ಜನವಿರೋಧಿ ಕೇಂದ್ರ ಬಜೆಟ್: ದೇವದಾಸಿಯರ ಪುನರ್ವಸತಿಗಾಗಿ ಸೆಪ್ಟೆಂಬರ್‌ನಲ್ಲಿ ಧರಣಿ
ಕಲಬುರಗಿ: ಜು.24- ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಜನವಿರೋಧಿಯಾಗಿದ್ದು, ದೇವದಾಸಿಯರ ಪುನರ್ವಸತಿಗೆ ಆಗ್ರಹಿಸಿ ಬರುವ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಮಂಡಿಸಿದ 48.21 ಲಕ್ಷ ಕೋಟಿ ರೂ.ಗಳ ಬಜೆಟ್ ಲೂಟಿಕೋರ ಕಾರ್ಪೋರೇಟ್ ಸಂಸ್ಥೆಗಳ ಪರವಾದ ಮತ್ತು ಬಡವರು, ದಲಿತರು ಹಾಗೂ ಮಹಿಳೆಯರ ವಿರೋಧಿಯಾಗಿದೆ ಎಂದು ಟೀಕಿಸಿದರು.
ಮಹಿಳೆಯರು, ದಲಿತರು ಹಾಗೂ ಬಡವರ ಆದಾಯವನ್ನು ಹೆಚ್ಚಿಸಿ ಸ್ವಾವಲಂಬಿಗಳನ್ನಾಗಿಸಿ ಅವರಿಗೆ ಸಾಮಾಜಿಕ ಹಾಗೂ ಆರ್ಥಿಕ ಶೋಷಣೆಯಿಂದ ಮುಕ್ತಿ ಒದಗಿಸಲು ಯಾವುದೇ ರೀತಿಯಲ್ಲಿ ನೆರವು ನೀಡದ ಬಜೆಟ್ ಆಗಿದೆ. ಮಾತ್ರವಲ್ಲದ ಅವರಿಗೆ ಕಾರ್ಪೋರೇಟ್ ಲೂಟಿಗೀಡು ಮಾಡುವ ಬಜೆಟ್ ಆಗಿದೆ ಎಂದು ಆಕ್ರೋಶ ಹೊರಹಾಕಿದರು.
ಸಂಕಷ್ಟದಲ್ಲಿರುವ ಜನರಿಗೆ ಭೂಮಿ ಒದಗಿಸುವ ಬದಲು ಕಾರ್ಪೋರೇಟ್ ಸಂಸ್ಥೆಗಳಿಗೆ ಒದಗಿಸುತ್ತಿದೆ. ಉದ್ಯೋಗ ಖಾತ್ರಿಯನ್ನು 200 ದಿನಗಳಿಗೆ ಹಾಗೂ ನಗರ ಪ್ರದೇಶಗಳಿಗೆ ವಿಸ್ತರಿಸಲೂ ಸಹ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಕೂಲಿಯನ್ನು 600ರೂ.ಗಳಿಗೆ ಹೆಚ್ಚಿಸಲಿಲ್ಲ. ಬದಲಿಗೆ ರಾಸಾಯನಿಕ ಗೊಬ್ಬರ ಹಾಗೂ ಆಹಾರ ಸಹಾಯಧನ ಕಡಿತಗೊಳಿಸುವ ಮೂಲಕ ಮತ್ತೆ ಬೆಲೆ ಏರಿಕೆ ಬರೆ ಎಳೆದಿದ್ದಾರೆ ಎಂದು ಅವರು ಆರೋಪಿಸಿದರು.
ಕೂಡಲೇ ಬಡವರ ಪರವಾಗಿ ಬಜೆಟ್ ಬದಲಾಯಿಸಬೇಕು ಎಂದು ಒತ್ತಾಯಿಸಿದ ಅವರು, ಮಾಶಾಸನ ಹೆಚ್ಚಳಕ್ಕಾಗಿ, ಮರುಗಣತಿಗಾಗಿ ಹಾಗೂ ಭೂಮಿಗಾಗಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳು ಬಿಟ್ಟು ಹೋದ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳ ಗಣತಿಯನ್ನು ಮಾಡುವಂತೆ, ಮಾಸಿಕ ಸಹಾಯ ಧನವನ್ನು 6000ರೂ.ಗಳಿಗ ಹಚ್ಚಿಸುವಂತೆ, ಎಲ್ಲರಿಗೂ ತಲಾ ಐದು ಎಕರೆ ನೀರಾವರಿ ಜಮೀನು ನೀಡುವಂತೆ ಒತ್ತಾಯಿಸಿ ಧರಣಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ದೇವದಾಸಿಯರ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಮಕ್ಕಳ ಜನನಕ್ಕೆ ಕಾರಣವಾಗಿರುವವರ ಆಸ್ತಿಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದ ಅವರು, ಇಲ್ಲಿಯವರೆಗಿನ ಸರ್ಕಾರಗಳು ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಹಾಗಾಗಿ ಸೆಪ್ಟೆಂಬರ್‌ನಲ್ಲಿ ಹೋರಾಟ ಮಾಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷೆ ಚಂದಮ್ಮಾ, ಸುಧಾಮ್ ಧನ್ನಿ ಮುಂತಾದವರು ಉಪಸ್ಥಿತರಿದ್ದರು.