ಪೂಜೆ ನೆಪ, ನಂದಿ ವಿಗ್ರಹ ಕದ್ದ ಅಂತಾರಾಜ್ಯ  ಕಳ್ಳರು ಅಂದರ್.
ಕೂಡ್ಲಿಗಿ. ಜು.24 :- ನಿಧಿ ಆಸೆಗಾಗಿ ದೇವಸ್ಥಾನದ ನಂದಿ ವಿಗ್ರಹ ಕದ್ದೋಯ್ದ ಅಂತಾರಾಜ್ಯ ವಿಗ್ರಹ ಕಳ್ಳರನ್ನು ಪ್ರಕರಣ ದಾಖಲಾದ ವಾರದೊಳಗೆ  ತಾಲೂಕಿನ ಗುಡೇಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ  ಪತ್ತೆ ಹಚ್ಚಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಜರುಗಿದೆ.
ಈಗ್ಗೆ ಎರಡೂವರೆ ತಿಂಗಳ ಹಿಂದೆ ಗುಡೇಕೋಟೆ ಪೊಲೀಸ್ ಠಾಣಾ ಸರಹದ್ದಿನ ಕೊಂಬಿಹಳ್ಳಿ ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ಇದ್ದ ನಂದಿ ವಿಗ್ರಹವನ್ನು ಪೂಜೆ ಮಾಡುವ ನೆಪದಲ್ಲಿ ಬಂದು ಹೋಗುತ್ತಿದ್ದ ಕಳ್ಳರು ಎರಡೂಮೂರು ದಿನದ ನಂತರ ರಾತ್ರಿ ಸಮಯದಲ್ಲಿ ಬಂದು ದೇವಸ್ಥಾನದ ಬೀಗ ಜಡಿದು ನಂದಿ ವಿಗ್ರಹ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ನಂತರ ಈ ಬಗ್ಗೆ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದರ ಬೆನ್ನತ್ತಿದ ಪೊಲೀಸರು ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಹರಿಬಾಬು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಲಿಂಪಾಷಾ, ಕೂಡ್ಲಿಗಿ ಡಿವೈಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ, ಕೂಡ್ಲಿಗಿ ಸಿಪಿಐ ಸುರೇಶ ಹೆಚ್ ತಳವಾರ ಅವರ ಮಾರ್ಗದರ್ಶನದಲ್ಲಿ ಗುಡೇಕೋಟೆ ಪಿಎಸ್ಐ ಜಿ.ಸುಬ್ರಮಣ್ಯo ಅವರ ನೇತೃತ್ವದಲ್ಲಿ ಠಾಣಾ ಎಎಸ್ ಐ ಗಳಾದ  ನಾಗೇಂದ್ರಚಾರಿ, ಬಾಬಾ ಪಕ್ಕದ್ದೀನ್ ಮತ್ತು ಮುಖ್ಯಪೇದೆಗಳಾದ  ಉಜ್ಜಪ್ಪ, ಮಹಂತೇಶ ,  ಗುರುಸ್ವಾಮಿ, ನಾಗೇಶ, ಕೀರ್ತಿರಾಜ್,  ಬಸವರಾಜ, ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿ.ಡಿ.ಆರ್ ಘಟಕದ ಸಿಬ್ಬಂದಿ ಕುಮಾರ್ ನಾಯ್ಕ ಇವರುಗಳ ತಂಡ ಕಾರ್ಯಾಚರಣೆ ನಡೆಸಿ  ಆರೋಪಿತರನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪತ್ತೆ  ಕಾರ್ಯದಲ್ಲಿ ತೊಡಗಿ  ಯೋಜನೆ ರೂಪಿಸಿದ ಪೊಲೀಸರ ತಂಡ  ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಕೂರು