ಸಮಾಜವನ್ನು ಸರಿದಾರಿಗೆ ತರುವ ಶಕ್ತಿ ಪತ್ರಕರ್ತರಿಗಿದೆ: ವಿಜಯಸಿಂಗ್
ಬೀದರ: ಜು.೨೪:ಸಮಾಜವನ್ನು ತಿದ್ದಿ ತೀಡಿ ಅದನ್ನು ಸರಿದಾರಿಗೆ ತರುವ ಶಕ್ತಿ ಮಾಧ್ಯಮ ಕ್ಷೇತ್ರಕ್ಕಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್ ನುಡಿದರು.
ಬುಧವಾರ ಬಸವಕಲ್ಯಾಣ ನಗರದ ಯಾತ್ರಿ ನಿವಾಸದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬಸವಕಲ್ಯಾಣ ತಾಲೂಕು ಘಟಕದ ವತಿಯಿಂದ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾದ್ಯಮ ಕ್ಷೇತ್ರವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಪ್ರಜೆಗಳ ಧ್ವನಿಯನ್ನು ಸರ್ಕಾರಕ್ಕೆ ಮುಟ್ಟಿಸುವ ಸರ್ಕಾರದ ನಡೆಯನ್ನು ಜನಮಾನಸಕ್ಕೆ ತಲುಪಿಸುವ ಮಹತ್ತರ ಕಾರ್ಯ ಪತ್ರಿಕಾರಂಗ ಮಾಡುತ್ತಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ೧೯೩೨ರಲ್ಲಿ ಮೈಸೂರು ಅರಸರ ಕಾಲದಲ್ಲಿ ಡಿ.ವಿ. ಗುಂಡಪ್ಪ ಅವರಿಂದ ಹುಟ್ಟಿಕೊಂಡ ಸಂಸ್ಥೆ ಇದಾಗಿದೆ. ಒಂದು ಶತಕತ ಸನಿಹದಲ್ಲಿರುವ ಈ ಸಂಸ್ಥೆ ದಶಸಹಸ್ರ ಸದಸ್ಯರನ್ನು ಹೊಂದಿರುವುದು ದೇಶದ ದೊಡ್ಡ ಸಂಘಟನೆಗಳಲ್ಲಿ ಇದೂ ಒಂದು. ಈ ಪವಿತ್ರ ಸಂಸ್ಥೆಯಿAದ ಇಂದು ಪತ್ರಿಕಾ ದಿನಾಚರಣೆ ಜರುಗುತ್ತಿರುವುದು ನನಗೆ ಸಂತಸ ತಂದಿದ್ದು, ಬಸವಣ್ಣನ ಕರ್ಮಭೂಮಿ ಈ ಕಲ್ಯಾಣ ನಾಡಿನಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪತ್ರಕರ್ತರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತ ಮುಂಬರುವ ದಿನಗಳಲ್ಲಿ ಇಲ್ಲಿಯ ಪತ್ರಕರ್ತರ ಹಾಗೂ ಅವರ ಕುಟುಂಬದ ಯಾವುದೇ ಸಮಸ್ಯೆಗಳಿದ್ದರೂ ಮುಕ್ತವಾಗಿ ಹಾಗೂ ನ್ಯಾಯೋಚಿತವಾಗಿ ಪರಿಹರಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡುವುದಾಗಿ ಭರವಸೆ ನೀಡಿದರು.
ಅನುಭವ ಮಂಟಪದ ಅಧ್ಯಕ್ಷರು ಹಾಗೂ ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿರುವ ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಉದಯವಾಣಿ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಮುಖ್ಯ ವರದಿಗಾರ ಅಮರೇಗೌಡ ಗೋನವಾರ ಅವರಿಗೆ ಶಂಕರಪ್ರಸಾದ ದುಬೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ಥಳೀಯ ನಗರಸಭೆ ಪೌರಾಯುಕ್ತ ರಾಜು ಡಿ ಬಣಕಾರ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲಫಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬಸವಕಲ್ಯಾಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಾರ್ತಾಂಡ ಜೋಶಿ ಅಧ್ಯಕ್ಷತೆ ವಹಿಸಿರುವ ಕಾರ್ಯಕ್ರಮದಲ್ಲಿ ನಿವೃತ್ತ ಇಂಜಿನಿಯರ್ ಚಂದ್ರಶೇಖರ ದುಬೆ, ಸಂಘದ ಪದಾಧಿಕಾರಿಗಳಾದ ವಿರಶೆಟ್ಟಿ ಮಲಶೆಟ್ಟಿ, ಡಿ.ಕೆ.ಪ್ರಹ್ಲಾದ್, ಗುರುನಾಥ ಗಡ್ಡೆ, ಪ್ರದೀಪ ವಿಸಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆರಂಭದಲ್ಲಿ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಉದಯ ಮೂಳೆ ಸ್ವಾಗತಿಸಿದರು. ತಾಲೂಕಿನ ಎಲ್ಲಾ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.