ಮಹಿಳೆ ಸಾಹಿತ್ಯದ ತೊಟ್ಟಿಲು: ಹಾಸಿಂಪೀರ ವಾಲೀಕಾರ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೨೪:ಕನ್ನಡ ಸೃಜನಶೀಲ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ, ಸಾಹಿತ್ಯದ ಹುಟ್ಟು ಮಹಿಳೆಯರ ಮಡಿಲಲ್ಲಿಯೇ ಬೆಳೆದು ಬಂದಿದೆ. ಅದರ ಪಾಲನೆ ಪೋಷಣೆ ಮಾಡಿದ ಕೀರ್ತಿ ಮಹಿಳೆಯರಿಗೆ ಸಲ್ಲುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ಆಶ್ರಮ ರಸ್ತೆಯ ಶಿವಾಲಯ ಭವನದಲ್ಲಿ ಜರುಗಿದ ಶಿವಲೀಲಾ ಕೋರವಾರ ಅವರ ಅಂಜುಮಲ್ಲಿಗೆ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಾಹಿತ್ಯ ಹುಟ್ಟಿನಿಂದ ಸಾವಿನವರೆಗೆ ಎಲ್ಲ ಹಂತಗಳಲ್ಲಿ ಬೆಳೆದು ಬಂದಿದೆ. ಇದರಲ್ಲಿ ಜನಪದ ಮಹಿಳೆಯರ ಪಾಲು ಬಹುದೊಡ್ಡದಾಗಿದೆ. ಕಾಯಕದೊಂದಿಗೆ ಹಾಡುವದರ ಜೊತೆಗೆ ಹಾಡಿನ ಪಾಲನೆ ಪೋಷಣೆ ಮಾಡಿರುವದರಿಂದ ಮಹಿಳೆ ಸಾಹಿತ್ಯದ ತೊಟ್ಟಿಲಾಗಿ ತೂಗಿದ್ದಾರೆ. ಈ ನಿಟ್ಟಿನಲ್ಲಿ ಶಿವಲೀಲಾ ಕೋರವಾರ ಸೇರಿದ್ದಾರೆ ಎಂದು ಅಭಿನಂದಿಸಿ ಹಾರೈಸಿದರು.
ಅಂಜುಮಲ್ಲಿಗೆ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ವಿಜಯಪುರ ಜಿಲ್ಲಾ ಎರಡನೇ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಭಾರತಿ ಪಾಟೀಲ, ಇತ್ತಿತ್ತಲಾಗಿ ಮಹಿಳೆಯರು ಸಾಹಿತ್ಯ ಕ್ಷೇತ್ರಕ್ಕೆ ಬರುತ್ತಿರುವದು ಬಹಳ ಸಂತೋಷದ ವಿಷಯ, ಮಹಿಳಾ ಸಂವೇದನೆಗಳು ಸಾಹಿತ್ಯದ ಮುಖಾಂತರ ಪುರುಷ ಪ್ರಧಾನ ವ್ಯವಸ್ಥೆಗೆ ಮುಟ್ಟಿಸಲು ಸಹಾಯವಾಗುತ್ತಿದೆ. ಪ್ರಕಟಣೆ ಕಷ್ಟ ಕಾಲದಲ್ಲಿಯೂ ಶಿವಲೀಲಾ ಅಂಜುಮಲ್ಲಿಗೆ ಪ್ರಕಟಿಸುತ್ತಿರುವದು ಹೆಮ್ಮೆಯ ಸಂಗತಿ. ಇಂದು ಸಾಹಿತ್ಯ ಬಳಗದ ಸಂಬAಧಿಯಾಗಿರುವದಕ್ಕೆ ಅವರನ್ನು ಅಭಿನಂದಿಸುತ್ತೇನೆ ಎಂದರು.
