ಮನಸ್ಸನ್ನು ಅರಳಿಸುವವರೇ ನಿಜ ಗುರುಗಳು  :  ಶಾರದೇಶಾನಂದ ಸ್ವಾಮೀಜಿ
ಸಂಜೆವಾಣಿ ವಾರ್ತೆ
ದಾವಣಗೆರೆ :ಜೂ 23, ಮನಸ್ಸಿನ ಗೊಂದಲ, ಭಯ, ಅಧೀರತೆ ನಿವಾರಿಸಿ ಧೈರ್ಯ, ಸ್ಥೈರ್ಯ ಮೂಡಿಸಿ ಮನಸ್ಸನ್ನು ಅರಳಿಸುವವರೇ ನಿಜವಾದ ಗುರುಗಳು ಎಂದು ಹರಿಹರ ಶ್ರೀ ರಾಮಕೃಷ್ಣ – ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಶಾರದೇಶಾನಂದ ಮಹರಾಜ್ ಸ್ವಾಮೀಜಿಯವರು ಹೇಳಿದರು. ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದ ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಹಮ್ಮಿಕೊಳ್ಳಲಾಗಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಇತರರ ಅಂತರಂಗದ ಶಕ್ತಿಯನ್ನು ಜಾಗೃತಗೊಳಿಸಿ ಬಾಳಿಗೆ ಬೆಳಕು ನೀಡುವ ಕಾರ್ಯವನ್ನು ಯಾರು ಮಾಡುವರೋ ಅಂಥವರನ್ನು ಗುರು ಎನ್ನಬಹುದು ಎಂದು ವಿಶ್ಲೇಷಿಸಿದರು.ಕುರಿ ಮತ್ತು ಹುಲಿಯ ಕತೆ, ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸರ ಬಾಂಧವ್ಯದ ಕತೆ ಸೇರಿದಂತೆ ಇನ್ನಿತರೆ ಸಣ್ಣ ಕಥೆ ಹೇಳುವ ಮೂಲಕ ಮನಸ್ಸಿನ ಪೊರೆ ಕಳಚಿ ವಾಸ್ತವದಲ್ಲಿ ಬದುಕಬೇಕು ಎಂಬ ಸಂದೇಶ ನೀಡಿದ ಶ್ರೀಗಳು ನಾನು ಏನು ಬೇಕಾದರೂ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿಗಳಾದ ಎಸ್ ಕೆ ಕುಮಾರ್ ಸ್ವಾಗತಿಸಿದ ಕಾರ್ಯಕ್ರಮವನ್ನು ಶಿಕ್ಷಕ ಅಭಿಷೇಕ್ ನಿರೂಪಿಸಿದರು. ಶಿಕ್ಷಕಿ ಅನಿಶ್ಚಿತ ಪ್ರಾರ್ಥಿಸಿದರು. ಪತ್ರಕರ್ತ ಜಿಗಳಿ ಪ್ರಕಾಶ್, ಪ್ರಾಂಶುಪಾಲರಾದ ಚೇತನಕುಮಾರ್ ಹಂಪಕ್ಕನವರ್ , ಉಪ ಪ್ರಾಂಶುಪಾಲರಾದ ಕು. ಅಖಿಲೇಶ್ವರಿ ವೇದಿಕೆಯಲ್ಲಿದ್ದರು . ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಶಿಕ್ಷಕರಾದ ಅಮಿತ್ ಮಾರ್ಗದರ್ಶನದಲ್ಲಿ ಗುರು ಮಹಿಮೆ, ಗುರು ಪೂರ್ಣಿಮೆ ಮಹತ್ವ ತಿಳಿಸುವ ನೃತ್ಯ ರೂಪಕಕ್ಕೆ ಹೆಜ್ಜೆ ಹಾಕಿದರು. ಪೂರ್ವ ಪ್ರಾಥಮಿಕ ಮತ್ತು 1 ರಿಂದ 8 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು  ಹಾಜರಿದ್ದರು.