ಪತ್ನಿ ಆತ್ಮಹತ್ಯೆ: ಪತಿ, ಅತ್ತೆಗೆ 7 ವರ್ಷ ಜೈಲು ಶಿಕ್ಷೆ
ಕಲಬುರಗಿ,ಜು.24-ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಪತಿ ಮತ್ತು ಅತ್ತೆಗೆ ಇಲ್ಲಿನ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ಕಲಬುರಗಿ ತಾಲ್ಲೂಕಿನ ಹರಸೂರ ಗ್ರಾಮದ ಕೃಷ್ಣ ತಂದೆ ನಾಗೇಶ ಬೋರೆ ಮತ್ತು ಅವರ ತಾಯಿ ಸುನೀತಾಬಾಯಿ ಗಂಡ ನಾಗೇಶ ಬೋರೆ ಶಿಕ್ಷೆಗೆ ಗುರಿಯಾದ ಆರೋಪಿತರು.
2017ರಲ್ಲಿ ಕೃಷ್ಣ ಬೋರೆ ಮತ್ತು ಅವರ ತಾಯಿ ಸುನೀತಾಬಾಯಿ ಅವರು ಮಹಿಳೆಗೆ ನೀನು ನೋಡಲು ಚೆನ್ನಾಗಿಲ್ಲ. ನಿನಗೆ ಅಡುಗೆ ಮಾಡಲು ಬರುವುದಿಲ್ಲ. ತವರು ಮನೆಯಿಂದ ಇನ್ನೂ ಹೆಚ್ಚಿನ ಹಣ, ಬಂಗಾರ ತರುವಂತೆ ಕಿರುಕುಳ ನೀಡಿದ್ದರು. ಇದರಿಂದ ಮನನೊಂದು ಆ ಮಹಿಳೆ ಗಂಡನ ಮನೆಯಲ್ಲಿಯೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬAಧ ಮೃತ ಮಹಿಳೆಯ ತಂದೆ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ತನಿಖಾಧಿಕಾರಿಗಳಾದ ಪ್ರದೀಪ್ ಬಿಸೆ, ಎ.ವಾಜಿದ್ ಮತ್ತು ಎಸ್.ಎಸ್.ಹುಲ್ಲೂರ್ ಅವರು ಪ್ರಕರಣದ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಆರೋಪಿಗಳಿಗೆ 7 ವರ್ಷ ಸಾಧಾ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹಯಾಳಪ್ಪ ಎನ್.ಬಳಬಟ್ಟಿ ವಾದ ಮಂಡಿಸಿದ್ದರು.