ಗುರು ಎಂದರೆ ಜ್ಞಾನದ ಪ್ರತಿರೂಪ-ಶಾಸಕ ಶರತ್
ಕೋಲಾರ,ಜು.೨೪- ಗುರು ಎಂಬ ಪದದ ಅರ್ಥ ಸಂಸ್ಕೃತದಲ್ಲಿ ಕತ್ತಲೆಯಿಂದ ಬೆಳೆಕಿನೆಡೆಗೆ ಅಂದರೆ ಗುರುವಿನ ಮಾರ್ಗದರ್ಶನದಲ್ಲಿ ಜೀವನವನ್ನು ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವುದು ಎಂಬುದಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆಯ ವಿವೇಕಾನಂದ ಸಭಾಮಂಟಪದಲ್ಲಿ ನವಚೇತನ ಶಾಲಾ ನೃತ್ಯ ಕಲಾ ಅಕಾಡೆಮಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಾಸ ಮಹರ್ಷಿಗಳ ಜನ್ಮ ದಿನವನ್ನು ಗುರು ಪೂರ್ಣಿಮೆಯಾಗಿ ಆಚರಣೆ ಮಾಡುವುದು ಅಂದಿನ ಕಾಲದಿಂದಲೆ ಬಂದಿದ್ದು, ರಾಮಾಯಣ, ಮಹಾಭಾರತದಲ್ಲಿ ಗುರು ಶಿಷ್ಯರ ಸಂಬಂಧ ನಿಷ್ಟೆಗಳನ್ನು ಕಾಣಬಹುದಾಗಿದೆ. ಗುರುಗಳು ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಸನಾತನ ಧರ್ಮದಲ್ಲಿ ತಿಳಿಸಲಾಗಿದ್ದು, ಮಕ್ಕಳಿಗೆ ಮೊದಲ ಗುರುಗಳು ಅವರ ಪಾಲಕರು ಆಗಿರುತ್ತಾರೆ. ತದ ನಂತರ ಶಾಲೆ, ಕಲೆ, ಕ್ರೀಡೆ ಹೀಗೆ ಹಲವಾರು ರಂಗಗಳಲ್ಲಿ ಕಲಿಕೆಗೆ ಗುರುವಿನ ಅವಶ್ಯಕತೆ ಇದ್ದೇ ಇರುತ್ತದೆ. ಪ್ರತಿಯೊಬ್ಬರು ಗುರುವನ್ನು ಗೌರವಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ, ಭಾರತದಲ್ಲಿ ಸನಾತನ ಧರ್ಮವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡಿದ್ದಾರೆ, ಇಡೀ ಪ್ರಪಂಚಕ್ಕೆ ಸನಾತನ ಧರ್ಮವನ್ನು ಸಾರುವ ಏಕೈಕ ದೇಶ ಭಾರತ ಎಂದರು.
ವಿದ್ವಾನ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಇಳಂಗೋವನ್ ಅವರಿಗೆ ಪಾದಪೂಜೆ ಮಾಡುವ ಮೂಲಕ ಗುರುಗಳಿಗೆ ಗೌರವ ಸಮರ್ಪಿಸಲಾಯಿತು. ಬೆಂಗಳೂರು ಸೇರಿ ಹಲವಾರು ಜಿಲ್ಲೆಗಳಿಂದ ಆಗಮಿಸಿದ್ದ ೨೦ಕ್ಕೂ ಹೆಚ್ಚು ಭರತನಾಟ್ಯ ನೃತ್ಯಕಲಾ ತಂಡಗಳು ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ನವಚೇತನ ನೃತ್ಯ ಕಲಾ ಅಕಾಡೆಮಿ ಗೌರವಾಧ್ಯಕ್ಷ ಡಿಎಸ್.ರಾಜಕುಮಾರ್, ಬಚ್ಚಣ್ಣ, ನಾಗರಾಜ್ ಗುಪ್ತ, ಕೋಲಾರ ರಮೇಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್ ಮೂರ್ತಿ, ನಿರ್ದೇಶಕ ಡಾ.ಎಚ್.ಎಂ. ಸುಬ್ಬರಾಜ್, ನಗರಸಭೆ ಸದಸ್ಯ ಗೌತಮ್, ಮುಖಂಡರಾದ ಬಿ.ವಿ. ಬೈರೇಗೌಡ, ಸುದರ್ಶನ್, ಸುಭಾಷ್ ಗೌಡ, ಲಕ್ಷ್ಮಣ್‌ಗೌಡ ಅಕಾಡಮಿಯ ಪದಾಧಿಕಾರಿಗಳು ಇದ್ದರು.
ನವಚೇತನ ನೃತ್ಯ ಕಲಾ ಅಕಾಡೆಮಿಯ ವಿದ್ಯಾರ್ಥಿಯಾಗಿರುವ ವೈಭವಿ ಆರ್ ಕೋಲಾರದ ನಿವಾಸಿಗಳಾದ ಜೆ.ರಂಗನಾಥ್, ರೇಣುಕಾ ಎಂ ದಂಪತಿಗಳ ಪುತ್ರಿಯಾಗಿದ್ದು, ಚಿನ್ಮಯ ವಿದ್ಯಾಲಯ ಮೂರನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದರು.