ಕನಿಷ್ಠ ಪಿಂಚಣಿ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಿಂಚಣಿದಾರರ ಬೃಹತ್ ಪ್ರತಿಭಟನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೯: ವಿಜಯಪುರದ ಇ.ಸಿ.ಎಸ್- ೯೫ ಪಿಂಚಣಿದಾರರು, ರಾಷ್ಟ್ರೀಯ ಸಂಘರ್ಷ ಸಮಿತಿಯ ಕರೆಯ ಮೇರೆಗೆ ವಿಜಯಪುರದ ಭವಿಷ್ಯ ನಿಧಿ ಕಛೇರಿ ಎದುರುಗಡೆ ಕನಿಷ್ಠ ಪಿಂಚಣಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ನೂರಾರು ಪಿಂಚಣಿದಾರರು ನಗರದ ಭವಿಷ್ಯ ನಿಧಿ ಕಚೇರಿಗೆ ಆಗಮಿಸಿ ಕನಿಷ್ಠ ಪಿಂಚಣಿ ಹೆಚ್ಚಳ ಮಾಡಲು ಮೊಂಡುತನ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎನ್.ಎ.ಸಿ. ವಿಜಯಪುರ ಅಧ್ಯಕ್ಷÀ ಎಸ್.ಜೆ.ಗೌಡರ ಅವರು ಮಾತಾನಾಡಿ, ಇ.ಪಿ.ಎಸ್-೯೫ ಪಿಂಚಣಿದಾರರು ಕಳೆದ ೧೦ -೧೨ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಮಹಾರಾಷ್ಟ್ರದ ಬುಲ್ಡಾನಾದಲ್ಲಿ ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡು ಇಂದಿಗೆ ೨೦೯೮ ದಿನಕ್ಕೆ ಕಾಲಿಟ್ಟರೂ ಕೇಂದ್ರ ಸರ್ಕಾರ ಹುಸಿ ಭರವಸೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು,
ಇದುವರೆಗೆ ಕನಿಷ್ಠ ಪಿಂಚಣಿ ರೂ.೭೫೦೦+ಡಿ. ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಬೇಡಿಕೆಯನ್ನು ಸರ್ಕಾರ ಇ.ಪಿ.ಎಫ್.ಓ, ಈಡೇರಿಸುತ್ತಿಲ್ಲ . ಪಿಂಚಣಿದಾರರ ಬವಣೆ ಹೇಳತೀರದ್ದಾಗಿದೆ. ಸೇವಾವಧಿಯಲ್ಲಿ ವಂತಿಗೆ ಕೊಟ್ಟು ಯೋಗ್ಯ ಪಿಂಚನೆ ಇಲ್ಲದೇ ಪಿಂಚಣಿದಾರರು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸರ್ಕಾರ ಬೇಗನೆ ಬೇಡಿಕೆಯನ್ನು ಈಡೇರಿಸಿ ವೃದ್ಧರನ್ನು ಗೌರವಯುತ ಜೀವನವನ್ನು ನಡೆಸಲು ಅನುಕೂಲ ಮಾಡಿಕೊಡಬೇಕೆಂದು ನ್ಯಾಮ್ಸ್ ನೇತಾರ ಎಂ.ಎ.ಮುಲ್ಲಾ ಹೇಳಿದರು.
