ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ : ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿಹುಲಗಬಾಳಿ ಗ್ರಾಮದ ಮಾಂಗವಸ್ತಿ ನಡುಗೆಡ್ಡೆ : ೫೦ಕ್ಕೂ ಅಧಿಕ ಕುಟುಂಬಗಳು ಸ್ಥಳಾಂತರ
ಅಥಣಿ :ಜು.೨೫: ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಮಾಂಗ ಜನ ವಸತಿಯ ೫೦ಕ್ಕೂ ಅಧಿಕ ಕುಟುಂಬಗಳು ನಡುಗಡ್ಡೆಯಲ್ಲಿ ಸಿಲುಕಿವೆ. ಮಹಿಳೆಯರು, ಮಕ್ಕಳು, ವಯೋವೃದ್ದರೂ ಜೊತೆಯಾಗಿ ದನಕರುಗಳು ಕೂಡ ನಡುಗಡ್ಡೆಯಲ್ಲಿ ಸಿಲುಕಿದ್ದಾರೆ. ತಾಲೂಕಾ ಆಡಳಿತದಿಂದ ಅಲ್ಲಿನ ಜನ ಮತ್ತು ಜಾನುವಾರುಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಜರುಗಿದೆ. ಆದರೆ ಅನೇಕ ಕುಟುಂಬಗಳು ತಾಲೂಕ ಆಡಳಿತ ಮತ್ತು ಸರ್ಕಾರ ನಮಗೆ ಶಾಶ್ವತ ನೆಲೆ ಕಲ್ಪಿಸಬೇಕು. ಅಲ್ಲಿಯವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ತಾಲೂಕ ಅಧಿಕಾರಿಗಳು ಅವರನ್ನ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇಂದು ಬುಧವಾರ ತಾಲೂಕಾ ತಹಶೀಲ್ದಾರ್ ವಾಣಿ. ಯು. ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಡಿವೈಎಸ್ಪಿ ಶ್ರೀಪಾದ್ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ ಸೇರಿದಂತೆ ಗ್ರಾಮಮಟ್ಟದ ಅಧಿಕಾರಿಗಳು ಮಾಂಗ ಜನ ವಸತಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಲ್ಲಿನ ನಡುಗಡ್ಡಿಯಲ್ಲಿ ಸಿಲುಕಿದ ಜನರು ಬ್ಯಾರಲಗಳ ಸಹಾಯ ಪಡೆದು ಸುರಕ್ಷಿತ ಸ್ಥಳಕ್ಕೆ ಬರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗುತ್ತಿರುವುದರಿಂದ ಪ್ರವಾಹ ತಲೆದೋರುವ ಸಾಧ್ಯತೆಯಿದ್ದು, ಎಲ್ಲಾ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಹೊಂದಬೇಕೆAದು ಅಧಿಕಾರಿಗಳು ತಿಳಿಸಿದರು. ಆದರೆ ಇಲ್ಲಿನ ಜನರು ನಮಗೆ ಪ್ರತಿ ವರ್ಷ ಈ ಸಮಸ್ಯೆ ಎದುರಾಗುತ್ತಿದ್ದು, ಹಲವು ವರ್ಷಗಳು ಗತಿಸಿದರೂ ನಮ್ಮ ಸಮಸ್ಯೆಗೆ ಯಾವುದೇ ಮುಕ್ತಿ ದೊರಕಿಲ್ಲ, ನಮಗೆ ಸೂಕ್ತ ನೆಲೆ ಕಲ್ಪಿಸಬೇಕು ಅಲ್ಲಿಯವರೆಗೆ, ನಾವು ಸ್ಥಳಾಂತರ ಹೊಂದುವುದಿಲ್ಲ ಎಂದು ಪಟ್ಟು ಹಿಡಿದರು. ಆಗ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ನಿಮ್ಮ ಸಮಸ್ಯೆಯನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರುತ್ತೇವೆ. ಈಗ ಹುಲುಗಬಾಳಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದ್ದು, ಗ್ರಾಮಸ್ಥರು ತಮ್ಮ ಜಾನುವಾರಗಳ ಸಮೇತ ಅಲ್ಲಿ ಸ್ಥಳಾಂತರಗೊಳ್ಳಬೇಕೆAದು ಜನರ ಮನವೊಲಿಸಿದರು. ಅಧಿಕಾರಿಗಳು ಸಲಹೆಗೆ ಸ್ಪಂದಿಸಿದ ಗ್ರಾಮಸ್ಥರು ಅಗತ್ಯ ವಸ್ತುಗಳ ಸಮೇತ ಜನ ಜಾನುವಾರಗಳನ್ನು ಸ್ಥಳಾಂತರಗೊಳಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಾಣಿ. ಯು, ತಾಲೂಕ ಪಂಚಾಯತ ಅಧಿಕಾರಿ ಶಿವಾನಂದ ಕಲ್ಲಾಪುರ, ಡಿವೈಎಸ್ಪಿ ಶ್ರೀಪಾದ್ ಜಲ್ದಿ, ಸಿಪಿಐ ರವೀಂದ್ರ ನಾಯ್ಕೋಡಿ, ಕಂದಾಯ ನಿರೀಕ್ಷಕ ಶಿವಾನಂದ ಮೆಣಸಂಗಿ ಸೇರಿದಂತೆ ಗ್ರಾಮ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.