ಸಮಗ್ರ ಅಭಿವೃದ್ಧಿಯ ಬಜೆಟ್:ಹರ್ಷಾನಂದ ಗುತ್ತೇದಾರ
ಆಳಂದ:ಜು.೨೪:ಮೋದಿ ಸರ್ಕಾರದ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನಲ್ಲೇ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿ ದೇಶದ ಸಮಗ್ರ ಅಭಿವೃದ್ಧಿಯ ಭರವಸೆ ಹೊಂದಿದೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅವರು, ೨೦೪೭ರ ವೇಳೆಗೆ ವಿಕಸಿತ ಭಾರತ ಸಾಧನೆಗೆ ಅಡಿಪಾಯ ಹಾಕಲಿದ್ದು, ಮಧ್ಯಮ ವರ್ಗಕ್ಕೆ ತೆರಿಗೆ ರಿಲೀಫ್, ಉದ್ಯೋಗ ಸೃಷ್ಟಿ, ಕೃಷಿ, ಆರೋಗ್ಯ, ಮಹಿಳೆಯರು ಮತ್ತು ಯುವಕರಿಗೆ ಆದ್ಯತೆ, ಮೂಲಸೌಕರ್ಯ ಹಾಗೂ ಆರೋಗ್ಯಕ್ಕೆ ಒತ್ತು ನೀಡಲಿದೆ ಎಂದು ತಿಳಿಸಿದ್ದಾರೆ.
೧.೫೨ ಲಕ್ಷ ಕೋಟಿ ರೂ. ಹಣ ಕೃಷಿ ವಲಯಕ್ಕೆ ಮೀಸಲು, ದೇಶದ ೧೦೦ ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸರ್ವೆ ನಡೆಸಲು ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನ ೫ ರಾಜ್ಯಗಳಲ್ಲಿ ನೀಡಲು ಕೇಂದ್ರ ಸಿದ್ದತೆ, ಸಹಜ ಕೃಷಿಗೆ ಆದ್ಯತೆ ನೀಡಲು ಸರ್ಕಾರದ ಸರ್ವ ಕ್ರಮ, ತರಕಾರಿ ಬೆಳೆಗಳ ಉತ್ಪಾದನೆ, ಸಂಗ್ರಹ ಉತ್ತೇಜನಕ್ಕಾಗಿ ರೈತರಿಗೆ ನೆರವು, ಗ್ರಾಮೀಣ ಭಾಗದ ಆರ್ಥಿಕತೆ ವೃದ್ದಿಗೆ ಆದ್ಯತೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮುಂದಿನ ೫ ವರ್ಷಕ್ಕೆ ವಿಸ್ತರಣೆ, ಉದ್ಯೋಗ, ಎಂಎಸ್‌ಎAಇ ಹಾಗೂ ಮಧ್ಯಮ ವರ್ಗದವರನ್ನು ಗುರಿಯಾಗಿಸಿ ಹಲವು ಯೋಜನೆ, ಬಡವರು, ಮಹಿಳೆಯರು, ರೈತರು ಹಾಗೂ ಯುವಕರತ್ತ ಸರ್ಕಾರದ ಚಿತ್ತ, ವಿಕಸಿತ ಭಾರತದ ಆಶಯದೊಂದಿಗೆ ಹಲವು ಆರ್ಥಿಕ ಸುಧಾರಣಾ ಕ್ರಮ, ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ ೧.೪೮ ಲಕ್ಷ ಕೋಟಿ ಮೀಸಲು, ಕೇಂದ್ರ ಬಜೆಟ್‌ನಲ್ಲಿ ಒಟ್ಟು ೯ ಅಂಶಗಳಿಗೆ ಆದ್ಯತೆ, ಕೃಷಿ, ಉದ್ಯೋಗ, ಸಾಮಾಜಿಕ ನ್ಯಾಯ, ಸೇವೆ, ನಗರ ಅಭಿವೃದ್ಧಿ, ಇಂಧನ ಹಾಗೂ ಸಂಶೋಧನೆಗೆ ಆದ್ಯತೆ ಬಜೆಟ್‌ನಲ್ಲಿ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