ಕವನ ಸಂಕಲನ ಪರಿಚಯ ಮಾಡಿದ ಎನ್.ಆರ್. ಕುಲಕರ್ಣಿ ಅವರು ಮಾತನಾಡಿ, ಅಂಜುಮಲ್ಲಿಗೆ ಗುರುಭಕ್ತಿ, ತಾಯಿಯ ಮಡಿಲು, ಸುತ್ತಲಿನ ನೋವಿನ ಅನುಭವ , ಪ್ರೀತಿ ನೆಲ ಜಲ ಕುರಿತು ಶಿವಲೀಲಾ ಬಳಸಿದ ಶಬ್ದಗಳು ಕವನ ಸಂಕಲನ ತುಂಬ ಧ್ವನಿ ಮಾಡುತ್ತಿವೆ. ಸೃಜನಶೀಲ ಸಾಹಿತ್ಯಕ್ಕೆ ಶಬ್ದಗಳ ಬಳಕೆಗೆ ಅಪಾರ ಜ್ಞಾನವೂ ಬೇಕು. ಅಂಜುಮಲ್ಲಿಗೆ ತುಂಬ ಪ್ರಜ್ಞೆ ಪೂರ್ವಕವಾಗಿ ಕಾವ್ಯಕ್ಕಿರಬೇಕಾದ ಎಲ್ಲ ಅರ್ಹತೆಯನ್ನು ಈ ಅಂಜುಮಲ್ಲಿಗೆ ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಅಶೋಕ ಗಂಗಾನವರ, ಎಲ್.ಟಿ. ಲಮಾಣಿ, ಡಾ. ಪ್ರಕಾಶ ಜಾಗೀರದಾರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡಿದ ಡಾ ಸಂಗಮೇಶ ಮೇತ್ರಿ, ಶಿವಲೀಲಾ ನನ್ನ ವಿದ್ಯಾರ್ಥಿನಿ. ಆಗಲೂ ಅವರಿಗೆ ಸಾಹಿತ್ಯದ ಗೀಳು ಇತ್ತು. ಸಾಹಿತ್ಯ ಕ್ಷೇತ್ರದಲ್ಲಿ ಖಂಡಿತಾ ಬೆಳೆಯುತ್ತಾರೆ ಎನ್ನುವ ನಂಬಿಕೆ ಇತ್ತು. ಇಂದು ಗುರು ಪೌರ್ಣಿಮೆ. ಈ ದಿನ ನನಗೆ ಅಂಜುಮಲ್ಲಿಗೆ ಕವನ ಸಂಕಲನ ಗುರುದಕ್ಷಿಣೆಯಾಗಿ ಕೊಡುತ್ತಿರುವದು ನನಗೆ ಹೃದಯ ತುಂಬಿ ಬಂದಿದೆ. ಇವರಿಂದ ನೂರಾರು ಕೃತಿಗಳು ಬರಲೆಂದು ಹೃದಯಾರೆ ಹಾರೈಸಿದರು.
ವೇದಿಕೆ ಮೇಲೆ ಯಮನಪ್ಪ ಗಂಗಾನವರ, ಶಿವಾನಂದ ಗಂಗಾನವರ ಉಪಸ್ಥಿತಿ ಇದ್ದರು.
ಶೋಭಾ ಬಡಿಗೇರ ಸ್ವಾಗತಿಸಿದರು. ಶಿಲ್ಪಾ ಭಷ್ಮೆ ಕಾರ್ಯಕ್ರಮ ನಿರೂಪಿಸಿದರು. ಕವಿ ಸಾಹಿತಿ ಶಿವಲೀಲಾ ಕೋರವಾರ ವಂದಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪಿಯು ಡಿಡಿ ಎಸ್.ಎಂ. ಕಣಬೂರ, ಸಿ.ಎಸ್. ಖಾಡೆ, ಪಂಡಿತರಾವ ಪಾಟೀಲ, ದಾನೇಶ ಅವಟಿ, ನಿಗೊಂಡ ಕಟ್ಟೆಪ್ಪಗೋಳ, ಮೋಪಗಾರ ತೈಸಿನ್. ಶಾಂತಾ ಗಂಗಾನವರ, ಶಾರದಾ ಗಂಗಾನವರ, ಶೋಭಾ ಕೋರವಾರ, ಸಂಗೀತಾ ಕೋರವಾರ. ಮಡಿವಾಳಮ್ಮ ನಾಡಗೌಡ, ವಿಜಯಲಕ್ಷ್ಮಿ ಪ್ರಿಂಟರ್ಸ್ ಸಿಬ್ಬಂದಿ, ಕೆ.ಕೆ. ಪತ್ತಾರ ಇದ್ದರು.