ಕೇಂದ್ರದ ಬಜೆಟ್ ರೈತರ ನಿರೀಕ್ಷೆಗಳು ಹುಸಿ
ಬಂಗಾರಪೇಟೆ, ಜು,೨೫-, ಬಜೆಟ್‌ನಲ್ಲಿ ರೈತರನ್ನು ನಿರ್ಲಕ್ಷೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ಅಸಮಾದಾನ ವ್ಯಕ್ತಪಡಿಸಿದರು.
ಬಜೆಟ್ ಕುರಿತು ಅವರು ಪ್ರತಿಕ್ರಿಯಿಸಿ ಮಾತನಾಡಿ ದೇಶಾದ್ಯಂತ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿದ್ದರೂ ಬಜೆಟ್‌ನಲ್ಲಿ ರೈತ ಪರ ಯೋಜನೆಗಳನ್ನು ಜಾರಿ ಮಾಡುತ್ತಾರೆಂಬ ನಿರೀಕ್ಷೆಯಲ್ಲಿದ್ದ ರೈತರ ನಿರೀಕ್ಷೆಯನ್ನು ಹುಸಿಯಾಗಿದೆ. ಬೆಳೆ ಸಾಲಕ್ಕೆ ಸಿ.ಬಿ.ಎಲ್. ನಿಂದ ವಿನಾಯ್ತಿ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆದಿರುವ ರೈತರ ಸಂಪೂರ್ಣ ಸಾಲ ಮನ್ನಾ ಕೃಷಿ ಸಾಲ ನೀತಿ ಬದಲಾವಣೆ, ರೈತರ ಭೂಮಿ, ಮೌಲ್ಯಕ್ಕೆ ಅನುಗುಣವಾಗಿ ಸಾಲ ವಿತರಣೆ ಮಾಡುವ ಯೋಜನೆಗಳನ್ನು ಜಾರಿ ಮಾಡುತ್ತಾರೆಂಬ ನಿರ್ಲಕ್ಷೆಯಲ್ಲಿದ್ದ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರೈತ ವಿರೋಧಿಯಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಬರಗಾಲ ಅತಿವೃಷ್ಟಿ ಬೆಳೆನಷ್ಟದಿಂದ ತತ್ತರಿಸಿರುವ ದೇಶದ ರೈತರ ರಕ್ಷಣೆಗೆ ಎನ್.ಡಿ.ಆರ್.ಎಫ್ ಪರಿಹಾರ ಮಾನದಂಡ ಬದಲಿಸಿ ವೈಜ್ಞಾನಿಕವಾಗಿ ನಿಗಧಿಪಡಿಸುತ್ತಾರೆಂಬ ಎಂಬ ನಂಬಿಕೆ ಹುಸಿಯಾಗಿದೆ. ನರೇಗದಲ್ಲಿ ದುಡಿಯುವ ಕೈಗೆ ಕೆಲಸ ನೀಡಿ ಹೆಚ್ಚಿನ ವೇತನ ನೀಡುವ ಯೋಜನೆ ಇಲ್ಲ. ನಕಲಿ ಬಿತ್ತನೆ ಬೀಜ, ಕೀಟ ನಾಶಕ ನಿಯಂತ್ರಣಕ್ಕೆ ಕಾನೂನು ಜಾರಿಯ ನಂಬಿಕೆ ಹುಸಿಯಾಗಿದೆ. ಒಟ್ಟಾರೆಯಾಗಿ ಬಜೆಟ್ ಎಂಬುದು ಶ್ರೀಮಂತರ ಪರ ಬಜೆಟ್ ಆಗಿ ಅನ್ನದಾತನ ನಿರ್ಲಕ್ಷೆ ಮಾಡುವ ಬಜೆಟ್ ಮಂಡನೆಯಾಗಿರುವುದು ದುರದೃಷ್ಟಕರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ರೈತರ ಪರ ಬಜೆಟ್ ಬಿಟ್ಟು ರೈತರ ಕೃಷಿ ಜಮೀನನ್ನು ಭೂ ಸ್ವಾದೀನವಾಗುವ ಹೆದ್ದಾರಿ ಕಾರಿಡಾರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ದುರದೃಷ್ಟಕರ. ಪಕ್ಕದ ಆಂಧ್ರ ರಾಜ್ಯಕ್ಕೆ ೧೫ ಸಾವಿರ ಕೋಟಿ ವಿಶೇಷ ಪ್ಯಾಕೇಜ್ ನೀಡಿರುವ ಕೇಂದ್ರಕ್ಕೆ ಕರ್ನಾಟಕದ ಜ್ಞಾಪಕಕ್ಕೆ ಬಂದಿಲ್ಲವೆ. ರಾಜ್ಯಕ್ಕೆ ಹೆಚ್ಚಿನ ವೈದ್ಯಕಿಯ ಕಾಲೇಜುಗಳು, ಕೋಲಾರ ಜಿಲ್ಲೆಗೆ ರೈಲ್ವೆ ಕೋಚ್ ಪ್ಯಾಕ್ಟರಿ, ಮಾವು, ಸಂಸ್ಕರಣ ಘಟಕ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಆದ್ಯತೆ ನೀಡುವ ನಿರೀಕ್ಷೆಯಲ್ಲಿದ್ದ ರಾಜ್ಯದ ಜನರ ನಿರೀಕ್ಷೆ ಹುಸಿಯಾಗಿರುವ ಮೂಲಕ ರಾಜ್ಯದ ಬಿ.ಜೆ.ಪಿ ಜೆ.ಡಿ.ಎಸ್. ಸಂಸದರು ಕೇಂದ್ರ ಸರ್ಕಾರದ ಮೇಲೆ ಬಜೆಟ್‌ಗೆ ಮುಂಚೆ ಒತ್ತಡ ಹಾಕುವಲ್ಲಿ ವಿಫಲವಾಗಿದ್ದಾರೆಂದು ಆರೋಪ ಮಾಡಿದರು.
ರೈತರ ಆತ್ಮಹತ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಲ್ಲಿ ವಿಫಲವಾಗಿ ಸರ್ಕಾರಿ ಶಾಲೆ ಕೆರೆ, ಕುಂಟೆಗಳನ್ನು ಉಳಿಸುವ ಯೋಜನೆಗೆ ಅನುದಾನವನ್ನು ನೀಡದೆ ರಾಜ್ಯವನ್ನು ರೈತರನ್ನು ನಿರ್ಲಕ್ಷೆ ಮಾಡಿರುವ ಕೇಂದ್ರ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ರೈತರಿಂದಲೇ ಕಲಿಸುವ ಕಾಲ ದೂರವಿಲ್ಲವೆಂದು ಎಚ್ಚರಿಕೆ ನೀಡಿದರು.