ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಕಿವುಡಾಗಬಾರದು:ಪಾಳಾ ಶ್ರೀ
ಸೇಡಂ,ಜು,೨೪:ಯಾವುದೇ ಸರ್ಕಾರವಾಗಲಿ ಇನ್ನಿತರ ವ್ಯವಸ್ಥೆಯಲ್ಲಿ ತಪ್ಪು ಮಾರ್ಗ ಅನುಸರಿಸುವ ಪ್ರಸಂಗ ನಡೆದರೆ ಅಂಥವರ ವಿರುದ್ಧ ಪತ್ರಿಕೆಗಳು ಜಾಗೃತಿ ಮೂಡಿಸಿ ನ್ಯಾಯ ದೊರಕಿಸುವ ಕಾರ್ಯ ಮಾಡುತ್ತವೆ,ಸರ್ಕಾರದ ಬಹುಕೋಟಿ ಹಗರಣಗಳನ್ನು ಬಯಲಿ ಗೆಳೆಯುವ ಮೂಲಕ ಜನಸಮುದಾಯವನ್ನು ಎಚ್ಚರಿಸುವ ಕೆಲಸ ಮಾಧ್ಯಮದವರು ಮಾಡುತ್ತಿದ್ದಾರೆ,ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಕಿವುಡಾಗಬಾರದು ಎಂದು ಪಾಳಾದ ಕಟ್ಟಿಮನಿ ಹಿರೇಮಠ ಸಂಸ್ಥಾನದ ಶ್ರೀಗಳಾದ ಷ.ಬ್ರ. ಶ್ರೀ ಗುರುಮೂರ್ತಿ ಶಿವಾಚಾರ್ಯರು ಹೇಳಿದರು.ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ನಾಗೇಂದ್ರಪ್ಪ ಪಾಟೀಲ ಆರೆಬೊಮ್ಮನಳ್ಳಿ ಕಲ್ಯಾಣ ಮಂಟಪದಲ್ಲಿ ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನ ಆಯೋಜಿಸಿದ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿ ಮಾಧ್ಯಮದಿಂದ ಬಹುತೇಕ ವ್ಯವಸ್ಥೆ ಸುಧಾರಣೆಯಾಗುತ್ತಿದೆ,ಆಳುವ ವರ್ಗಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಶಕ್ತಿ ಪತ್ರಿಕಾರಂಗಕ್ಕೆ ಇದೆ.ಬಹುಕೋಟಿ ಹಗರಣ ಬಯಲಿಗೆಳೆಯುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದರು ಪತ್ರಕರ್ತ ಲಿಂ.ವೀರಭದ್ರ ಮಾಮನಿ ಸ್ಮರಣಾರ್ಥ ನೀಡಲಾಗುತ್ತಿರುವ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿವೃತ್ತ ಪ್ರಾಂಶುಪಾಲ ಡಾ.ಹಾಶರೆಡ್ಡಿ ಮನ್ನೆ ಅವರ ಮಾತನಾಡಿ ಪತ್ರಕರ್ತರು ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿದ್ದು,ತಮ್ಮ ವೃತ್ತಿಗೆ ಸಂಬAಧಿಸಿದ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಿ ಸಮಾಜ ರಕ್ಷಿಸುವ ಕಾರ್ಯ ಮಾಡುತ್ತಿವೆ.
ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡುವ ಪತ್ರಕರ್ತರು ಸದಾ ಅಳುವ ವರ್ಗವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.ಪತ್ರಕರ್ತರು ಸ್ವಂತಕ್ಕಾಗಿ ಏನನ್ನು ನಿರ್ಲಕ್ಷಿಸದೆ ಕೆಲಸ ಮಾಡುವ ಸಂವಿಧಾನದ ನಾಲ್ಕನೇ
ಅಂಗವಾಗಿದ್ದಾರೆ ಎಂದರು.ಪ್ರಶಸ್ತಿ ಸ್ವೀಕರಿಸಿದ ಸಂಯುಕ್ತ ಕರ್ನಾಟಕ ಆವೃತ್ತಿಯ ಸ್ಥಾನಿಕ ಸಂಪಾದಕ ಸುಭಾಷ ಬಣಗಾರ ಅವರು ಮಾತನಾಡಿ ರಾಜ್ಯ ಸರ್ಕಾರವು ಪದವಿ ಹಂತದಲ್ಲಿ ಪತ್ರಿಕೋದ್ಯಮವು ಒಂದು ಐಚ್ಛಿಕ ಭಾಷೆಯನ್ನಾಗಿ ಸೇರಿಸಬೇಕು.ಅಂದಾಗ ಮಾತ್ರ ಮಾಧ್ಯಮ ವಲಯದ ಬಗ್ಗೆ ಅರಿವು ಮೂಡಲು ಸಾಧ್ಯವಾಗಲಿದೆ.ಮುದ್ರಣ ಮಾಧ್ಯಮಕ್ಕೆ ಇಂದಿಗೂ ತನ್ನದೇಯಾದ ಬೆಲೆಯಿದ್ದು,ಆಧುನಿಕ
ಜಗತ್ತಿಗೆ ತಕ್ಕಂತೆ ಜನರಿಗೆ ತಲುಪುವ ರೀತಿಯಲ್ಲಿ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ.ಪತ್ರಕರ್ತರಾದವರು
ಅಕ್ರಮ,ಅಪರಾಧ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡದೆ ಜನೋಪಯೋಗಿ ಸುದ್ದಿಗೆ ಹೆಚ್ಚಿನ ಮಹತ್ವ
ನೀಡುವ ಕೆಲಸ ಮಾಡಬೇಕಾಗಿದೆ ಎಂದು ಅವರು ಕಿವಿಮಾತು ಹೇಳಿದರು.ಪ್ರಶಸ್ತಿ ಪುರಸ್ಕೃತ ಪತ್ರಕರ್ತ ನಾಗಪ್ಪಮಾಲಿ ಪಾಟೀಲ ಅವರು ಮಾತನಾಡಿ ಬದಲಾದ ಕಾಲಘಟ್ಟದಲ್ಲಿ ಇಂದು ಎಲ್ಲಾ ಪತ್ರಿಕೆಗಳು ಈ ಪೇಪರ್
ಹೊಂದುವ ಮೂಲಕ ಜನರನ್ನು ತಲುಪುತ್ತಿದೆ.ಜನಭಿಪ್ರಾಯ ಮೂಡಿಸುವಲ್ಲಿ ಮಾಧ್ಯಮ ಪ್ರಮುಖ ಪಾತ್ರವಹಿಸುತ್ತಿದೆ ಎಂದರು,ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನದ ಅಧ್ಯಕ್ಷ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ವೀರಭದ್ರಯ್ಯ ಸ್ವಾಮಿ ರುದೂರ, ಶರಣಬಸಪ್ಪ ಹಾಗರಗಿ, ಸಿದ್ದಪ್ಪ ತಳ್ಳಳ್ಳಿ, ಪ್ರಭಾಕರ ಜೋಶಿ,ರಾಜಶೇಖರ ನೀಲಂಗಿ, ಡಾ.ಸದಾನಂದ ಬೂದಿ, ಶಂಕರ ಮಾಮನಿ, ಪತ್ರಕರ್ತರ ಸಂಘದ ಅಧ್ಯಕ್ಷ ಶರಣಪ್ಪಮಹಾಗಾಂವ, ಅನಂತಯ್ಯ ಮುಸ್ತಾಜರ, ಪ್ರತಿಷ್ಠಾನದ ಕಾರ್ಯದರ್ಶಿ ದತ್ತಾತ್ರೇಯ ಐನಾಪುರ, ಶಂಕ್ರಪ್ಪ ಕೋಸಗಿ, ಬಸವರಾಜ ಬಾಳಿ, ಜಗದೀಶ ಕಡಬಗಾಂವ ಇದ್ದರು, ಮೋನಪ್ಪ ಪೋದ್ದಾರ ಪ್ರಾರ್ಥಿಸಿದರು.ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮಣಿಪಾಲರೆಡ್ಡಿ ಮುನ್ನೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು,ಪತ್ರಕರ್ತ ಸಿದ್ದಯ್ಯ ಸ್ವಾಮಿ ಆಡಕಿ ನಿರೂಪಿಸಿದರು.ಪ್ರತಿಷ್ಠಾನದ ಸಂಸ್ಥಾಪಕ ನಾಗಯ್ಯ
ಸ್ವಾಮಿ ಬೊಮ್ನಳ್ಳಿ ವಂದಿಸಿದರು.