ರೈತರು ರೈತೋದ್ಯಮಿಗಳಾಗಬೇಕು: ಡಾ. ಎ.ಬಿ. ಪಾಟೀಲ ರೈತ ಜಾತ್ರೆಯಲ್ಲಿ ಅಭಿಮತ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೨೫:ನಮ್ಮ ದೇಶ ಕೃಷಿ ಪ್ರಧಾನ ದೇಶ. ರೈತ ಈ ದೇಶದ ಬೆನ್ನೆಲುಬು. ದೇಶ ಕಾಯುವ ಸೈನಿಕ ಮತ್ತು ವಿಶ್ವಕ್ಕೆ ಅನ್ನ ನೀಡುವ ರೈತರನ್ನು ಸದಾ ಸ್ಮರಿಸಲೇಬೇಕು. ಎಲ್ಲ ಕ್ಷೇತ್ರಗಳು ನಿಂತರೂ ಕೃಷಿಕ್ಷೇತ್ರ ನಿಲ್ಲಲು ಸಾಧ್ಯವಿಲ್ಲ. ಒಂದು ವೇಳೆ ನಿಂತರೆ ಯಾರಿಗೂ ಉಳಿಗಾಲವಿಲ್ಲ. ಈ ದೇಶದಲ್ಲಿ ಯಾರೂ ಕೂಡಾ ಹಸಿವಿನಿಂದ ಬಳಲಬಾರದು. ರೈತರು ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಕೃಷಿ ಮಾಡಬೇಕು. ರೈತರಿಗಾಗಿ ಕೃಷಿ ಇಲಾಖೆಯಲ್ಲಿ ಇರುವ ಪ್ರಧಾನಮಂತ್ರಿ ಆಹಾರ ಸಂಸ್ಕರಣಾ ಯೋಜನೆಗಳನ್ನು ಉಪಯೋಗಿಸಿಕೊಂಡು ರೈತರು ರೈತೋದ್ಯಮಿಗಳಾಗಬೇಕೆಂದು ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಎ.ಬಿ. ಪಾಟೀಲ ಅವರು ರೈತರಿಗೆ ಕರೆ ನೀಡಿದರು.
ಜೋರಾಪುರ ಪೇಟೆಯ ಗೋಂಧಳಿ ಗಲ್ಲಿಯ ಶ್ರೀ ದುರ್ಗಾದೇವಿ ಜಾತ್ರೆಯಲ್ಲಿ ಹಮ್ಮಿಕೊಂಡ ರೈತ ಜಾತ್ರೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಒಂದು ಕಾಳಿನ ಉಳಿಕೆ ಎರಡು ಕಾಳಿನ ಉತ್ಪಾದನೆಗೆ ಸಮ. ಸಂಸ್ಕರಣೆ, ಮೌಲ್ಯವರ್ಧನೆಗೆ ಒತ್ತು ನೀಡುತ್ತಿರುವ ಕೃಷಿ ಇಲಾಖೆ ಸಂಸ್ಕರಣಾ ಆಯುಕ್ತಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಮಾತನಾಡಿ, ರೈತ ಜಾತ್ರೆಯ ಮೂಲಕ ರೈತರಿಗೆ ವಿವಿಧ ತಾಂತ್ರಿಕತೆಗಳು ಹಾಗೂ ವಿವಿಧ ಗೋಷ್ಠಿಗಳ ಮೂಲಕ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ, ಇಂತಹ ರೈತಜಾತ್ರೆಗಳು ಬೃಹದಾಕಾರದಲ್ಲಿ ನಡೆದು ಎಲ್ಲ ರೈತರಿಗೆ ಅನುಕೂಲವಾಗಲಿ. ಆ ನಿಟ್ಟಿನಲ್ಲಿ ತಮ್ಮ ವಿಶ್ವವಿದ್ಯಾಲಯ ಮುಂದಾಳತ್ವ ವಹಿಸುತ್ತದೆ. ರೈತರು ಮಣ್ಣು ಹಾಗೂ ನೀರಿನ ಪರೀಕ್ಷೆ ಮಾಡಿಸಿ ಆಯಾ ಪ್ರದೇಶ ಹಾಗೂ ಹವಾಮಾನಕ್ಕೆ ಅನುಗುಣವಾಗಿ ವಿವಿಧ ಬೆಳೆಗಳ ಬೇಸಾಯ ಮಾಡಬೇಕೆಂದು ಹೇಳಿದರು.
