ಕೇಂದ್ರ ಬಜೆಟ್: ಮೈಸೂರಿನ ನಿರೀಕ್ಷೆ ಹುಸಿ
ಸಂಜೆವಾಣಿ ನ್ಯೂಸ್
ಮೈಸೂರು: ಜು.೨೪:- ಹತ್ತಾರು ನಿರೀಕ್ಷೆಗಳನ್ನಿಟ್ಟುಕೊಂಡು ಕೇಂದ್ರದ ಬಜೆಟ್ ಮಂಡನೆಯನ್ನೇ ಎದುರು ನೋಡುತ್ತಿದ್ದ ಮೈಸೂರಿಗೆ ನಿರಾಸೆಯಾಗಿದ್ದು, ಯಾವುದೇ ಹೋಸ ಯೋಜನೆ ಮತ್ತು ಕಾರ್ಯಕ್ರಮಗಳು ಮೈಸೂರಿಗೆ ಇಲ್ಲದಿರುವುದು ಜಿಲ್ಲೆಯ ಜನರಲ್ಲಿ ಬೆಸರ ತರಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ೭ನೇ ಬಜೆಟ್ ಮಂಡಿಸಿದ್ದು, ಇದರಲ್ಲಿ ಮೈಸೂರು ಭಾಗದ ಕೃಷಿ, ಕೈಗಾರಿಕೆ, ರೈಲ್ವೆ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಪೂರಕವಾಗಿರುವ ಯಾವುದೇ ಕಾರ್ಯಕ್ರಮ ಘೋಷಿಸದೇ ಇರುವುದು ನಿರಾಸೆ ಮೂಡಿಸಿದೆ.
ಬೆಂಗಳೂರಿನ ನಂತರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರಕ್ಕೆ ಮೆಟ್ರೋ ರೈಲು ಯೋಜನೆ ಅಗತ್ಯವಿದ್ದು, ಇದಕ್ಕಾಗಿ ಕಳೆದ ಹತ್ತು ವರ್ಷಗಳಿಂದ ಒತ್ತಾಯಗಳು ಕೇಳಿ ಬರುತ್ತಿವೆ. ಆದರೂ ಈ ಬಗ್ಗೆ ಕೇಂದ್ರ ತನ್ನ ಬಜೆಟ್‌ನಲ್ಲಿ ಸೊಲ್ಲೆತ್ತಿಲ್ಲ. ಇದರೊಂದಿಗೆ ಐಐಟಿ, ರೈಲ್ವೆ ಟರ್ಮಿನಲ್, ಮೈಸೂರು-ಕುಶಾಲನಗರ ರೈಲ್ವೆ ಯೋಜನೆ, ಜವಳಿ ಪಾರ್ಕ್ ಸೇರಿದಂತೆ ಹಲವು ನಿರೀಕ್ಷೆಗಳು ಹುಸಿಯಾದಂತಾಗಿವೆ.
ಕನಸಾಗಿ ಉಳಿದ ಐಐಟಿ: ಶಿಕ್ಷಣ, ಸಂಸ್ಕೃತಿ, ಪರಂಪರೆಯ ಹೆಗ್ಗುರುತಾದ ಮೈಸೂರಿಗೆ ಕಳೆದ ಇಪ್ಪತ್ತು ವರ್ಷಗಳಿಂದ ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಸಂಸ್ಥೆ ಸ್ಥಾಪಿಸುವ ಕೂಗು ಕೇಳಿ ಬರುತ್ತಿದೆಯಾದರೂ, ಅದು ಈವರೆಗೆ ಸಾಕಾರಗೊಂಡಿಲ್ಲ. ಕಳೆದ ಮೂರು ಲೋಕ ಚುನಾವಣೆಯಲ್ಲೂ ಈ ಕ್ಷೇತ್ರದಿಂದ ಬಿಜೆಪಿ ಅಭರ್ಥಿಗಳು ಆಯ್ಕೆಯಾಗಿದ್ದು, ಬಿಜೆಪಿ ಭದ್ರಕೋಟೆಯಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡಾದರೂ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಇಲ್ಲಿನ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣಕ್ಕೆ ಅನುಕೂಲವಾಗುವಂತೆ ಐಐಟಿ ನೀಡಲಿದೆ ಎಂದು ನಿರೀಕ್ಷೆ ಇತ್ತು. ಆದರೆ, ವಾಣಿಜ್ಯೋದ್ಯಮಿ, ಕೈಗಾರಿಕೋದ್ಯಮಿಗಳ ಒಕ್ಕೊರಲ ಆಗ್ರಹ ಈಡೇರಲಿಲ್ಲ.
ಮಾತಿನಲ್ಲೇ ಉಳಿದ ಮೆಟ್ರೋ: ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರಿನಲ್ಲಿ ಭವಿಷ್ಯದ ದೃಷ್ಟಿಯಿಂದ ಮೆಟ್ರೋ ಯೋಜನೆ ಅತ್ಯಗತ್ಯವಾಗಿದೆ. ಈಗಾಗಲೇ ಮೈಸೂರು ನಗರದಲ್ಲಿ ೧೫ ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಅಲ್ಲದೇ ನಿತ್ಯವೂ ೨ ಲಕ್ಷಕ್ಕೂ ಹೆಚ್ಚು ಮಂದಿ ಹೊರಗಿನಿಂದ ಬಂದು ಹೋಗುತ್ತಾರೆ. ಜತೆಗೆ ಕೈಗಾರಿಕಾ ವಲಯವೂ ನಗರ ಕೇಂದ್ರದಿಂದ ಹತ್ತಾರು ಕಿಲೋ ಮೀಟರ್ ದೂರವಿರುವುದರಿಂದ ನಗರದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ದೃಷ್ಟಿಯಿಂದ ಮೆಟ್ರೋ ಯೋಜನೆಯನ್ನು ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇತ್ತು. ಆದರೆ, ಇದ್ಯಾವುದರ ಬಗ್ಗೆಯೂ ಸೊಲ್ಲೆತ್ತದೇ ಇರುವುದು ಮೈಸೂರಿಗರಿಗೆ ಬೇಸರ ತರಿಸಿದೆ.
ಪ್ರಸ್ತಾಪವಾಗದ ರೈಲ್ವೆ ಟರ್ಮಿನಲ್: ಕಳೆದ ನಾಲ್ಕು ವರ್ಷಗಳ ಹಿಂದೆ ಮೈಸೂರಿನ ನಾಗನಹಳ್ಳಿ ಬಳಿ ರೈಲ್ವೆ ಟರ್ಮಿನಲ್ ನಿರ್ಮಾಣ ಯೋಜನೆ ಪ್ರಸ್ತಾಪವಾಗಿತ್ತು. ಆದರೆ, ನಾಗನಹಳ್ಳಿಯಲ್ಲಿ ಟರ್ಮಿನಲ್‌ಗೆ ಭೂ ಸ್ವಾದೀನ ಆಗದೇ ಇರುವ ಕಾರಣ, ನಗರದ ಸಿಎಫ್‌ಟಿಆರ್‌ಐ ಎದುರಿನ ರೈಲ್ವೆ ಇಲಾಖೆ ಜಾಗದಲ್ಲಿ ಟರ್ಮಿನಲ್ ನಿರ್ಮಿಸಲು ಉzಶಿಸಲಾಗಿದೆ. ಆದರೆ, ಈವರೆಗೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಬಹುದು ಎಂದು ನಿರೀಕ್ಷಿಸಲಾಗಿತ್ತು. ಅದ್ಯಾವುದೇ ಆಗಿಲ್ಲ. ಇದರ ಹೊರತಾಗಿ ಮೈಸೂರು-ಕುಶಾಲನಗರ ರೈಲ್ವೆ ಮಾರ್ಗ ನೆನೆಗುದಿಗೆ ಬಿದ್ದಿದ್ದು, ಇದಕ್ಕೂ ಈ ಬಾರಿಯ ಬಜೆಟ್‌ನಲ್ಲಿ ಯಾವ ಅನುದಾನ ಘೋಷಣೆಯಾಗಿಲ್ಲ.
ಹಾಗೆಯೇ ವಿಸ್ತಾರವಾಗಿ ಬೆಳೆಯುತ್ತಿರುವ ಮೈಸೂರು ನಗರದಲ್ಲಿ ಸಾವಿರಾರು ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗಳ ಹೆಚ್ಚಳ, ಕೈಗಾರಿಕಾ ಕ್ಷೇತ್ರದ ಪ್ರಗತಿ, ರಫ್ತು ಹೆಚ್ಚಳ ದೃಷ್ಟಿಯಿಂದ ಜವಳಿ ಪಾರ್ಕ್ ಸ್ಥಾಪನೆಗೆ ಒತ್ತಾಯ ಕೇಳಿಬಂದಿತ್ತು. ಆದರೆ, ಈ ಎಲ್ಲಾ ನಿರೀಕ್ಷೆಗಳು ಹುಸಿಯಾಗಿದ್ದು, ಮೈಸೂರು ಸರ್ವತೋಮುಖ ಪ್ರಗತಿಗೆ ಕೇಂದ್ರದ ಬಜೆಟ್‌ನಲ್ಲಿ ಯಾವುದೇ ಆದ್ಯತೆ ನೀಡಲಾಗಿಲ್ಲ ಎಂಬುದು ಘೋಚರಿಸುತ್ತಿದೆ.
