ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪನೆಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ ಸಂಸದ ರಾಧಾಕೃಷ್ಣ ದೊಡ್ಡಮನಿ
ಕಲಬುರಗಿ: ಜು.24: ಕಲಬುರ್ಗಿಗೆ ರೇಲ್ವೆ ವಿಭಾಗ ಸ್ಥಾಪಿಸುವಂತೆ ಒತ್ತಾಯಿಸಿ ಸಂಸದ ರಾಧಾಕೃಷ್ಣ ದೊಡ್ಡಮನಿ ಸಂಸತ್ತಿನಲ್ಲಿ ಪ್ರಶ್ನಿಸಿ ಸರ್ಕಾರದ ಗಮನ ಸೆಳೆದರು.
ಸಂಸತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಸಭಾಧ್ಯಕ್ಷ ಓಂಪ್ರಕಾಶ್ ಬಿರ್ಲಾ ಅವರ ಮೂಲಕ ರೇಲ್ವೆ ಸಚಿವರಿಗೆ ಪ್ರಶ್ನೆ ಕೇಳಿದ ರಾಧಾಕೃಷ್ಣ ದೊಡ್ಡಮನಿ ಅವರು, ಆರ್ಟಿಕಲ್ 371(ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾದ ಸೌಲಭ್ಯ ಪಡೆದಿರುವ ಕಲ್ಯಾಣ ಕರ್ನಾಣಟಕ ಪ್ರಮುಖ ನಗರ ಕಲಬುರ್ಗಿ ಜಿಲ್ಲೆಯ ಆರ್ಥಿಕ ಪ್ರಗತಿಗಾಗಿ ಪ್ರತ್ಯೇಕ ರೇಲ್ವೆ ವಿಭಾಗ ಸ್ಥಾಪನೆಯಾಗಬೇಕೆಂದು ಮನಗಂಡ ಸರ್ಕಾರ ಬಗ್ಗೆ 2014-2015ರಲ್ಲಿಯೇ ಯೋಜನೆಯನ್ನು ಮಂಜೂರು ಮಾಡಿತ್ತು ಎಂದರು.
ಸುಮಾರು ಹತ್ತು ವರ್ಷಗಳಿಂದ ಈ ಭಾಗದ ಜನರು ರೇಲ್ವೆ ವಿಭಾಗ ಸ್ಥಾಪನೆಗಾಗಿ ಕಾಯುತ್ತಿದ್ದಾರೆ. ರೇಲ್ವೆ ಬಜೆಟ್‌ನಲ್ಲಿ ಅನುದಾನ ಘೋಷಣೆಯಾದರೂ ಕೂಡಾ ಅನುದಾನ ಬಿಡುಗಡೆಯಾಗಿಲ್ಲ. ಈ ಬಗ್ಗೆ ಹಲವಾರು ಸಮಿತಿಗಳನ್ನು ರಚಿಸಲಾಗಿದೆ. ಆದರೆ ರೇಲ್ವೆ ವಲಯ ಸ್ಥಾಪನೆಯಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಯೋಜನೆಗೆ ಅಗತ್ಯವಿರುವ ಜಮೀನನ್ನು ಈಗಾಗಲೇ ರಾಜ್ಯ ಸರ್ಕಾರ ಉಚಿತವಾಗಿ ಒದಗಿಸಿದ್ದು ಪ್ರಸ್ತುತ ಜಮೀನು ರೇಲ್ವೆ ಇಲಾಖೆಯ ಸ್ವಾಧೀನದಲ್ಲಿದೆ. ಕಲಬುರ್ಗಿ ಜಿಲ್ಲೆಯ ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ದಿಗೆ ಸಹಕಾರಿಯಾಗಲಿರುವ ಪ್ರತ್ಯೇಕ ರೇಲ್ವೆ ವಿಭಾಗ ಸ್ಥಾಪನೆಗೆ ವಿಳಂಬವಾಗುತ್ತಿದ್ದು, ಈ ಬಗ್ಗೆ ರೇಲ್ವೆ ಸಚಿವರು ಉತ್ತರಿಸಬೇಕು ಎಂದು ಸಂಸದರು ಒತ್ತಾಯಿಸಿದರು.