ಯುವನಿಧಿ ಯೋಜನೆ ದಾಖಲೆಗಳ ಭೌತಿಕ ಪರಿಶೀಲನೆ
ಕೋಲಾರ, ಜು,೨೪-ರಾಜ್ಯ ಸರ್ಕಾರದ ಪಂಚಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಯು ಪದವಿ, ಸ್ನಾತ್ತಕೋತ್ತರ ಪದವಿ ಮತ್ತು ಡಿಪ್ಲೋಮೋ ವ್ಯಾಸಂಗ ಮಾಡಿ ೨೦೨೩ ಹಾಗೂ ೨೦೨೪ನೇ ಸಾಲಿನಲ್ಲಿ ತೇರ್ಗಡೆಯಾಗಿರುವ ಅರ್ಹ ನಿರುದ್ಯೋಗಿಗಳಿಗೆ ನಿರುದ್ಯೋಗಿ ಭತ್ಯೆ ನೀಡುವ ಯೋಜನೆಯಾಗಿದ್ದು ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ೩೦೦೦ ಹಾಗೂ ಡಿಪ್ಲೋಮೋ ಪಡೆದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ೧೫೦೦ ರೂಗಳನ್ನು ನೇರ ನಗದನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ಯೋಜನೆಯಾಗಿದೆ. ನಿರುದ್ಯೋಗಿ ಅಭ್ಯರ್ಥಿಗಳು ೨೦೨೩-೨೪ ನೇ ಸಾಲಿನಲ್ಲಿ ತೇರ್ಗಡೆಯಾಗಿ ಫಲಿತಾಂಶ ನಂತರ ನಿರುದ್ಯೋಗಿಯಾಗಿ ೧೮೦ ದಿನಗಳನ್ನು ಪೂರೈಸಿದವರು ಸದರಿ ಯೋಜನೆಗೆ ನೇರ ನಗದು ವರ್ಗಾವಣೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಪದವಿ ಹಾಗೂ ಡಿಪ್ಲೋಮೋ ನಂತರ ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರು ಹಾಗೂ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡವರು ಮತ್ತು ಉನ್ನತ ವ್ಯಾಸಂಗ ಮುಂದುವರೆಸುತ್ತಿರುವ ಅಭ್ಯರ್ಥಿಗಳು ಈ ಯೋಜನೆಗೆ ಅರ್ಹರಿರುವುದಿಲ್ಲ. ಅಭ್ಯರ್ಥಿಗಳು ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಯಾವುದೇ ಶುಲ್ಕವನ್ನು ನೀಡದೇ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಈ ಪ್ರಯೋಜನವನ್ನು ಎರಡು ವರ್ಷಗಳ ಕಾಲ ನಿರಂತರವಾಗಿ ಪಡೆಯಲು ಪ್ರತಿ ತಿಂಗಳು ತಾನು ನಿರುದ್ಯೋಗಿಯೆಂದು, ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗಿಯಾಗಿಲ್ಲವೆಂದು ಸ್ವಯಂ ಘೋಷಣೆಯನ್ನು ಪ್ರತಿ ತಿಂಗಳು ೨೫ನೇ ತಾರೀಖಿನೊಳಗಾಗಿ ಮಾಡಬೇಕು. ಸೇವಾ ಸಿಂಧು ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ಪ್ರಮಾಣ ಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಿರುವ ಕೆಲವು ಅಭ್ಯರ್ಥಿಗಳ ರಹವಾಸಿ(ವಾಸಸ್ಥಳ ದೃಢೀಕರಣ) ಪರಿಶೀಲನೆ ಬಾಕಿ ಇರುವುದರಿಂದ ಇದುವರೆಗೆ ನಗದು ವರ್ಗಾವಣೆಯಾಗಿರುವುದಿಲ್ಲ. ಅಂತಹ ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡಿರುವ ಅಂಕಪಟ್ಟಿಗಳ ಆಧಾರದ ಮೇಲೆ ಎಲ್ಲ ಮೂಲ ದಾಖಲೆಗಳೊಂದಿಗೆ ಖುದ್ದಾಗಿ ಸಂಬಂಧಿಸಿದ ಕಛೇರಿಗಳನ್ನು ಸಂಪರ್ಕಿಸಿ ತಮ್ಮ ರಹವಾಸಿ ದಾಖಲೆಗಳನ್ನು ಪರಿಶೀಲಿಸಿ ದೃಢೀಕರಿಸಿಕೊಳ್ಳಲು ಸೂಚಿಸಿದೆ.
ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಪ್ಲೋಡ್ ಮಾಡಿರುವ ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ (ಡಿ.ಡಿ.ಪಿ.ಐ) ಉಪನಿರ್ದೇಶಕರು ಕಛೇರಿ, ಕೋಲಾರ. ಪಿಯುಸಿ ಅಂಕಪಟ್ಟಿ ಅಪ್ಲೋಡ್ ಮಾಡಿರುವ ಅಭ್ಯರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ(೨ನೇ ಮಹಡಿ, ಜಿಲ್ಲಾಧಿಕಾರಿಗಳ ಕಛೇರಿ) ಕೋಲಾರ ಹಾಗೂ ಪದವಿ, ಸ್ನಾತ್ತಕೋತ್ತರ ಪದವಿ ಮತ್ತು ಡಿಪ್ಲೋಮೋ ಅಂಕಪಟ್ಟಿ ಅಪ್ಲೋಡ್ ಮಾಡಿರುವ ಅಭ್ಯರ್ಥಿಗಳು ಕೋಲಾರ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಗೆ, ಕಛೇರಿ ವೇಳೆಯಲ್ಲಿ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿಕೊಳ್ಳಲು ಮಾನ್ಯ ಜಿಲ್ಲಾಧಿಕಾರಿಗಳು ಯುವನಿಧಿ ಯೋಜನೆಯ ಫಲಾನುಭವಿಗಳಲ್ಲಿ ಮನವಿ ಮಾಡಿದ್ದಾರೆ.