ತಾಲೂಕಿನ ಹಾನಗಲ್ ಕ್ರಾಸ್ ಹತ್ತಿರ ಆರೋಪಿಗಳಾದ ಆಂಧ್ರಪ್ರದೇಶದ ಧರ್ಮಾವರಂನ  ರಾಮಾಂಜಿನೇಯಲು  (38), ಮಾಲೀನ್ ಬಾಷಾ ( 40), ನಿಮ್ಮಲಗುಂಟ ಪ್ರವೀಣ್ ಕುಮಾರ (25) ಎಂಬುವವರನ್ನು ವಶಕ್ಕೆ ಪಡೆದು ಅವರನ್ನು ವಿಚಾರಿಸಿದಾಗ ಆನಂತಪುರಂನ  ನರಸಿಂಹಲು  ಕಳುವಿನ ಯೋಜನೆ  ರೂಪಿಸಿ  ನಂದಿ ವಿಗ್ರಹವನ್ನು ಕಳ್ಳತನ ಮಾಡಿಕೊಂಡು ಬರಲು ಹೇಳಿದಂತೆ   ರಾಮಾಂಜನೇಯಲು ಮತ್ತು ಮಾಲೀನ್ ಬಾಷಾ ನಂದಿ  ವಿಗ್ರಹವನ್ನು ರಾತ್ರಿ ಸಮಯದಲ್ಲಿ ದೇವಸ್ಥಾನದ ಬೀಗ ಮುರಿದು ಕಳ್ಳತನ ಮಾಡಿ ನಂದಿ ವಿಗ್ರಹದಲ್ಲಿ ಬೆಲೆ ಬಾಳುವ ಆಭರಣಗಳು ಇರುತ್ತವೆಂದು ನಂಬಿ ನಿಧಿಯ ಆಸೆಯಲ್ಲಿ  ಅದನ್ನು ಹೊಡೆದು ಚೂರು ಚೂರು ಮಾಡಿದ್ದು, ವಿಗ್ರಹದಲ್ಲಿ ಯಾವುದೇ ಬೆಳೆ ಬಾಳುವ ಆಭರಣಗಳು ಕಂಡು ಬರದ ಕಾರಣ ವಿಗ್ರಹವನ್ನು ಕೊಂಬಿಹಳ್ಳಿ ಗ್ರಾಮದ ಊರ ಹೊರಗೆ ಇರುವ  ಹಳ್ಳದಲ್ಲಿ ಬಿಸಾಡಿ ಹೋಗಿದ್ದು, ಬಿಸಾಡಿದ ವಿಗ್ರಹದ ತುಣುಕುಗಳನ್ನು ಆರೋಪಿತರಿಂದ ವಶಕ್ಕೆ ಪಡೆದುಕೊಂಡು ನಂದಿ ವಿಗ್ರಹದ ಮೇಲಿದ್ದ ಬೆಳ್ಳಿಯ ಚಿಕ್ಕ ಆಭರಣಗಳನ್ನು ನರಸಿಂಹಲೂ ಆರು ಸಾವಿರ ರೂ ಗೆ ಮಾರಾಟ ಮಾಡಿದ್ದು  ಸದರಿ ಹಣವನ್ನು ತನಿಖೆ ಸಮಯದಲ್ಲಿ  ವಶಪಡಿಸಿಕೊಳ್ಳಲಾಗಿದೆ ಅಲ್ಲದೆ ಇದೇ ಕಳ್ಳತನ ಪ್ರಕರಣದಲ್ಲಿ  ಬಾಗಿಯಾದ ಮತ್ತಿಬ್ಬರು ಆರೋಪಿತರಾದ ತಾಲೂಕಿನ  ತಿಮ್ಮನಹಳ್ಳಿ ಗ್ರಾಮದ ಮಲ್ಲಿಕಾರ್ಜುನ @ ಮಲ್ಲಿಕಪ್ಪ (47) ಹಾಗೂ ಸ್ಥಳೀಯ  ಕೊಂಬಿಹಳ್ಳಿ ಗ್ರಾಮದ  ಮಲ್ಲೇಶಪ್ಪ ( 59) ಇವರನ್ನು ಸಹ ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅವರು ಕಳ್ಳತನ ಮಾಡುವ ಬಗ್ಗೆ ಸಹಕರಿಸಿರುವುದಾಗಿ ತಿಳಿದು ಬಂದಿರುತ್ತದೆ.ಒಟ್ಟಿನಲ್ಲಿ ನಿಧಿ ಆಸೆಗೆ ನಂದಿ ವಿಗ್ರಹ ಕದ್ದ ಕಳ್ಳರನ್ನು  ಈಗ ಪೋಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
 ಗುಡೇಕೋಟೆ ಠಾಣಾ ಸರಹದ್ದಿನ ಕೊಂಬಿಹಳ್ಳಿ ಬಸವಣ್ಣ ದೇವಸ್ಥಾನದ ನಂದಿ ವಿಗ್ರಹ ಕಳ್ಳರನ್ನು ಅದರಲ್ಲೂ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ಆಧಿಕ್ಷಕ ಶ್ರೀಹರಿಬಾಬು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.