ಡಿಜಿಟಲ್ ಸಹಿಯ ಮೊದಲ ಜನನ ಪ್ರಮಾಣ ಪತ್ರ ನೀಡಿಕೆ
ಕೋಲಾರ,ಜು,೨೪:ಇನ್ನು ಡಿಜಿಟಲ್ ಸಹಿ ಆಧಾರಿತ ಜನನ, ಮರಣ ನೋಂದಣಿ ಪ್ರಮಾಣ ಪತ್ರವನ್ನು ಗ್ರಾಮ ಪಂಚಾಯಿತಿಯಲ್ಲೇ ನೀಡುತ್ತಿರುವುದರಿಂದ ಗ್ರಾಮೀಣ ಜನತೆ ಜನನ,ಮರಣದ ೩೦ ದಿನದೊಳಗೆ ನೋಂದಾಯಿಸಿ ಡಿಜಿಟಲ್ ಸಹಿಯ ಜನನ,ಮರಣ ಪ್ರಮಾಣಪತ್ರ ಪಡೆಯಿರಿ ಎಂದು ಸೂಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಕರೆ ನೀಡಿದರು.
ತಾಲ್ಲೂಕಿನ ಸೂಲೂರು ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಜನನಮರಣ ಪ್ರಮಾಣಪತ್ರ ಗ್ರಾ.ಪಂನಲ್ಲೇ ವಿತರಿಸುವ ಯೋಜನೆಗೆ ಚಾಲನೆ ನೀಡಿ ತಮ್ಮ ಗ್ರಾ.ಪಂನಿಂದ ಮೊದಲ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡುತ್ತಿದ್ದರು.
ಜನನ, ಮರಣ ಸಂಭವಿಸಿದ ೩೦ ದಿನದ ಒಳಗೆ ನೋಂದಾಯಿಸಿ ಇ-ಜನ್ಮ ತಂತ್ರಾಂಶದ ಮೂಲಕ ಪ್ರಮಾಣಪತ್ರ ವಿತರಿಸಲು ಕ್ರಮವಹಿಸಲಾಗುತ್ತಿದೆ, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕಲು ಎಂದು ಕೋರಿದರು.
ಜನರು ಪದೇಪದೆ ಕೆಲಸ ಬಿಟ್ಟು ಕಚೇರಿಗಳಿಗೂ ಅಲೆಯಬೇಕಾಗಿಲ್ಲ. ನೋಂದಣಿಯೂ ಬೇಗ ನಡೆಯಲಿದೆ. ನಂತರ ಪ್ರಮಾಣ ಪತ್ರವೂ ಸಿಗಲಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿಯವರೇ ಉಪ ನೋಂದಣಾಧಿಕಾರಿ ಆಗಿರುತ್ತಾರೆ ಎಂದು ತಿಳಿಸಿದರು.
ಜನನ, ಮರಣ ಸಂಭವಿಸಿದ ೩೦ ದಿನದ ಒಳಗೆ ಪ್ರಮಾಣಪತ್ರ ಬೇಕಾದಲ್ಲಿ ಗ್ರಾಮಪಂಚಾಯತಿ ಕಾರ್ಯದರ್ಶಿ ಅವರೇ ವಿತರಿಸುವರು. ೩೦ ದಿನಗಳ ನಂತರವಾದರೆ ಗ್ರಾಮ ಲೆಕ್ಕಾಧಿಕಾರಿಗಳು ನೋಂದಣಾಧಿಕಾರಿ ಆಗಿರುತ್ತಾರೆ. ಇವರ ಬಳಿ ನೋಂದಣಿ ಮಾಡಿಸಿ, ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ. ಈ ಸಂಬಂಧ ಈಗಾಗಲೇ ಗ್ರಾಮ ಪಂಚಾಯಿತಿ ಸಿಬ್ಬಂದಿ ತರಬೇತಿ ಪಡೆದಿದ್ದಾರೆ ಎಂದು ತಿಳಿಸಿದರು.
