ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿ ಬಿಜೆಪಿಯಿಂದ ಸಾಮಾಜಿಕ ನ್ಯಾಯ: ಅಷ್ಠಗಿ ಶ್ಲಾಘನೆ
ಕಲಬುರಗಿ:ಜು.23: ಪರಿಶಿಷ್ಟ ಸಮುದಾಯಗಳ ಹಾಗೂ ಸಾಂವಿಧಾನಿಕ ಹಕ್ಕುಗಳ ಪರ ನಿರಂತರ ದನಿಯಾಗಿ ನಿಂತು ಹೋರಾಟ ನಡೆಸಿಕೊಂಡು ಬಂದ ಹಿನ್ನಲೆಯ ಛಲವಾದಿ ನಾರಾಯಣಸ್ವಾಮಿಯವರ ನಾಯಕತ್ವ ಹಾಗೂ ಪಕ್ಷ ಬದ್ಧತೆಯನ್ನು ಗುರುತಿಸಿ ವಿಧಾನ ಪರಿಷತ್ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದ ಬಿಜೆಪಿ ವರಿಷ್ಠರು, ಇದೀಗ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಮೂಲಕ ‘ಸಾಮಾಜಿಕ ನ್ಯಾಯ’ ನಮ್ಮ ಪಕ್ಷದ ಆದ್ಯತೆ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ ಅಂಬಾರಾಯ್ ಅಷ್ಠಗಿ ಅವರು ಬಣ್ಣಿಸಿದ್ದಾರೆ.
ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಬಳಕೆಯಾಗಬೇಕಿದ್ದ ಮಹರ್ಷಿ ವಾಲ್ಮೀಕಿ ನಿಗಮದ ೧೮೭ ಕೋಟಿ ಗುಳುಂ, ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಮೀಸಲಾಗಿದ್ದ ಸಾವಿರಾರು ಕೋಟಿ ರೂ.ಗಳು ಇತರೆ ಯೋಜನೆಗಳಿಗಾಗಿ ನಿಯಮ ಉಲ್ಲಂಘಿಸಿ ಬಳಕೆ, ಭ್ರಷ್ಟಾಚಾರಗಳ ಸರಣಿ ಸರಮಾಲೆ, ಸ್ವಜನ ಪಕ್ಷಪಾತ ಹಾಗೂ ಮುಡಾ ಹಗರಣಗಳ ವ್ಯೂಹದಲ್ಲಿ ಸಿಲುಕಿ ಅಭಿವೃದ್ಧಿ ಶೂನ್ಯ ಆಡಳಿತದಿಂದಾಗಿ ಜನಾಕ್ರೋಶ ಎದುರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ದುರಾಡಳಿತದ ವಿರುದ್ಧ ಸಮರ್ಥವಾಗಿ ಧ್ವನಿ ಎತ್ತಲು ನಾರಾಯಣಸ್ವಾಮಿಯವರನ್ನು ಆಯ್ಕೆ ಮಾಡಿರುವುದು ಸಮಯೋಚಿತ ನಿರ್ಧಾರವಾಗಿದೆ ಎಂದು ಅವರು ಹೇಳಿಕೆಯಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಷದಲ್ಲಿ ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಕ್ಕೆ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಮೆರೆದಿದೆ. ಛಲವಾದಿ ನಾರಾಯಣ ಸ್ವಾಮಿಯವರನ್ನು ಅವರನ್ನು ಆಯ್ಕೆಮಾಡಿದ ಪಕ್ಷದ ವರಿಷ್ಠ ಮಂಡಳಿಗೆ ಡಾ. ಅಂಬಾರಾಯ್ ಅಷ್ಠಗಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.