ರಾಜ್ಯಕ್ಕೆ ಶೂನ್ಯ: ಎಚ್‌ಸಿಎಂ: ಕೇಂದ್ರ ಸರ್ಕಾರ ಅತಿ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕ ರಾಜ್ಯಕ್ಕೆ ಹಲವು ಬೇಡಿಕೆಗಳ ಹೊರತಾಗಿಯೂ ಶೂನ್ಯ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಿಡಿ ಕಾರಿದ್ದಾರೆ.
ಸುಮಾರು ೧೧ ಸಾವಿರ ಕೋಟಿಗಳಷ್ಟು ಅಗತ್ಯವಿದ್ದಾಗಲೂ ಈ ಬಗ್ಗೆ ಬಜೆಟ್‌ನಲ್ಲಿ ಕನಿಷ್ಟ ಪ್ರಸ್ತಾವ ಮಾಡದ ಕೇಂದ್ರ ಸರ್ಕಾರ ತಾವು ಒಕ್ಕೂಟ ವ್ಯವಸ್ಥೆಯಲ್ಲಿ ಆಡಳಿತ ನಡೆಸುತ್ತಿದ್ದೇವೆ ಎಂಬ ವಾಸ್ತವ ಮರೆತಂತೆ ಕಾಣುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಏಳಿಗೆಗಾಗಿ ಬಾಕಿ ಉಳಿಸಿಕೊಂಡ ಅನುದಾನದ ಜತೆಗೆ ಹೊಸ ಅನುದಾನ ಮಂಜೂರು ಮಾಡಬೇಕಾಗಿತ್ತು. ಆದರೆ, ಈ ಕುರಿತು ಎಲ್ಲಿಯೂ ಕನಿಷ್ಟ ಪ್ರಸ್ತಾಪ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ೭ ಲಕ್ಷದವರೆಗೆ ಇದ್ದ ತೆರಿಗೆ ಮಿತಿಯನ್ನು ಮತ್ತೆ ೩ ಲಕ್ಷಕ್ಕೆ ಇಳಿಕೆ ಮಾಡುವ ಮೂಲಕ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಗಳ ಮೇಲೆ ಬರೆ ಎಳೆದಿರುವ ಕೇಂದ್ರ ಸರ್ಕಾರ, ಯಾವುದೇ ಜನಪರ ಯೋಜನೆಯಿಲ್ಲದೇ ತೆರಿಗೆ ವಿಧಿಸುವುದೇ ತನ್ನ ಕಾಯಕ ಎಂಬಂತೆ ವರ್ತಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಬಹುಮತ ಪಡೆಯದೇ ಬಿಹಾರ ಹಾಗೂ ಆಂಧ್ರಪ್ರದೇಶದ ರಾಜಕೀಯ ಪಕ್ಷಗಳನ್ನು ಆಶ್ರಯಿಸಿರುವ ಕೇಂದ್ರ ಸರ್ಕಾರ ಆ ರಾಜ್ಯಗಳಿಗೆ ಅತಿ ಹೆಚ್ಚು ಅನುದಾನ ಘೋಷಿಸಿದ್ದು ಇದು ಕಣ್ಣಿಗೆ ರಾಚುವಂತಿದೆ.
ಇವರ ಯಾವ ಬಜೆಟ್ ಘೋಷಣೆಗಳೂ ಸಹ ಸರಿಯಾಗಿ ಜಾರಿಯಾಗದೇ ಇರುವ ಕಾರಣದಿಂದಾಗಿ ಇವರ ಬಜೆಟ್‌ಗಳು ಘೋಷಣೆಗಳಷ್ಟೇ ವಿನಃ ಅದರಿಂದ ಜನ ಸಾಮಾನ್ಯರಿಗಾಗಲೀ, ಶ್ರಮಿಕ ವರ್ಗದ ರೈತಾಪಿ ಸಮುದಾಯಕ್ಕಾಗಲೀ ಯಾವುದೇ ಪ್ರಯೋಜನ ಇಲ್ಲ ಎಂದು ತಿಳಿಸಿದ್ದಾರೆ.