ಮಡ್ಡಿ ಜಮೀನಿನಲ್ಲಿ ಬಂಗಾರದ ಬೆಳೆ ಬೆಳೆಯುವ ವಿಜಯಪುರ ಜಿಲ್ಲೆಯ ಜನತೆ ಶ್ರಮಜೀವಿಗಳು. ಇದಕ್ಕೆ ತಮ್ಮ ನಿಷ್ಠೆ ಹಾಗೂ ಪ್ರಾಮಾಣಿಕತೆ ಕಾರಣವೆಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ಕಾತ್ರಾಳ ಬಾಲಗಾಂವದ ಗುರುದೇವಾಶ್ರಮದ ಪೂಜ್ಯ ಶ್ರೀ ಅಮೃತಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿಗಳಾದ ಡಾ. ಭೀಮಪ್ಪ.ಎ, ಕೃಷಿ ಇಲಾಖೆಯ ಜಂಟಿ ನಿರ್ದೇಶಕÀ ಡಾ. ರಾಜಶೇಖರ ವಿಲಿಯಮ್ಸ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕÀ ರಾಹುಲ್‌ಕುಮಾರ ಭಾವಿದೊಡ್ಡಿ, ಕೃಷಿ ಮಹಾವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ, ಮಹಾನಗರ ಪಾಲಿಕೆ ಸದಸ್ಯÀ ಶಿವರುದ್ರ ಬಾಗಲಕೋಟ, ಮಹಾನಗರ ಪಾಲಿಕೆ ಮಾಜಿ ಸದಸ್ಯÀ ಉಮೇಶ ವಂದಾಲ, ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಎಸ್.ಟಿ. ಪಾಟೀಲ, ಜಾತ್ರಾ ಕಮೀಟಿಯ ಅಧ್ಯಕ್ಷ ಅಮರ ಗರುಡಕರ, ಸುಹಾಸ ಭೀಸೆ, ಗಣಪತಿ ಸೂರ್ಯವಂಶಿ, ಸಂದೀಪ ಕಾಳೆ, ರೈತ ಜಾತ್ರೆಯ ಸಂಚಾಲಕ ವೀರಣ್ಣ ಸಜ್ಜನ ಇದ್ದರು.
ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕÀ ಡಾ. ಆರ್.ಬಿ. ಬೆಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ರೈತ ಜಾತ್ರೆಯಲ್ಲಿ ವಿವಿಧ ಕೃಷಿ ಯಂತ್ರೋಪಕರಣ, ಟ್ರಾö್ಯಕ್ಟರ್, ಸುಧಾರಿತ ನರ್ಸರಿ, ಜೈವಿಕ ರಸಗೊಬ್ಬರ, ಕೀಟನಾಶಕಗಳು ಹಾಗೂ ಕೃಷಿ ,ತೋಟಗಾರಿಕೆ ಹಾಗೂ ಮೀನುಗಾರಿಕೆ ಇಲಾಖೆಯ ವಿವಿಧ ಮಳಿಗೆಗಳು ಇದ್ದವು. ಕಾರ್ಯಕ್ರಮದ ನಂತರ ಅತಿಥಿಗಳು ಹಾಗೂ ರೈತರು ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ರೈತರಿಗೆ ವಿ಼ಶೇಷ ತಾಂತ್ರಿಕ ಗೋಷ್ಠಿಗಳು ನೆರವೇರಿದವು.