ಸರ್ಕಾರಿ ನೌಕರರು ಸಂವಿಧಾನದಡಿ ಕಾರ್ಯನಿರ್ವಹಿಸಲಿ
ಕೋಲಾರ,ಜು,೨೪- ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದಕ್ಕೆ ಹಾಗೂ ಸದಸ್ಯತ್ವವನ್ನು ಪಡೆಯುವುದಕ್ಕೆ ಕೇಂದ್ರ ಸರ್ಕಾರ ನೀಡಿರುವ ಅನುಮತಿ ಆದೇಶವನ್ನು ಈ ಕೂಡಲೇ ರದ್ದುಪಡಿಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವಂತೆ ವಕೀಲ ಕೆ.ನರೇಂದ್ರಬಾಬು ಆಗ್ರಹಪಡಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋಧಿರವರು ಸಂಘಪರಿವಾರದ ಒತ್ತಡಕ್ಕೆ ಮಣಿದು ಆರ್‌ಎಸ್‌ಎಸ್ ಶತಮಾನೋತ್ಸವಕ್ಕೆ ತನ್ನ ಕೊಡುಗೆಯಾಗಿ ಇಂಥಾ ಅನುಮತಿ ಆದೇಶವನ್ನು ನೀಡಿದ್ದಾರೇನೋ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ಪ್ರಧಾನಮಂತ್ರಿ ನರೇಂದ್ರಮೋಧಿ ರವರೇ ಸಂಘ ಪರಿವಾರದ ಒತ್ತಡಕ್ಕೆ ಮಣಿದು ಇಂಥಾ ಆದೇಶಗಳನ್ನು ಹೊರಡಿಸುವಾಗ ರಾಷ್ಟ್ರದ ಆಡಳಿತ ಪರಾಧೀನ ಎನಿಸುವುದಿಲ್ಲವೇ? ರಾಷ್ಟ್ರರಕ್ಷಣೆ ಮರೀಚಿಕೆಯೆನಿಸುವುದಿಲ್ಲವೇ? ಅಹಿಂದ ವರ್ಗಗಳ ಧಮನ ಅಧಿಕೃತಗೊಳ್ಳುವುದಿಲ್ಲವೇ? ಎಂದು ಅವರು ಪ್ರಶ್ನಿಸುತ್ತಾ, ರಾಷ್ಟ್ರಾಭಿವೃದ್ಧಿ ಇನ್ನೆಂತು? ಎಂದು ಪ್ರಶ್ನಿಸಿದ್ದಾರೆ.
ಏಕೆಂದರೆ ಕಳೆದ ಒಂದೆರೆಡು ವಾರ ಕಾಲದಿಂದ ಪ್ರಧಾನಮಂತ್ರಿ ನರೇಂದ್ರಮೋಧಿ ರವರು ದೇವರ ನೇರ ಸಂಪರ್ಕದಲ್ಲಿರುವ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪರ-ವಿರೋಧ ಚರ್ಚೆ ಗಿಟ್ಟಿಸಿತ್ತು. ಆರ್‌ಎಸ್‌ಎಸ್ ಮುಖ್ಯಸ್ಥರೂ ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಈ ಪ್ರತಿಕ್ರಿಯೆಯು ಒಂದು ಹಂತದಲ್ಲಿ ಮೋಧಿ ಹಾಗೂ ಪಕ್ಷ ಎಂಬ ಎರಡು ಮಜಲುಗಳನ್ನೂ ಸೃಷ್ಟಿಸಿ, ಮೋಧಿಯೇ ಬೇರೆ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಸೃಷ್ಟಿಸಿತ್ತು. ಇದು ಇಡೀ ರಾಷ್ಟ್ರದಲ್ಲಿ ಮೋಧಿ ಎಂಬ ಹೊಸತೊಂದು ಬಣವನ್ನೇ ಸೃಜಿಸುವ ಹಂತದಲ್ಲಿಯೂ ಇತ್ತು. ಆದರೆ ಅಷ್ಟರಲ್ಲಿ ಹೊರಬಿದ್ದಿರುವ ಈ ಆದೇಶವು ನಮ್ಮ ಪ್ರಧಾನಿಯು ಅನುಭವಿಸುತ್ತಿರುವ ಒತ್ತಡಕ್ಕೆ ಹಿಡಿದ ಕನ್ನಡಿಯಂತೆ ನಮಗೆಲ್ಲಾ ಗೋಚರಿಸುತ್ತಿದೆ!
ರಾಷ್ಟ್ರ ಬಜೆಟ್ ಪೂರ್ವಾವಧಿಯಲ್ಲಿ ಇಂಥಾ ಆದೇಶವನ್ನು ಪ್ರಧಾನಿ ನರೇಂದ್ರಮೋಧಿ ರವರು ಹೊರಡಿಸಿರುವುದು ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತಿವೆ. ಬಜೆಟ್ ಚರ್ಚೆಯಲ್ಲಿ ಇಂಥಾ ಆದೇಶದ ಬಗ್ಗೆ ಚರ್ಚೆ ನೇಪಥ್ಯಕ್ಕೆ ಸರಿಯಲಿ ಎಂದು ಉದ್ಧೇಶಿಸಿರಬಹುದೇ? ಬಜೆಟ್‌ನತ್ತ ಗಮನ ಸೆಳೆಯುತ್ತಾ ಗುಪ್ತಗಾಮಿನಿಯಂತೆ ಇಂಥಾ ಆದೇಶವನ್ನು ಹೊರಡಿಸಿರಬಹುದಾ? ಮೇಲಾಗಿ ಜುಲೈ ೯ರಂದೇ ಇಂಥಾ ಮಹತ್ತರ ಆದೇಶವನ್ನು ಹೊರಡಿಸಿಯೂ ಅಧಿಕೃತವಾಗಿ ಪ್ರಕಟಿಸದೇ ಇರುವುದು ಯಥಾ ಪ್ರಕಾರ ಹಿಡನ್ ಅಜೆಂಡಾ ಆಗಿದೆಯಾ? ಎಂತೆಲ್ಲಾ ಅನುಮಾನಗಳನ್ನು ಹುಟ್ಟುಹಾಕುತ್ತಲೇ ಇದೆ ಎಂದು ತಿಳಿಸಿದ್ದಾರೆ.
ಒಂದೇ ದೇಶ ಒಂದೇ ಪಕ್ಷ ಎಂಬ ಪರಿಕಲ್ಪನೆಗೆ ನಾಂದಿ ಹಾಡಲಾಗಿದೆ. ನೆರವೇರಿಕೆಗೆ ನೀರಿಕ್ಷಿಸುವುದಷ್ಟೇ ಉಳಿದಿದೆ.