ಘನತ್ಯಾಜ್ಯ ವಿಲೇವಾರಿಗೆ ಕಸ ವಿಂಗಡಿಸಿ ಸಹಕರಿಸಿ-ಪ್ರವೀಣ್ ಹಸಿಕಸ,ಒಣಕಸ ಬೇರ್ಪಡಿಸಿ ಸಂಗ್ರಹಿಸಲು ಪೋಷಕರಿಗೆ ತಿಳಿಸಿ
ಕೋಲಾರ,ಜು,೨೪- ಘನತ್ಯಾಜ್ಯ ವಿಲೇವಾರಿಗೆ ಕಸ ವಿಂಗಡಣೆಯ ಮೂಲಕ ಸಹಕಾರ ನೀಡಿ, ಸ್ಥಳೀಯ ಸಂಸ್ಥೆಗಳ ಕಾರ್ಮಿಕರೊಂದಿಗೆ ಸಹಕರಿಸಿ ಕಸದ ಸಮಸ್ಯೆ ನಿವಾರಣೆಗೆ ಪೋಷಕರಿಗೆ ಮನವರಿಕೆ ಮಾಡಿಕೊಡಿ ಎಂದು ಬೆಂಗಳೂರಿನ ಸಾಹಸ್ ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿ ಪ್ರವೀಣ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಘನತಾಜ್ಯ ವಿಲೇವಾರಿ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸ್ಥಳೀಯ ಸಂಸ್ಥೆಗಳಿಗೆ ಇಂದು ಕಸ ವಿಲೇವಾರಿ ಅತಿ ದೊಡ್ಡ ಸಮಸ್ಯೆಯಾಗಿದೆ, ಇದರ ನಿರ್ವಹಣೆ ಕಷ್ಟವೂ ಆಗಿದೆ ಎಂದ ಅವರು, ಜನತೆ ಮನೆಯಲ್ಲೇ ಒಣಕಸ,ಹಸಿಕಸ ವಿಲೇವಾರಿ ಮಾಡಿ ಕೊಟ್ಟರೆ ಅನುಕೂಲವಾಗುತ್ತದೆ ಎಂದರು.
ಸರ್ಕಾರ ಘನತ್ಯಾಜ್ಯ ವಿಲೇವಾರಿ ಕುರಿತು ಅರಿವು ನೀಡುವ ಕೆಲಸ ಮಾಡುತ್ತಿದೆ, ಹಸಿಕಸ, ಒಣಕಸ ಬೇರ್ಪಡಿಸಿ ಕೊಟ್ಟರೆ ಹಸಿ ಕಸ ಕೊಳೆಯುವುದರಿಂದ ಅದನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಹಾಗೂಕೊಳೆಯದ ಕಸವನ್ನು ಸಂಗ್ರಹಿಸಿ ಅದರಿಂದ ಬೇರೆ ಉತ್ಪನ್ನಗಳ ತಯಾರಿಕೆ, ರಸ್ತೆ ಅಭಿವೃದ್ದಿ ಮತ್ತಿತರ ಕಾರಣಗಳಿಗೆ ಮರಬಳಕೆಗೆ ಮಾಡುವುದರಿಂದ ಕಸದ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಮುಂದಿನ ದಿನಗಳಲ್ಲಿ ಕಸ ವಿಲೇವಾರಿಯೂ ಮಹಿಳೆಯರ ಸ್ವಾವಲಂಬಿ ಬದುಕಿಗೆ ಒಂದು ಉದ್ಯಮವಾಗುವಂತೆ ಮಾಡುವ ಚಿಂತನೆಯಿದೆ ಎಂದ ಅವರು, ಮಹಿಳೆಯರೇ ಕಸದ ವಾಹನ ನಿರ್ವಹಣೆ, ಕಸ ವಿಲೇವಾರಿಯ ನೇತೃತ್ವ ವಹಿಸಲಿದ್ದು, ಪ್ರತಿ ಮನೆಗೆ ೩೦ ರೂ ಶುಲ್ಕ ವಿಧಿಸಿ ಅವರು ಬದುಕುಕಟ್ಟಿಕೊಳ್ಳಲು ನೆರವಾಗುವಂತೆ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಮುಖ್ಯಶಿಕ್ಷಕಿ ಸಿದ್ದೇಶ್ವರಿ, ನಾವು ಒಂದುಮನೆಯ ಕಸವನ್ನು ವಿಂಗಡಿಸಿ ನೀಡಲು ಕಷ್ಟವಾದರೆ ಪೌರಕಾರ್ಮಿಕರು ಸಾವಿರಾರು ಮನೆಗಳ ಕಸವನ್ನು ವಿಂಗಡಿಸುವುದು ಹೇಗೆ ಎಂದು ತಿಳಿಸಿ, ನಿಮ್ಮ ಮನೆಯಲ್ಲಿ ಕಸ ವಿಂಗಡಿಸಿ ಸಂಗ್ರಹಿಸಲು ಪೋಷಕರಿಗೆ ಮನವರಿಕೆ ಮಾಡಿಕೊಡಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಭವಾನಿ, ಸುಗುಣಾ, ಶ್ವೇತಾ, ವೆಂಕಟರೆಡ್ಡಿ, ಫರೀದಾ, ಶ್ರೀನಿವಾಸಲು, ರಮಾದೇವಿ, ಚಂದ್ರಶೇಖರ್ ಮತ್ತಿತರರಿದ್ದರು.