು, ಮೈಸೂರಿನ ಜೆಎಸ್‍ಎಸ್ ಅಸ್ಪತ್ರೆಯ ವೈದ್ಯಾಧಿಕಾರಿ ಶಾಂತಮಲ್ಲಪ್ಪ, ಐಎಲ್‍ವೈಎಫ್ ಅಧ್ಯಕ್ಷ ಮಹದೇವಪ್ರಸಾದ್, ಕಾರ್ಯಕಾರಣಿ ಸಮಿತಿ ಸದಸ್ಯ ಹಾಗೂ ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಉಪಾಧ್ಯಕ್ಷ ಮಹೇಶ್, ದೊಡ್ಡರಾಯಪೇಟೆ ಗಿರೀಶ್, ಜಿ.ಪಂ. ಮಾಜಿ ಸದಸ್ಯರಾದ ಕೆರೆಹಳ್ಳಿ ನವೀನ್, ಕಬ್ಬಹಳ್ಳಿ ಮಹೇಶ್, ಮಹಾಸಭಾದ ಅಧ್ಯಕ್ಷ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ತಾಲೂಕು ಅಧ್ಯಕ್ಷ ಬಾಲಚಂದ್ರಮೂರ್ತಿ, ಜೆಎಸ್‍ಎಸ್ ಪಿಆರ್‍ಓ ಆರ್.ಎಂ.ಸ್ವಾಮಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸುರೇಶ್, ಅಕ್ಕನ ಬಳಗ ಪ್ರಧಾನ ಕಾರ್ಯದರ್ಶಿ ಪ್ರತಿಮಾ ಮಂಜುನಾಥ್, ನಿರ್ದೇಶಕರಾದ ಸುನಿತಾಗುರು, ರೇಣುಕಾ ಮೊದಲಾದವರು ಇದ್ದರು.