ಶರಣ ಸಂಸ್ಕೃತಿ ಬಿತ್ತುವಲ್ಲಿ ಪ್ರವಚನ ಸಹಕಾರಿ
ಭಾಲ್ಕಿ:ಜು.೨೪:ಮನುಷ್ಯನಲ್ಲಿಯ ದುರ್ಗುಣಗಳನ್ನು ಹೊಡೆದುಹಾಕಿ ಸದ್ಗುಣ, ಸದ್ವಿಚಾರ ಮತ್ತು ಶರಣ ಸಂಸ್ಕೃತಿ ಬಿತ್ತುವಲ್ಲಿ ಪ್ರವಚನ ಅತ್ಯಂತ ಸಹಕಾರಿ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು. ಪಟ್ಟಣದ ಚನ್ನಬಸವಾಶ್ರಮದಲ್ಲಿ ಸೋಮವಾರ ಆಯೋಜಿಸಿದ್ದ ಶ್ರಾವಣ ಮಾಸದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಪಟ್ಟಣದಲ್ಲಿ ಒಂದು ತಿಂಗಳ ಕಾಲ ಭಕ್ತರಿಗೆ ಪ್ರವಚನದ ಮೂಲಕ ಜ್ಞಾನ ದಾಸೋಹ ಉಣಪಡಿಸುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಷಟ್‌ಸ್ಥಲ ದರ್ಶನ, ಅಲ್ಲಮ ಬೆಡಗಿನ ವಚನಗಳು, ಶರಣ ಜೀವನ ಶಾಂತ ಜೀವನ ಸೇರಿ ಮುಂತಾದ ವಿಷಯಗಳ ಮೇಲೆ ಪೂಜ್ಯರು ಪ್ರವಚನ ನೀಡಿ ಅರವಿನ ಜ್ಯೋತಿ ಬೆಳಗಿಸಿದ್ದಾರೆ ಎಂದರು.
ಈ ಬಾರಿಯು ಪಟ್ಟಣದಲ್ಲಿ ಆ.೫ ರಿಂದ ಸೆ.೪ರ ವರೆಗೆ ತಿಂಗಳ ಕಾಲ ನಿರಂತರ ಪ್ರವಚನ ನಡೆಯಲಿದೆ. ಶ್ರಾವಣ ಮಾಸದ ಕಾರ್ಯಕ್ರಮಗಳಲ್ಲಿ ಪ್ರವಚನದ ಜತೆಗೆ ಅಕ್ಕ ನಾಗಮ್ಮನವರ ಜಯಂತಿ, ಹಾಲು ಕುಡಿಸುವ ಹಬ್ಬ, ಡಂಬರಾಟ ಓಣಿಯ ಮಕ್ಕಳಿಗೆ ಹೊಸ ಬಟ್ಟೆ ಹಾಗೂ ಹಣ್ಣು ಹಂಪಲು ವಿತರಣೆ, ನುಲಿಯ ಚಂದಯ್ಯನವರ ಜಯಂತಿ, ಧಾರವಾಡ ತಪೋವನ ಶ್ರೀಗಳ ಜಯಂತಿ, ಶ್ರೀಮಠದ ಆಶ್ರಯದಲ್ಲಿ ಬೆಳೆಯುತ್ತಿರುವ ಸುದೈವಿ ಮಕ್ಕಳ ದಿನಾಚರಣೆಯನ್ನು ಪೂಜ್ಯ ಅಪ್ಪಗಳ ಜಯಂತಿ ಸೇರಿ ಪ್ರತಿದಿನ ಶ್ರೀಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ವಚನ ಭಜನೆ ಮತ್ತು ಪ್ರಸಾದ ದಾಸೋಹ ನಡೆಯಲಿದೆ ಎಂದು ತಿಳಿಸಿದರು.
ನಿರ್ಮಲಾ ಚಂದ್ರಕಾAತ ಪಾಟೀಲ್ ಆಯ್ಕೆ
ಶ್ರಾವಣ ಮಾಸದ ಅಂಗವಾಗಿಹಿರೇಮಠ ಸಂಸ್ಥಾನದ ವತಿಯಿಂದ ಪಟ್ಟಣದಲ್ಲಿ ತಿಂಗಳ ಕಾಲ ನಡೆಯಲಿರುವ ಪ್ರವಚನ ಸೇವಾ ಸಮಿತಿ ಅಧ್ಯಕ್ಷರನ್ನಾಗಿ ನಿರ್ಮಲಾ ಚಂದ್ರಕಾAತ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪೂಜ್ಯರು ನಿರ್ಮಲಾ ಚಂದ್ರಕಾAತ ಪಾಟೀಲ್ ದಂಪತಿಗಳನ್ನು ಸನ್ಮಾನಿಸಿ, ಆಶೀರ್ವದಿಸಿದರು. ಇದೇ ವೇಳೆ ಕಳೆದ ವರ್ಷದ ಶ್ರಾವಣ ಮಾಸದ ಸೇವಾ ಸಮಿತಿ ಅಧ್ಯಕ್ಷರಾಗಿದ್ದ ವಿದ್ಯಾವತಿ ಸೋಮನಾಥಪ್ಪ ಅಷ್ಟೂರೆ ಅವರನ್ನು ಕೂಡ ಸನ್ಮಾನಿಸಲಾಯಿತು.
ಪಟ್ಟಣದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಕಳೆದ ನಾಲ್ಕು ದಶಕಗಳಿಂದ ಪ್ರವಚನ ನಡೆಸಿಕೊಂಡು ಬರಲಾಗುತ್ತಿದೆ. ಪ್ರವಚನ ಯಶಸ್ವಿಗೆ ಪ್ರವಚನ ಸೇವಾ ಸಮಿತಿ ಸೇರಿ ಭಕ್ತರ ಸೇವೆ ದೊಡ್ಡದಿದೆ.