ರಾಷ್ಟ್ರೀಯ ಸಂಘರ್ಷ ಸಮಿತಿಯ ಕರ್ನಾಟಕ ರಾಜ್ಯದ ಉಪಾಧ್ಯಕ್ಷ ವೀರಕುಮಾರ ಗಡಾದ ಅವರು ಮಾತನಾಡಿ, ಕಳೆದ ತಿಂಗಳು ಸತತವಾಗಿ ಇ.ಪಿ.ಎಫ್.ಓ. , ಕೇಂದ್ರ ಕಾರ್ಮಿಕ ಸಚಿವಾಲಯ ಹಾಗೂ ಹಣಕಾಸು ಸಚಿವಾಲಯ ಎನ್.ಎ.ಸಿ. ರಾಷ್ಟ್ರೀಯ ಅಧ್ಯಕ್ಷರಾದ ಕಮಾಂಡರ್ ಆಶೋಕ ರಾವುತ ಹಾಗೂ ಮುಖಂಡರ ಜೊತೆ ಸಭೆಗಳನ್ನು ನಡೆಸಿ ಒಂದು ನಿರ್ಧಾರಕ್ಕೆ ಬಂದು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಪ್ರಸ್ತಾವನೆಯು ಪ್ರಧಾನಿಯವರ ಕ್ಯಾಬಿನೆಟ್ ಮುಂದಿದ್ದು, ದೇಶದ ೭೮ ಲಕ್ಷ ಇ.ಪಿ.ಎಸ್.-೯೫ ಎಂಚಣಿದಾರರ ಕನಿಷ್ಠ ಪಿಂಚಣಿ ರೂ .೧೦೦೦ ದಿಂದ ೭೫೦೦+ ಡಿ.ಎ. ಮಂಜೂರು ಮಾಡಲು ಇನ್ನೂ ದಿನಗಳನ್ನು ಮುಂದೂಡಿ ಪಿಂಚಣಿದಾರರ ಬವಣೆ ನೀಗಿಸಲು ಕೇಂದ್ರ ಸರ್ಕಾರ ಇನ್ನೂ ಮನಸ್ಸು ಮಾಡುತ್ತಿಲ್ಲ. ಇದೇ ರೀತಿ ಕಾಲಹರಣವಾಗುತ್ತಾ ಹೋದರೆ ದೇಶದಲ್ಲಿ ದಿನಕ್ಕೆ ಸರಾಸರಿ ೨೦೦ ಜನ ಪಿಂಚಣಿದಾರರು ಮರಣವನ್ನು ಅಪ್ಪುತ್ತಿದ್ದು, ವೃದ್ಧರಿಗೆ ಇನ್ನೂ ಎಷ್ಟು ದಿನ ಪಿಂಚಣಿ ಹೆಚ್ಚಳಕ್ಕಾಗಿ ಕಾಯಬೇಕು ಅಂತಾ ಗೋಳಿಡುತ್ತಿದ್ದಾರೆ. ಈಗ ನಮ್ಮ ಬೇಡಿಕೆ ಈಡೇರದಿದ್ದರೆ ವೃದ್ಧರೂ ಉಗ್ರ ಹೋರಾಟಕ್ಕೆ ಮುಂದಾಗುವುದು ಖಚಿತ. ಪ್ರಧಾನಿ ಮೋದಿಯವರ ಸರ್ಕಾರ ಈಗಲಾದರೂ ಎಚ್ಚೆತ್ತು ವೃದ್ಧ ಪಿಂಚಣಿದಾರರ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ವಿಜಯಪುರ ಎನ್.ಇ.ಸಿ. ಕಾರ್ಯದರ್ಶಿ ಆರ್.ಎ.ಪನಿಬಂಧ, ಎ.ಆಯ್.ಟಿ.ಯು.ಸಿ.ಮುಖಂಡ ಗೋಪಾಲ ಬಿರಾದಾರ ಮತ್ತಿತರರು ಮಾತನಾಡಿ, ಪಿಂಚಣಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರದ ವಿಳಂಬ ಧೋರಣೆ ಖಂಡಿಸಿದರು.
ಇ.ಪಿ.ಎಫ್.ಓ.ಕಛೇರಿಯಲ್ಲಿ ಅಧಿಕಾರಿಗಳ ಮುಖಾಂತರ ಕೇಂದ್ರ ಕಾರ್ಮಿಕ ಕಲ್ಯಾಣ ಮಂತ್ರಿ ಮನಸುಖ ಮಾಂಡವಿಯಾ ಅವರಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು