ವಿಕಸಿತ ಭಾರತದ ಅನ್ವೇಷಣೆಗೆ ಮುನ್ನುಡಿ ಬರೆದ ಬಜೆಟ್: ತೆಲ್ಕೂರ್
ಕಲಬುರಗಿ:ಜು.23: ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ೨೦೨೪-೨೫ನೇ ಸಾಲಿನ ಮುಂಗಡ ಪತ್ರ ವಿಕಸಿತ ಭಾರತ ಅನ್ವೇಷಣೆ ಗೆ ಮುನ್ನುಡಿ ಬರೆದಿದೆ ಎಂದು ಸೇಡಂ ಕ್ಷೇತ್ರದ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಬಣ್ಣಿಸಿದ್ದಾರೆ.
ದೇಶದ ಬಡವರ, ಮಹಿಳೆಯರ, ಯುವಕರ ಹಾಗೂ ರೈತರ ಈ ನಾಲ್ಕು ಸ್ಥಂಭಗಖ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳು ಬಜೆಟ್‌ದಲ್ಲಿವೆ. ಪ್ರಮುಖವಾಗಿ ದೇಶದ ಆರ್ಥಿಕ ಭದ್ರತೆ ಗೆ ಬುನಾದಿ ಹಾಕಿದಂತಿದೆ ಎಂದು ಅವರು ಹೇಳಿಕೆಯಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ.
೫೦೦೦ ಕಂಪೆನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನಶಿಪ್, ಪಿಎಂ ಅವಾಸದಲ್ಲಿ ಮೂರು ಕೋಟಿ ಮನೆಗಳ ನಿರ್ಮಾಣ, ಗ್ರಾಮೀಣಾಭಿವೃದ್ಧಿಗೆ ೨.೬೬ ಲಕ್ಷ ಕೋಟಿ ಅನುದಾನ, ೧ ಕೋಟಿ ಮನೆಗಳಿಗೆ ಸೋಲಾರ ಪ್ಯಾನೆಲ್ ಯೋಜನೆ, ಕೃಷಿ ಮತ್ತು ಕೃಷಿ ಸಂಬAಧಿತ ಕ್ಷೇತ್ರದ ಅಭಿವೃದ್ಧಿಗೆ ೧.೫೩ ಲಕ್ಷ ಕೋಟಿ ರೂ.ಗಳ ಅನುದಾನ ಸೇರಿ ಇತರ ಕಾರ್ಯಗಳು ಅಭಿವೃದ್ಧಿ ಪೂರಕವಾಗಿವೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಕೃಷಿ, ಉದ್ಯೋಗ ಮತ್ತು ಕೌಶಲ್ಯ, ಮಾನವ ಸಂಪನ್ಮೂಲ- ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವೆ, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ ಅಭಿವೃದ್ಧಿ, ನಾವಿನ್ಯತೆ ಹಾಗೂ ಹೊಸ ಪೀಳಿಗೆ ಸುಧಾರಣೆ ಎಂಬುದಾಗಿ ೯ ಆದ್ಯತಾ ವಲಯಗಳೆಂದು ಗುರುತಿಸಿರುವುದು ಹೊಸ ಮೈಲುಗಲ್ಲಾಗಿದೆ ಎಂದು ಅವರು ಬಣ್ಣಿಸಿದ್ದಾರೆ.