ಹಿಂದೆಲ್ಲಾ ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ ಪಡೆಯಬೇಕೆಂದರೆ ನಾಡಕಛೇರಿಯಿಂದ ತಹಸೀಲ್ದಾರ್ ಕಛೇರಿಯವರೆಗೂ ಅಲೆದಾಡಬೇಕಾಗುತ್ತಿತ್ತು. ಆದರೂ ಅಧಿಕಾರಿಗಳು ಕೈಗೆ ಸಿಗದೇ ಸಾರ್ವಜನಿಕರು ಪರದಾಡುವ ಸ್ಥಿತಿ ಇತ್ತು ಎಂದರು.ರಾಜ್ಯ ಸರ್ಕಾರದ ಪಂಚಾಯ್ತಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯೇ ಈ ಬಗ್ಗೆ ಮುತುವರ್ಜಿ ವಹಿಸಿ ಎಲ್ಲೆಡೆ ಗ್ರಾಮ ಪಂಚಾಯಿತಿಗಳಿಗೆ ಈ ಅಧಿಕಾರ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿ, ಸಾರ್ವಜನಿಕರು ಈ ಸೌಲಭ್ಯ ಪಡೆಯಲು ಕೋರಿದರು.
ಪಿಡಿಒ ಬಾಲಾಜಿ ಮಾತನಾಡಿ, ಪಿಡಿಒಗಳನ್ನು ಜನನ-ಮರಣ ಪ್ರಮಾಣ ಪತ್ರ ವಿತರಣಾಧಿಕಾರಿಗಳನ್ನಾಗಿ ನೇಮಿಸುವ ಬದಲು ಗ್ರಾಪಂಕಾರ್ಯದರ್ಶಿಯವರನ್ನು ಉಪ ನೋಂದಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಈ ಸಂಬಂಧ ಇ-ಜನ್ಮ ತಂತ್ರಾಂಶದಲ್ಲಿ ಜನನ, ಮರಣ ನೋಂದಾಯಿಸಿ, ಪ್ರಮಾಣ ಪತ್ರಗಳನ್ನು ಡಿಜಿಟಲ್ ಸಹಿ ಮೂಲಕ ವಿತರಿಸಲು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ಡಿಜಿಟಲ್ ಕೀಗಳನ್ನು ಹೊಂದಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಂತಹಂತವಾಗಿ ಮಾಹಿತಿ ನೀಡುವುದರ ಜತೆಗೆ ನಮಗೆ ತರಬೇತಿಯನ್ನೂ ನೀಡಿದೆ ಎಂದರು.
ವಿವಾಹ ನೋಂದಣಿಯೂ ಗ್ರಾಮ ಪಂಚಾಯ್ತಿಗಳಲ್ಲೇ ನಡೆಯಲಿದೆ ಎಂದ ಅವರು, ಸಾರ್ವಜನಿಕರಿಗೆ ಕಚೇರಿಗಳಿಗೆ ಅಲೆದಾಟ ತಪ್ಪಲಿದ್ದು, ಮನೆಯ ಸಮೀಪವೇ ಗ್ರಾ.ಪಂನಲ್ಲಿ ಎಲ್ಲಾ ಸೌಲಭ್ಯಗಳು ಸಿಗುವಂತಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಎಸ್.ಎಂ.ರೂಪ, ಗ್ರಾ,ಪಂ ಸದಸ್ಯರಾದ ಜಿ.ಅಶೋಕ್, ಜಿ.ಗಾಯತ್ರಮ್ಮ, ವೆಂಕಟೇಶಪ್ಪ, ಸುಜಾತಮ್ಮ, ರಬೀನಾತಾಜ್, ಟಿ.ಎಸ್.ನರಸರಾಜು, ವಿ.ಆದಿಮೂರ್ತಿ, ಕೆ.ಶ್ಯಾಮಲ, ಎನ್.ಪದ್ಮ, ಎಸ್.ಚಂದ್ರಿಕಾ, ಎಸ್.ಲೋಕೇಶ್, ಸಿದ್ದಮ್ಮ ಕೃಷ್ಣಮೂರ್ತಿ, ಎಂ.ಶಿಲ್ಪ, ಸಿ.ವಿ.ಮುನಿರಾಜು, ಎಂ.ನಾರಾಯಣಸ್ವಾಮಿ, ಎಸ್.ನಂದೀಶ್, ಗ್ರಾ.ಪಂ ಕಾರ್ಯದರ್ಶಿ ಶ್ರೀನಿವಾಸಪ್ಪ, ಎಸ್‌ಡಿಎ ಎಂ.ಪ್ರದೀಪ್ ಮತ್ತಿತರರಿದ್ದರು.