ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸಲು ರೈತ ಒಕ್ಕೂಟದ ಮನವಿ
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೨೩: ಭದ್ರಾ ಜಲಾಶಯದಿಂದ ೨೦೨೪-೨೫ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಅನುಕೂಲ ಆಗುವಂತೆ ತಕ್ಷಣವೇ ನೀರು ಹರಿಸಬೇಕು ಎಂದು ಒತ್ತಾಯಿಸಿ ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಭತ್ತದ ಸಸಿ ನಾಟಿ ಮಾಡಲು ಸಿದ್ಧವಾಗಿವೆ. ಭದ್ರಾ ಜಲಾಶಯದಲ್ಲಿ ಬಳಕೆಗೆ ಬರಬಹುದಾದ ೪೨,೭೪೪ ಟಿಎಂಸಿ ನೀರಿದೆ. ಭತ್ತಕ್ಕೆ ೧೨೦ ದಿನಗಳು ನೀರು ಬೇಕಾಗುವ ಹಿನ್ನೆಲೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸುವ ಮೂಲಕ ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟುದಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಈಗ ಭತ್ತದ ನಾಟಿ ಮಾಡಿದರೆ ನವೆಂಬರ್‌ನಲ್ಲಿ ಮೂಡು(ಶೀತ) ಗಾಳಿಗೆ ಭತ್ತ ಸಿಲುಕಿಕೊಳ್ಳುವುದಿಲ್ಲ. ಮೂಡು ಗಾಳಿ ಬಂದಾಗ ಭತ್ತ ಜೊಳ್ಳಾಗಿ, ಇಳುವರಿ ಕಡಿಮೆ ಆಗುತ್ತದೆ. ಹಾಗಾಗಿ ತಕ್ಷಣಕ್ಕೆ ನೀರು ಹರಿಸಿದಲ್ಲಿ ಸಾಕಷ್ಟು ಅನುಕೂಲ ಆಗಲಿದೆ. ಜಿಲ್ಲಾಡಳಿತ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸುವ ಬಗ್ಗೆ ಅಗತ್ಯ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಎಚ್.ಆರ್. ಶಾಮನೂರು ಲಿಂಗರಾಜ್, ಮಾಜಿ ಮೇಯರ್ ಎಚ್.ಎನ್. ಗುರುನಾಥ್, ಬಿ.ಕೆ. ವಿಶ್ವನಾಥ್, ಎಚ್. ಲಿಂಗರಾಜ್, ರೇವಣಪ್ಪ, ಚನ್ನಬಸಪ್ಪ, ಕೆ.ಆರ್. ಜಯ ಪ್ರಕಾಶ್, ಕೆ.ಸಿ. ತಿಮ್ಮಪ್ಪ, ಟಿ. ವೀರೇಶ್, ಎ. ನಾಗರಾಜರಾವ್, ಎನ್.ಬಿ. ಭೀಮಪ್ಪ ಇತರರು ಇದ್ದರು.