ಟಿಬೆಟಿಯನ್ ಕ್ಯಾಂಪ್‌ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಜು.೨೪:- ಅಗತ್ಯ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಬೈಲುಕುಪ್ಪೆ ಟಿಬೆಟಿಯನ್ ಕ್ಯಾಂಪ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪೇಷಂಟ್ ಕೇರ್ ಟ್ರಸ್ಟ್ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕ ಸೋನಮ್ ವಾಂಗ್ಯಾಲ್ ತಿಳಿಸಿದರು.
ತಾಲೂಕಿನ ಬೈಲುಕುಪ್ಪೆಯ ಟಿಬೆಟಿಯನ್ ಸೆರಾಜೆ ಮೋನಸ್ಟರಿ ಯುನಿವರ್ಸಿಟಿ ಆವರಣದಲ್ಲಿನ ಸೆರಾಜೆ ಹೆಲ್ತ್ ಕೇರ್ ಸೆಂಟರ್ ನಲ್ಲಿ ಪೇಷಂಟ್ ಕೇರ್ ಟ್ರಸ್ಟ್ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ದೆಹಲಿಯ ಏಮ್ಸ್ ವೈದ್ಯಕೀಯ ಕಾಲೇಜಿನ ನುರಿತ ವೈದ್ಯರ ತಂಡ ನಡೆಸಿದ ಆರೋಗ್ಯ ತಪಾಸಣಾ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ನಗರ ಪ್ರದೇಶಗಳಿಂದ ದೂರವಿರುವ ಬೈಲುಕುಪ್ಪೆ ಟಿಬೆಟಿಯನ್ ಕ್ಯಾಂಪ್ ನಲ್ಲಿನ ಬೌದ್ಧ ಬಿಕ್ಷುಗಳು, ಸಾರ್ವಜನಿಕರು ಮತ್ತು ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಿಗೆ ಉತ್ತಮ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಬೇಕೆನ್ನುವ ಉದ್ದೇಶದಿಂದ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಜುಲೈ ೨೩ ರ ಮಂಗಳವಾರದಿಂದ ಜುಲೈ ೨೬ ಶುಕ್ರವಾರದವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ೩೦ಕ್ಕೂ ಹೆಚ್ಚು ನುರಿತ ವೈದ್ಯರ ಸೇವೆ ದೊರೆಯುತ್ತಿದೆ ಎಂದರು.
ಶಿಬಿರದಲ್ಲಿ ಹೃದ್ರೋಗ ತಜ್ಞ ವೈದ್ಯರು, ಮಕ್ಕಳ ರೋಗ ತಜ್ಞ ವೈದ್ಯರು, ನೇತ್ರ ರೋಗ ತಜ್ಞರು, ಮೂತ್ರ ರೋಗ ತಜ್ಞರು, ಚರ್ಮರೋಗ ತಜ್ಞರು, ಸ್ತ್ರೀಯರ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರು, ನರರೋಗ ತಜ್ಞರು, ಮೂಳೆ ರೋಗ ತಜ್ಞರು, ದಂತ ವೈದ್ಯರು, ಸುಟ್ಟ ಗಾಯಗಳು ಮತ್ತು ಪ್ಲಾಸ್ಟಿಕ್ ಸರ್ಜರಿ ತಜ್ಞರು, ನ್ಯೂರೋ ಸರ್ಜರಿ ವೈದ್ಯರು, ಮನರೋಗ ತಜ್ಞರು, ಕ್ಷಯ ರೋಗ ತಜ್ಞರು, ಪಿತ್ತಕೋಶ ಸಂಬಂಧಿತ ಸಮಸ್ಯೆಗಳ ತಜ್ಞ ವೈದ್ಯರು ಸೇರಿದಂತೆ ೨೫ ಕ್ಕೂ ಹೆಚ್ಚು ವಿಧದ ರೋಗಗಳಿಗೆ ನುರಿತ ತಜ್ಞ ವೈದ್ಯರುಗಳಿಂದ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆರಂಭಿಕ ದಿನವಾದ ಮಂಗಳವಾರ ಬಹುತೇಕ ಬೌದ್ಧ ಭಿಕ್ಷುಗಳು ಸೇರಿದಂತೆ ೩೦೦ ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಪಾಲ್ಗೊಂಡು ನುರಿತ ವೈದ್ಯರುಗಳಿಂದ ತಪಾಸಣೆಗೊಳಪಟ್ಟು ಚಿಕಿತ್ಸೆ ಮತ್ತು ಸಲಹೆಗಳನ್ನು ಪಡೆದರು. ವೈದ್ಯರ ಶಿಫಾರಸಿನಂತೆ ಔಷಧ ಮತ್ತು ಮಾತ್ರೆಗಳನ್ನು ಉಚಿತವಾಗಿ ನೀಡಲಾಯಿತು.
ಶಿಬಿರದಲ್ಲಿ ದೆಹಲಿಯ ಏಮ್ಸ್ ವೈದ್ಯಕೀಯ ಕಾಲೇಜಿನ ನುರಿತ ವೈದ್ಯರಾದ ಡಾ.ಅಚಲ ಕುಮಾರ್ ಶ್ರೀವಾತ್ಸವ್, ಡಾ.ಉಮಾ ಕುಮಾರ್, ಡಾ.ರಾಜೇಶ್ ಕುಮಾರಿ, ಡಾ. ಚಿರೋಮ ಅಮಿತ್ ಸಿಂಗ್, ಡಾ.ರಾಜಾ ಪ್ರಮಾಣಿಕ್, ಡಾ.ಶಶಾಂಕ್ ಶರದ್ ಕಾಳೆ, ಡಾ.ದೀಪಂಕರ್ ಮಧುಸೂದನ್ ಬೌಮಿಕ್, ಡಾ.ಸುಭಾಷ್ ಗುಪ್ತ, ಡಾ.ವಿಜಯ್ ಹಡ್ಡ, ಡಾ.ಶಾಲಿಮಾರ್ ಸೇರಿದಂತೆ ೩೦ಕ್ಕೂ ಹೆಚ್ಚು ವೈದ್ಯರು ತಪಸ್ಸಣೆ ನಡೆಸಿ ಚಿಕಿತ್ಸೆ ಮತ್ತು ಸಲಹೆ ನೀಡಿದರು. ಪೇಷಂಟ್ ಕೇರ್ ಟ್ರಸ್ಟ್ ಸ್ವಯಂ ಸೇವಾ ಸಂಸ್ಥೆಯ ಸ್ವಯಂ ಸೇವಕರ ತಂಡ ಶಿಬಿರದ ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿದ್ದರು.