ಕಲಬುರಗಿಯಲ್ಲಿ 27 ರಿಂದ 29 ರವರೆಗೆ ಸಾವಯವ ಕೃಷಿ ಜಾತ್ರೆ
ಕಲಬುರಗಿ,ಜು.24-ಕೃಷಿ ಕ್ಷೇತ್ರದಲ್ಲಿ ರೈತರಿಗೆ ಸುಸ್ಥಿರ ಮತ್ತು ಸಾವಯವ ಕೃಷಿಯ ಕುರಿತು ಅರಿವು ಮೂಡಿಸಲು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆÀ ಪ್ರಪ್ರಥಮ ಬಾರಿಗೆ ಸಾವಯವ ಕೃಷಿ ಜಾತ್ರೆಯನ್ನು ಜು.27, 28 ಮತ್ತು 29 ರಂದು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಬಿ.ಪಾಟೀಲ, ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ ಹಾಗೂ ಕೃಷಿ ಉಪ ಸಮಿತಿ ಅಧ್ಯಕ್ಷ ಜಗದೀಶ ಗಾಜರೆ ತಿಳಿಸಿದರು.
ಎಪಿಎಂಸಿ ಆವರಣದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ರೈತರ ನಡೆ, ಸಾವಯವ ಕೃಷಿ ಕಡೆ” ಎನ್ನುವ ಘೋಷವಾಕ್ಯದಡಿ ಈ ಮೂರು ದಿನಗಳ ಕೃಷಿ ಜಾತ್ರೆಯನ್ನು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ರಾಯಚೂರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ, ಶರಣಬಸವೇಶ್ವರ ವಿಶ್ವವಿದ್ಯಾಲಯ, ಕೇಂದ್ರೀಯ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ, ಕೃಷಿ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಆಹಾರ ಧಾನ್ಯ ಮತ್ತು ಬೀಜ ವರ್ತಕರ ಸಂಘ, ದಾಲ್ ಮಿಲ್ಲರ ಅಸೋಸಿಯೇಷನ್, ಅಕ್ಕಿ ವ್ಯಾಪಾರಸ್ಥರ ಸಂಘ, ಕೃಷಿ ಪರಿಕರ ಮಾರಾಟಗಾರರಸಂಘ, ವಿಕಾಸ ಆಕಾಡೆಮಿ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ರೈತರಲ್ಲಿ ಸಾವಯವ ಕೃಷಿ ಬಗ್ಗೆ ಆಸಕ್ತಿ ಹೆಚ್ಚಿಸುವುದು ಹಾಗೂ ರೈತರನ್ನು ಪ್ರೋತ್ಸಾಹಿಸುವುದು, ಸುಸ್ಥಿರ ಕೃಷಿ, ಕೃಷಿಯಲ್ಲಿ ಆವಿಷ್ಕಾರ, ತೋಟಗಾರಿಕೆ, ಹೈನುಗಾರಿಕೆ, ಪಶು ಸಂಗೋಪನೆ, ಜೇನು ಸಾಕಣಿಕೆ, ರೇಷ್ಮೆ ಕೃಷಿ, ಕೃಷಿ ಮಾರುಕಟ್ಟೆ, ಕೃಷಿ ಬೆಳೆಯ ಮೌಲ್ಯವರ್ಧನೆಹಾಗೂ ಔಷಧಿ ಮತ್ತು ಪರಿಮಳ ದ್ರವ್ಯ ಸಸ್ಯಗಳ ಪ್ರದರ್ಶನ ಸಾವಯವ ಕೃಷಿ ಜಾತ್ರೆಯ ಮೂಲ ಉದ್ದೇಶ ಹಾಗೂ ಗುರಿಯಾಗಿದೆ ಎಂದರು.
