ಮತದಾರರಿಗೆ ಕೃತಜ್ಞತೆ ಸಮರ್ಪಣೆ
ಬೆಂಗಳೂರು, ಜು. ೨೪- ಪದವೀಧರ ಕ್ಷೇತ್ರದಿಂದ ರಾಮೋಜಿಗೌಡರ ಗೆಲುವ ನಿರೀಕ್ಷಿಸಿರಲಿಲ್ಲ ಅವರ ಜಯ ಅತ್ಯಂತ ಸ್ತುತ್ಯಾರ್ಹ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಅರಮನೆ ಮೈದಾನದ ಪಕ್ಕದಲ್ಲಿರುವ ಟೆನ್ನಿಸ್ ಪೆವಿಲಿಯನ್‌ನಲ್ಲಿ ನಡೆದ ಮತದಾರರಿಗೆ ಕೃತಜ್ಞತಾ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಕಳೆದ ಮೂರು ದಶಕಗಳ ಕಾಲ ಬಿಜೆಪಿ ಹಿಡಿತದಲ್ಲಿದ್ದ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ರಾಮೋಜಿ ಗೌಡ ಆಯ್ಕೆಯಾಗಿ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಬಿಜೆಪಿಗೆ ಮುಖಭಂಗವಾಗಿದೆ ಎಂದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ರಾಮೋಜಿಗೌಡರ ಗೆಲುವು ನಿರೀಕ್ಷಿಸಿರಲಿಲ್ಲ ಆದರೂ ಪದವೀಧರರು, ಶಿಕ್ಷಕರು, ನೌಕರರು ರಾಮೋಜಿಗೌಡರ ಕೈ ಹಿಡಿದು ಗೆಲುವು ನೀಡಿದ್ದಾರೆಂದರು. ವಕ್ಫ್ ವ್ಯವಹಾರಗಳ ಖಾತೆ ಸಚಿವರಾದ ಬಿಜೆಡ್ ಜಮೀರ್ ಅಹ್ಮದ್ ಖಾನ್ ಅವರು ಮಾತನಾಡಿ,
ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ರಾಮೋಜಿ ಗೌಡರ ಗೆಲುವಿಗೆ ಶ್ರಮಿಸಿದ, ಶಿಕ್ಷಕರು, ಉಪನ್ಯಾಸಕರು, ಪದವಿಧರರು, ನೌಕರರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತಾ ಸಮರ್ಪಣಾ ಸಮಾರಂಭ ಇದೊಂದು ಅಪರೂಪದ ಕ್ಷಣವಾಗಿದ್ದು, ಕಾಂಗ್ರೆಸ್ ಪಕ್ಷದ ನಮ್ಮ ಅಭ್ಯರ್ಥಿ ರಾಮೋಜಿಗೌಡರ ಆಯ್ಕೆ ಮಾಡಿದ ಮತದಾರ ಪ್ರಭಗಳಿಗೆ ಕೃತಜ್ಞತೆ ಹೇಳುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ ಅವರು ಇದು ನನ್ನ ಗೆಲುವಲ್ಲ ಪ್ರತಿಯೊಬ್ಬ ಪದವೀಧರರು ಶಿಕ್ಷಕರು, ಉನ್ನತ ವ್ಯಾಸಂಗ ಮಾಡಿರುವ ಬುದ್ದಿಜೀವಿಗಳ ಪ್ರತಿನಿಧಿಯಾಗಿ ನನ್ನ ಆಯ್ಕೆ ಮಾಡಿರುವುದಕ್ಕೆ ಸದಾ ಋಣಿಯಾಗಿರುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್ ಮುನಿಯಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ, ಮಾಜಿ ಸಂಸದ ಡಿ ಕೆ.ಸುರೇಶ್, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ನಗರದ ಅರಮನೆ ಮೈದಾನದ ಟೆನ್ನಿಸ್ ಪೆವಿಲಿಯನ್‌ನಲ್ಲಿ ನಡೆದ ಮತದಾರರಿಗೆ ಕೃತಜ್ಞತಾ ಸಮರ್ಪಣಾ ಸಮಾರಂಭವನ್ನು ಸಚಿವ ಎಂ.ಸಿ. ಸುಧಾಕರ್ ರವರು ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯರುಗಳಾದ ರಾಮೋಜಿಗೌಡ, ಪುಟ್ಟಣ್ಣ, ಮತ್ತಿತರರು ಉಪಸ್ಥಿತರಿದ್ದರು.