ಸಂಜೀವಿನಿ ಶೆಡ್‌ಗೆ ಸಿಇಓ ಭೇಟಿ, ಪರಿಶೀಲನೆ
ಬಾಗಲಕೋಟೆ,ಜು.೨೪: ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ಸಂಜೀವಿನಿ ಶೆಡ್ ಕಾಮಗಾರಿಯನ್ನು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಭೇಟಿ ನೀಡಿ ಪಡಿಶೀಲಿಸಿದರು.
ಭೇಟಿ ನೀಡಿದ ಸಂದರ್ಭದಲ್ಲಿ ಸಂಜೀವಿನಿ ಶೆಡ್ ಅಲ್ಲದೇ ಅದರ ಪಕ್ಕದಲ್ಲಿರುವ ಓವರ್‌ಹೆಡ್ ನೀರಿನ ಟ್ಯಾಂಕ್ ವೀಕ್ಷಿಸಿ ಅಲ್ಲಿ ಸತತವಾಗಿ ನೀರು ಪೂರೈಕಾ ಆಗುವದರ ಬಗ್ಗೆ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಜೊತೆಗೆ ಚರ್ಚಿಸಿದರು. ನೀರಿನ ಗುಣಮಟ್ಟವನ್ನು ಮತ್ತು ಶುಚಿತ್ವದ ಬಗ್ಗೆ ಗಮನ ಹರಿಸಲು ಸೂಚಿಸಿದರು.
ತುಂಗಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ತೋಟಗಾರಿಕೆ ಇಲಾಖೆಯಿಂದ ನಿರ್ಮಿಸಲಾದ ಕೃಷಿ ಹೊಂಡಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ನಂತರ ಅಲ್ಲಿಯ ಸರಕಾರಿ ಶಾಲೆಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಕೈಗೊಂಡ ಫೇರ‍್ಸ್ ಕಾಮಗಾರಿ ಪರಿಶೀಲಿಸಿ, ಶಾಲಾ ಆಹಾರ ಸಾಮಗ್ರಿಗಳ ದಾಸ್ತಾನು ಕೊಠಡಿಗೆ ಭೇಟಿ ನೀಡಿ ಅಡಿಗೆ ಕೋಣೆಯ ಸುರಕ್ಷತೆ, ಗುಣಮಟ್ಟದ ಬಗ್ಗೆ ಕಾಳಜಿ ವಹಿಸಲು ಸೂಚಿಸಿದರು. ನಂತರ ಶಾಲೆಯ ವಿದ್ಯಾರ್ಥಿಗಳ ಕೊಠಡಿಗೆ ಭೇಟಿ ನೀಡಿ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ನೀಡಬೇಕಾದ ಸೌಲಭ್ಯಗಳ ಕುರಿತು ಚರ್ಚಿಸಿದರು.
ವಲಯ ಅರಣ್ಯ ಇಲಾಖೆ ವತಿಯಿಂದ ನರೇಗಾ ಯೋಜನೆಯಡಿ ಸಸಿ ನೆಡುವ ಕಾರ್ಯಕ್ರಮ ವೀಕ್ಷಿಸಿದರು. ಶೂರಪಾಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ತುಬಚಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ನಿರ್ಮಿತವಾದ ಸಾವಯವ ಬೆಲ್ಲ ಹಾಗೂ ಎಣ್ಣೆ ಉತ್ಪಾದನೆ ಮಾಡುವ ರೈತರೊಂದಿಗೆ ಸಮಾಲೋಚನೆ ನಡೆಸಿದರು. ಕೃಷ್ಣಾ ನದಿ ನೀರಿನ ಮಟ್ಟವನ್ನು ಗಮನಿಸಿ ಜನ ಜಾನುವಾರುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಲು ತಿಳಿಸಿದರು.
ಸಾವಳಿಯಿಂದ ಜಮಖಂಡ ಮಾರ್ಗವಾಗಿ ಸಾಗುವ ಬಿಕೆ ಜಂಬಗಿ ರಸ್ತೆ ಪಕ್ಕದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಯನ್ನು ವೀಕ್ಷಿಸಿದರು. ಕಾಮಗಾರಿ ನಿರ್ವಹಣೆಯಿಂದಾಗಿ ರಸ್ತೆ ಮಧ್ಯದಲ್ಲಿ ಬಿದ್ದಿರುವ ಮಣ್ಣನ್ನು ತೆರವುಗೊಳಿಸಲು ಸೂಚಿಸಿದರು.
ಭೇಟಿ ಸಮಯದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಸಂಜೀವ ಜುನ್ನೂರ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಚೀನ ಮಾಚಕನೂರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯ ಕಾರ್ಯನಿರ್ವಾಹಕ ಅಭಿಯಂತರ ಜೆ.ಪಿ.ಶೆಟ್ಟಿ, ಕಿರಣ ದಾಸರಡ್ಡಿ, ಸಾಮಾಜಿಕ ಅರಣ್ಯ ಇಲಾಖೆಯ ಕಿರಣ ದಾಸರಡ್ಡಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ, ತಾ.ಪಂ ಸಹಾಯಕ ನಿರ್ದೇಶಕ ಸಿದ್ದಾರ್ಥ ಗೋಟೆ ಸೇರಿದಂತೆ ಇತರರು ಇದ್ದರು.