ಜು.27 ರಂದು ಬೆಳಗ್ಗೆ 10 ಗಂಟೆಗೆ ಸಾವಯವ ಕೃಷಿಯಲ್ಲಿ ಕ್ರಾಂತಿ ಮಾಡಿರುವ ಕನ್ಹೇರಿಯ ಸಿದ್ಧಗಿರಿ ಮಹಾಸಂಸ್ಥಾನ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ರೈತರನ್ನುದ್ದೇಶಿಸಿ ಹಿತವಚನ ನೀಡಲಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ, ಮುತ್ಯಾನ ಬಬಲಾದ ಮಠದ ಗುರುಪಾದಲಿಂಗ ಮಹಾಶಿವಯೋಗಿಗಳು, ಬೆಳಗುಂಪಾದ ಅಭಿನವ ಪರುತೇಶ್ವರ ಶಿವಾಚಾರ್ಯರು ಸಮಾರಂಭದ ಸಾನಿಧ್ಯ ವಹಿಸುವರು. ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ಕೈಗಾರಿಕೆಗಳ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಶರಣಬಸಪ್ಪಾ ದರ್ಶನಾಪೂರ, ಅರಣ್ಯ ಪರಿಸರ ವಿಜ್ಞಾನ, ಪರಿಸರ ಇಲಾಖೆಯ ಸಚಿವ ಶ್ರೀ ಈಶ್ವರ ಖಂಡ್ರೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಸಂಸದರು, ಶಾಸಕರು, ಮಾನ್ಯ ವಿಧಾನ
ಪರಿಷತ್ ಸದಸ್ಯರು, ರಾಜ್ಯ ಸರ್ಕಾರದ ವಿವಿಧ ಇಲಾಖೆಯ ವರಿಷ್ಠಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬೆಳೆ ಮೌಲ್ಯವರ್ಧನೆ ಹಾಗೂ ಸಾವಯವ ಕೃಷಿ ಕುರಿತು ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ. 27ರಂದು ಮಧ್ಯಾಹ್ನ 1 ರಿಂದ 4 ವರೆಗೆ ಜೇನು ಸಾಕಣಿಕೆ ಕುರಿತು ಶಿರಸಿಯ ಮಧುಕೇಶ್ವರ ಹೆಗಡೆ, ಸಮಗ್ರ ಕೃಷಿ ಪದ್ಧತಿಯ ಕುರಿತು ಕಾಶಿಲಿಂಗಯ್ಯ ವೀರಯ್ಯ, ಹೊಲದಲ್ಲಿಯೇ ಸಾವಯವ ಗೊಬ್ಬರ ತಯಾರಿಕೆ ಕುರಿತು ದೀಪಕ್ ಸೋಮಯ್ಯಜೀ ವಿಶೇಷ ಉಪನ್ಯಾಸ ಹಾಗೂ ರೈತರಿಗೆ ಉಪಯುಕ್ತ ಮಾಹಿತಿ ನೀಡುವರು. ಇದಲ್ಲದೇ ಎಪಿಎಮ್‌ಸಿ ಆವರಣದಲ್ಲಿ ಸುಮಾರು 170 ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ವೀಕ್ಷಿಸಲು ಅವಕಾಶವನ್ನು ಒದಗಿಸಲಾಗಿದೆ. ಸಾಯಂಕಾಲ 5:00 ಗಂಟೆಗೆ ಖ್ಯಾತ ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ ಮತ್ತು ಗುಂಡಣ್ಣ ಡಿಗ್ಗಿ ಅವರಿಂದ ಹಾಸ್ಯ ಚಟಾಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ ವಿದ್ಯಾರ್ಥಿಗಳಿಂದ ಸಾಲದ ಹೊರೆ ಎಂಬ ನಾಟಕ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
28 ರಂದು ಬೆಳ್ಳಿಗ್ಗೆ 10:00 ಗಂಟೆಗೆ ಔಷಧಿ ಮತ್ತು ಸುಂಗAಧ ಸಸ್ಯಗಳ ಕುರಿತು ಚರ್ಚೆಗೋಷ್ಠಿಯ ದಿವ್ಯಸಾನಿಧ್ಯವನ್ನು ನಂದಿವೇರಿ ಮಠ, ಕಪ್ಪತಗುಡ್ಡ, ಡೋಣಿ ಗದಗದ ಶಿವಕುಮಾರ ಸ್ವಾಮೀಜಿ ವಹಿಸಲಿದ್ದಾರೆ. ಚಿನಮಗೇರಿಯ ಸಿದ್ಧರಾಮ ಶಿವಾಚಾರ್ಯರು ಉಪಸ್ಥಿತರಿರುವರು. ಮಧ್ಯಾಹ್ನ 12:00 ರಿಂದ 3:00 ಗಂಟೆಯ ವರೆಗೆ ಸಾವಯವ ಕೃಷಿಯಲ್ಲಿ ಯಂತ್ರಗಳ ಮಹತ್ವದ ಕುರಿತು ಡಾ. ಸಿ. ನಾಗರಾಜ್ , ಸಾವಯವ ಕೃಷಿಯಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಬಾಲಚಂದ್ರ ಜಾಬಶೆಟ್ಟಿ, ಬಾಳೇ ಕಾಂಡದಿAದ ಬಟ್ಟೆ ತಯಾರಿಕೆ ಕುರಿತು ದೇವರಾಜ ನಾಯಕ ಹಾಗೂ ಕೋಳಿ ಸಾಕಾಣಿಕೆ ಕುರಿತು ನಿತಿನ್ ರಂಗದಾಳ ವಿಶೇಷ ಉಪನ್ಯಾಸ ನೀಡಲಿದ್ದಾರೆ.
28 ರಂದು ಸಾಯಂಕಾಲ 5 ಗಂಟೆಗೆ ಕೃಷಿಯಲ್ಲಿ ವಿನೂತನ ಆವಿಷ್ಕಾರ ಮಾಡಿದ ರೈತರಿಗೆ ಪ್ರಶಸ್ತಿ ವಿತರಣೆ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕೃಷಿ ಜಾತ್ರೆಯಲ್ಲಿ ಸಾಕು ನಾಯಿ, ಬೆಕ್ಕು, ಕುದುರೆ ಹಾಗೂ ಜಾನುವಾರುಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಮ್ಮಿಕೊಂಡಿರುವ ಕೃಷಿ ಜಾತ್ರೆಯಲ್ಲಿ ರೈತರು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.