ಅಧ್ಯಕ್ಷರಾಗಿ ಸಾರಂಗಿ ನಾಗರಾಜು ಅವಿರೋಧ ಆಯ್ಕೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.೨೪: ತಾಲೂಕಿನ ಸಾರಂಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಸಾರಂಗಿ ನಾಗರಾಜು(ನಾಗಣ್ಣ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ತಾಲ್ಲೂಕು ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸಾರಂಗಿ ನಾಗಣ್ಣ ಹೊರತುಪಡಿಸಿ ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಭರತ್‌ಕುಮಾರ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಾರಂಗಿ ನಾಗಣ್ಣ ಅವರನ್ನು ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಸಹೋದರ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೆಚ್.ಟಿ.ಲೋಕೇಶ್, ಮಾಜಿ ಸಚಿವ ನಾರಾಯಣಗೌಡರ ಆಪ್ತ ಸಹಾಯಕ ದಯಾನಂದ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ತಾ.ಪಂ.ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ನಿರ್ದೇಶಕ ಕೈಗೋನಹಳ್ಳಿ ಕುಮಾರ್, ತಾಲ್ಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಸಾಮಿಲ್ ರವಿಕುಮಾರ್, ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಹೊಸಹೊಳಲು ಮಂಜುನಾಥ್, ಸಂಘದ ಉಪಾಧ್ಯಕ್ಷೆ ಪಾರ್ವತಮ್ಮ, ನಿರ್ದೇಶಕರಾದ ನಂಜುಂಡೇಗೌಡ, ಅಶೋಕ್, ಗಂಗಾಧರ್, ಎಸ್.ಕೆ.ಮೋಹನ್‌ಕುಮಾರ್, ಕೆಂಪಮ್ಮ, ರಾಜು, ಮೇಲ್ವಿಚಾರಕ ಆದಿಲ್‌ಪಾಷಾ, ಸಂಘದ ಸಿಇಓ ಜಯರಾಜು ಹಾಗೂ ತಾಲ್ಲೂಕು ಬಿಜೆಪಿ ಮುಖಂಡರು ಹಾಗೂ ಜೆಡಿಎಸ್ ಮುಖಂಡರು ಅಭಿನಂದಿಸಿದರು.
ನೂತನ ಅಧ್ಯಕ್ಷ ಸಾರಂಗಿ ನಾಗಣ್ಣ ಅವರು ಮಾತನಾಡಿ ನನ್ನನ್ನು ಬಿಜೆಪಿ-ಜೆಡಿಎಸ್ ಪಕ್ಷಗಳ ಮುಖಂಡರು ಹಾಗೂ ಸಂಘದ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಸಂಘದ ವತಿಯಿಂದ ಸಂಘದ ವ್ಯಾಪ್ತಿಯ ಎಲ್ಲಾ ರೈತರಿಗೆ ನೀಡಬಹುದಾದ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರಮುಖವಾಗಿ ಶೇರುದಾರರಿಗೆ ಸಾಲ ಸೌಲಭ್ಯ, ರಸಗೊಬ್ಬರ, ಬಿತ್ತನೆ ಬೀಜ, ಪಡಿತರ ಚೀಟಿದಾರರಿಗೆ ಪಡಿತರ ವಸ್ತುಗಳನ್ನು ಸಕಾಲದಲ್ಲಿ ನೀಡಲು ಕ್ರಮ ವಹಿಸುತ್ತೇನೆ.
ಮಹಿಳಾ ಸಂಘಗಳಿಗೆ ಸಂಘದ ವತಿಯಿಂದ ನೀಡಬಹುದಾದ ಸಾಲ ಸೌಲಭ್ಯವನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಆದ್ದರಿಂದ ಸಂಘದ ಶೇರುದಾರರಾಗಿರುವ ರೈತ ಬಾಂಧವರು ಸರ್ಕಾರದ ಬಡ್ಡಿ ರಹಿತ ಸಾಲವನ್ನು ಪಡೆದುಕೊಂಡು ಅಭಿವೃದ್ಧಿಯ ದಿಕ್ಕಿನತ್ತ ಸಾಗಬೇಕು. ಖಾಸಗಿ ಸಾಲಗಳಿಂದ ಮುಕ್ತರಾಗಬೇಕು ಎಂದು ಮನವಿ ಮಾಡಿದರು.