ಇಲಾಖೆಯ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಿ:ಡಿ.ಎಂ.ಹೊಸಮನಿ
ಸೈದಾಪುರ:ಸೆ.೨೯:ಗುಣಮಟ್ಟದ ಶಿಕ್ಷಣಕ್ಕಾಗಿ ಇಲಾಖೆಯಿಂದ ಸೂಚಿಸಿರುವ ಸಂಲನಾತ್ಮಕ ಮೌಲ್ಯಮಾಪನದ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡುವ ಮೂಲಕ ಉತ್ತಮ ಕಲಿಕಾ ಪರಿಸರ ನಿರ್ಮಾಣ ಮಾಡುವಂತೆ ಡಯಟ್ ಹಿರಿಯ ಉಪನ್ಯಾಸಕರಾದ ಡಿ.ಎಂ.ಹೊಸಮನಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯಲ್ಲಿ ೮ ಮತ್ತು ೯ನೇ ತರಗತಿಗಳಿಗೆ ನಡೆಯುತ್ತಿರುವ ಎಸ್‌ಎ-೦೧ ಸಂಕಲನಾತ್ಮಕ ಮೌಲ್ಯಮಾಪನ ಕೇಂದ್ರಕ್ಕೆ ಮಾನ್ಯ ಅಪರ ಆಯುಕ್ತರ ಆದೇಶದಂತೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಕೋಣೆಗಳಿಗೆ ಭೇಟಿ ನೀಡಿ ಪರೀಕ್ಷೆ ನಡೆಸುತ್ತಿರುವ ಬಗೆಗೆ ಮಾಹಿತಿ ಪಡೆದರು. ಉತ್ತಮ ಕಲಿಕೆಗೆ ಸರಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಕಾಲ ಕಾಲಕ್ಕೆ ನೀಡುವ ಸರಕಾರದ ನಿಯಮಗಳನ್ನು ಪಾಲನೆ ಮಾಡಿ ಸಂಸ್ಥೆಯ ಮಹತ್ವ ಇನ್ನೂ ಹೆಚ್ಚಾಗುವಂತೆ ಮಾಡಲು ಪ್ರಯತ್ನಿಸಿ ಎಂದು ಹೇಳಿದರು. ಹಾಜರಿ ಇರುವ ವಿದ್ಯಾರ್ಥಿಗಳ ಹಾಗೂ ಕೇಂದ್ರದಲ್ಲಿ ನಿತ್ಯ ಕೈಗೊಳ್ಳುತ್ತಿರುವ ಕಾರ್ಯಗಳ ಬಗಗೆ ಮಾಹಿತಿ ಪಡೆದು ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಡಯಟ ಉಪನ್ಯಾಸಕರಾದ ಶಾಂತಪ್ಪ ಗುರಕಲ, ಶಾಲಾ ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಶಿಕ್ಷಕರು, ಸಿಬ್ಬಂದಿ ವರ್ಗ ಸೇರಿದಂತೆ ಇತರರಿದ್ದರು.