ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸಿ: ಶಾಸಕ ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.೨೪: ಪಟ್ಟಣದ ಹೇಮಾವತಿ ಬಡಾವಣೆಯ ೫೮೨ ನಿವೇಶನಗಳ ಅಕ್ರಮ-ಸಕ್ರಮದ ಬಗ್ಗೆ ಶಾಸಕ ಹೆಚ್.ಟಿ.ಮಂಜು ಸೋಮವಾರ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ್ದು ನಿವೇಶನಗಳ ಅಕ್ರಮ – ಸಕ್ರಮದ ಬಗ್ಗೆ ರಾಜ್ಯ ಪೌರಡಳಿತ ಸಚಿವರು ಸಕಾರಾತ್ಮಕ ಉತ್ತರ ನೀಡಿದ್ದಾರೆ.
ಹೇಮಾವತಿ ಬಡಾವಣೆಯ ೫೮೨ ನಿವೇಶನಗಳ ಸಕ್ರಮದ ಬಗ್ಗೆ ಶಾಸಕ ಹೆಚ್.ಟಿ.ಮಂಜು ತಾವು ಸದನದಲ್ಲಿ ಪ್ರಸ್ತಾಪಿಸಿದ ವಿಷಯವನ್ನು ಪತ್ರಿಕೆಗೆ ನೀಡಿದ್ದಾರೆ.
ಹೇಮಾವತಿ ಬಡಾವಣೆಯ ೫೮೨ ನಿವೇಶನದಾರರ ಸಂಕಷ್ಠ ಪರಿಹಾರಕ್ಕೆ ಮುಂದಾಗಿರುವ ಶಾಸಕ ಹೆಚ್.ಟಿ.ಮಂಜು ಸೋಮುವಾರ ರಾಜ್ಯ ವಿಧಾನ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸಮಸ್ಯೆಯನ್ನು ಎಳೆಎಳೆಯಾಗಿ ಸದನದ ಮುಂದಿಟ್ಟರು. ಕೆ.ಆರ್.ಪೇಟೆ ಪುರಸಭೆ ೨೩-೦೬-೧೯೭೭ ರಲ್ಲಿ ೫೧.೩೦ ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ೧೬-೦೬-೧೯೮೪ ರಲ್ಲಿ ವಸತಿ ವಿನ್ಯಾಸ ನಕ್ಷೆಯನ್ನು ಸಿದ್ದಪಡಿಸಿ ಅನುಮೋದನೆ ಪಡೆದುಕೊಂಡಿದೆ. ೧೯೮೫ ರಿಂದ ೨೦೦೧ ರ ವರೆಗೆ ವಿವಿಧ ಅವಧಿಗಳಲ್ಲಿ ಅಧ್ಯಕ್ಷರಾಗಿದ್ದವರು ಮತ್ತು ಅಧಿಕಾರಿಗಳು ಮಾಡಿದ ಸಣ್ಣಪುಟ್ಟ ವತ್ಯಾಸಗಳಿಂದ ನಿವೇಶನ ಪಡೆದವರು ಸಂಕಷ್ಠಕ್ಕೆ ಸಿಲುಕಿದ್ದಾರೆ. ನಿವೇಶನ ಹಂಚಿಕೆಯ ಸಂದರ್ಭದಲ್ಲಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ನಿವೇಶನದಾರರಿಂದ ಕಿಮ್ಮತ್ತು ಹಣ ಕಟ್ಟಿಸಿಕೊಂಡು ಖಾತೆ ಮಾಡಿಕೊಡಲಾಗಿದೆ. ಬಡಾವಣೆಯ ಶೇ ೯೦ ರಷ್ಟು ಜನ ಈಗಾಗಲೇ ಇಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಕೆಲವರು ಮಾರಾಟ ಮಾಡಿದ್ದು ಎರಡು-ಮೂರು ಕೈ ಬದಲಾವಣೆಯಾಗಿದೆ. ಗ್ರಾಮೀಣ ಪ್ರದೇಶದ ರೈತರು ತಮ್ಮ ಹೊಲ ಮನೆಗಳನ್ನು ಮಾರಿ ತಮ್ಮ ಜೀವಿತಾವಧಿಯ ದುಡಿಮೆಯಿಂದ ಇಲ್ಲಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಈಗ ಇವರು ಎಲ್ಲಿ ಹೋಗಬೇಕು ಎಂದು ಸದನದಲ್ಲಿ ಪ್ರಶ್ನಿಸಿದ ಶಾಸಕ ಹೆಚ್.ಟಿ.ಮಂಜು ಸಕ್ರಮವಾಗದೆ ಉಳಿದಿರುವ ೫೮೨ ನಿವೇಶನಗಳನ್ನು ಸಕ್ರಮಗೊಳಿಸುವಂತೆ ಆಗ್ರಹಿಸಿದರು.
ಶಾಸಕರ ಪ್ರಶ್ನೆಗೆ ಸದನದಲ್ಲಿಯೇ ಉತ್ತರಿಸಿದ ರಾಜ್ಯ ಪೌರಡಳಿತ ಸಚಿವ ರಹೀಂಖಾನ್ ಇದು ೪೦ ವರ್ಷಗಳ ಸಮಸ್ಯೆ. ಇದರ ಬಗ್ಗೆ ಲೋಕಾಯುಕ್ತ ತನಿಖಾ ವರದಿ ಬಂದಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಶಾಸಕ ಹೆಚ್.ಟಿ.ಮಂಜು ಅವರೊಂದಿಗೆ ಮಾತನಾಡಿ ಅಂತಿಮಗೊಳಿಸುವ ಭರವಸೆ ನೀಡಿದರು.
ಏನಿದು ಸಮಸ್ಯೆ:
ಪಟ್ಟಣದ ಅಭಿವೃದ್ದಿಯ ಹಿನ್ನೆಲೆಯಲ್ಲಿ ೧೯೭೬-೭೭ ರಲ್ಲಿ ಇಲ್ಲಿನ ಪುರಸಭೆ ೫೧.೩೦ ಎಕರೆ ಭೂಮಿಯನ್ನು ಭೂ ಸ್ವಾಧೀನ ಪ್ರಕ್ರಿಯೆಯ ಮೂಲಕ ಪಡೆದು ನಿವೇಶನಗಳ ಹಂಚಿಕೆಗೆ ಯೋಜನೆ ರೂಪಿಸಿತ್ತು. ೧೯೮೪ ರಲ್ಲಿ ಟೌನ್ ಪ್ಲಾನ್ ನಕ್ಷೆ ಸಿದ್ದಪಡಿಸಿ ೧೨೭೬ ನಿವೇಶನಗಳನ್ನು ರಚಿಸಿ ಕಾಲ ಕಾಲಕ್ಕೆ ಪುರಸಭೆಯ ಅಧ್ಯಕ್ಷರಾದವರು ನಿವೇಶನಗಳ ಹಂಚಿಕೆ ಮಾಡಿದ್ದರು. ಸದರಿ ಹೇಮಾವತಿ ಬಡಾವಣೆಯ ನಿವೇಶನಗಳ ಹಂಚಿಕೆ ನಿಯಮಾನುಸಾರ ನಡೆದಿಲ್ಲ ಎಂದು ೨೦೦೩ ರಲ್ಲಿ ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್ ಎನ್ನುವವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಲೋಕಾಯುಕ್ತ ತನಿಖಾ ವರದಿಯ ಅನಂತರ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ವಿಷಯವನ್ನಿಟ್ಟು ತಾಲೂಕು ಬಿಜೆಪಿ ಮುಖಂಡರಾಗಿದ್ದ ದಿವಂಗತ ಕೆ.ಎನ್.ಕೆಂಗೇಗೌಡರ ಅವಧಿಯಲ್ಲಿ ಹಂಚಿಕೆಯಾಗಿದ್ದ ೫೧೫ ನಿವೇಶನಗಳು ಸೇರಿ ಒಟ್ಟು ೬೯೪ ನಿವೇಶನಗಳನ್ನು ವಿಶಾಲ ತಳಹದಿಯ ಮೇಲೆ ಸಕ್ರಮಗೊಳಿಸಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರುಗಳ ಅವಧಿಯಲ್ಲಿ ಹಂಚಿಕೆಯಾಗಿದ್ದ ಉಳಿದ ೫೮೨ ನಿವೇಶನಗಳ ರದ್ದತಿಯ ಬಗ್ಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಅಕ್ರಮ ನಿವೇಶನಗಳನ್ನು ರದ್ದುಪಡಿಸುವ ಮುನ್ನ ಜಿಲ್ಲಾಧಿಕಾರಿಗಳು ನಿವೇಶನದಾರರಿಗೆ ನೋಟಿಸ್ ನೀಡಿ ಅವರಿಂದ ಬರುವ ಉತ್ತರವನ್ನು ಪರಿಶೀಲಿಸಿ ಅನಂತರ ರದ್ದತಿಯ ಬಗ್ಗೆ ಕ್ರಮ ವಹಿಸುವಂತೆ ರಾಜ್ಯ ಸರ್ಕಾರ ನಿರ್ದೇಶಿಸಿದ್ದರು ಇದುವರೆಗೆ ಜಿಲ್ಲಾಧಿಕಾರಿಗಳಿಂದ ನಿವೇಶನ ರದ್ದತಿಯ ಬಗ್ಗೆ ಯಾರಿಗೂ ನೋಟಿಸ್ ನೀಡಿಲ್ಲ. ಆದರೂ ನಿವೇಶನ ಸಕ್ರಮವಾಗದ ಬಗ್ಗೆ ೫೮೨ ನಿವೇಶನದಾರರು ಆತಂಕದ ಸುಳಿಯಲ್ಲಿಯೇ ಒದ್ದಾಡುತ್ತಿದ್ದಾರೆ.