ಮ್ಯಾನ್ ಪವರ್ ಏಜೆನ್ಸಿ ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯಿಸಿ ಕಾರ್ಮಿಕ ಇಲಾಖೆ ಮುಂದೆ ಧರಣಿ
ಕಲಬುರಗಿ:ಜು.23: ಹಾಸ್ಟೆಲ್ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಾಗೂ ಮ್ಯಾನ್ ಪವರ್ ಏಜೆನ್ಸಿ ಅವ್ಯವಹಾರವನ್ನು ಖಂಡಿಸಿ ಮಂಗಳವಾರ ಜಿಲ್ಲಾ ಕಾರ್ಮಿಕ ಇಲಾಖೆ ಎದುರುಗಡೆ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಕಾರ್ಯಕರ್ತರು ಧರಣಿ ಸತ್ಯಾಗ್ರಹ ಮಾಡಿದರು.
ಪ್ರತಿಭಟನಕಾರರು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಮೈಸೂರಿನ ಶಾರ್ಪ್ (ಸ್ವಿಸ್) ಮ್ಯಾನ್ ಪವರ ಏಜೆನ್ಸಿಯು ಕಳೆದ ಮೂರು ವರ್ಷಗಳಿಂದ ಲಕ್ಷಾಂತರ ರೂಗಳ ಅವ್ಯವ್ಯಹಾರ ನಡೆಸಿ ಅದರಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ. ಈ ಕುರಿತು ದೂರು ನೀಡಿದರೂ ಯಾವುದೇ ಕ್ರಮವಾಗಿಲ್ಲ. ಹಾಗಾಗಿ ಪ್ರಕರಣವನ್ನು ಮುಚ್ಚಿಹಾಕಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಏಜೆನ್ಸಿ ನಡೆಸುತ್ತಿರುವ ಅವ್ಯವಹಾರದ ಕುರಿತು ಕಳೆದ ೨೦೨೨ರಿಂದ ಸಂಘಟನೆ ನಿರಂತರವಾಗಿ ಎರಡು ವರ್ಷಗಳಿಂದಲೂ ಪ್ರತಿಭಟನೆ ಮೂಲಕ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಆದಾಗ್ಯೂ, ೨೦೨೩ರ ಏಪ್ರಿಲ್‌ನಲ್ಲಿ ೧೦೦ ಜನ ಕಾರ್ಮಿಕರು ಮತ್ತು ೨೦೨೪ರ ಫೆಬ್ರವರಿ ತಿಂಗಳಲ್ಲಿ ೨೦೦ ಜನ ನೌಕರರ ಬ್ಯಾಂಕ್ ಸ್ಟೇಟ್‌ಮೆಂಟ್ ಸಮೇತ ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಲಾಗಿದೆ. ಆದರೆ ಇಲಾಖೆಗೆ ಕೊಟ್ಟಿರುವ ದೂರುಗಳು ಮಾತ್ರ ನಾಪತ್ತೆಯಾಗಿವೆ ಎಂದು ಅವರು ದೂರಿದರು.
ಅಧಿಕಾರಿಗಳನ್ನು ಕೇಳಿದರೆ ಎಲ್ಲ ಅರ್ಜಿಗಳನ್ನು ತಾಲ್ಲೂಕು ಕಚೇರಿಗಳಿಗೆ ಕಳಿಸಿಕೊಡಲಾಗಿದೆ ಎಂದು ಹೇಳುತ್ತಾರೆ. ತಾಲ್ಲೂಕು ಕಚೇರಿಗಳಲ್ಲಿ ಕೇಳಿದರೆ ಯಾವುದೇ ಅರ್ಜಿಗಳು ಬಂದಿಲ್ಲ ಎಂದು ಹೇಳುತ್ತಾಋಎ. ಹೀಗೆ ಒಬ್ಬರ ಮೇಲೆ ಒಬ್ಬರ ಹೆಸರು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಕಾರ್ಮಿಕರ ಹಿತರಕ್ಷಣೆ ಮಾಡಬೇಕಾದ ಕಾರ್ಮಿಕ ಇಲಾಖೆಯ ಕಾರ್ಮಿಕರನ್ನು ಭಕ್ಷಣೆ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಎರಡು ವರ್ಷಗಳಿಂದ ಕಡಿಮೆ ವೇತನ ಮಾಡುತ್ತಿರುವ ಬಗ್ಗೆ ದೂರುಕೊಟ್ಟ ಅರ್ಜಿಗಳನ್ನು ಪರಿಶೀಲಿಸದೆ ಕಾರ್ಮಿಕರಿಗೆ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಅಲ್ಲದೆ ಏಜೆನ್ಸಿಯವರು ಕಾರ್ಮಿಕರಿಗೆ ಕಿರುಕುಳಕೊಟ್ಟು ಕೆಲಸದಿಂದ ತೆಗೆಯುವ ಭಯವೊಡ್ಡಿ ದುಡಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದ ಅವರು, ಈಗ ಒತ್ತಡಕ್ಕೆ ಮಣಿದು ಕಲಬುರ್ಗಿ ತಾಲ್ಲೂಕಿನದ್ದು ಮಾಹಿತಿ ನೀಡಿದ್ದಾರೆ. ಉಳಿದ ತಾಲ್ಲೂಕುಗಳ ದೂರುಗಳನ್ನೂ ಸಹ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
ಕೆಲ ದಿನಗಳಿಂದ ನಿರಂತರವಾಗಿ ಹೋರಾಟ ಮಾಡಿದರೂ ಸಹ ಯಾವುದೇ ಕ್ರಮ ಆಗಿಲ್ಲ. ಹೀಗಾಗಿ ಕಾರ್ಮಿಕ ಇಲಾಖೆಯ ಮುಂದೆ ಅನಿರ್ಧಿಷ್ಟ ಧರಣಿಯನ್ನು ಆರಂಭಿಸುತ್ತೇವೆ. ಅದಕ್ಕೂ ಕ್ರಮ ಕೈಗೊಳ್ಳದೇ ಹೋದಲ್ಲಿ ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಅವರು ಎಚ್ಚರಿಸಿದರು.
ಜಿಲ್ಲಾಧಿಕಾರಿಗಳಿಗೆ ಮ್ಯಾನ್ ಪವರ್ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದರೆ ನೀವು ಬೇರೆ ಏಜೆನ್ಸಿಯವರಿಗೆ ಕೊಡಿಸಲು ಇಂತಹ ಬೇಡಿಕೆ ಇಡುತ್ತಿದ್ದೀರಿ ಎಂದು ಹೇಳುತ್ತಾರೆ. ಇದು ಸಲ್ಲದು. ಮ್ಯಾನ್ ಪವರ್ ಏಜೆನ್ಸಿಯ ಅವ್ಯವಹಾರವನ್ನು ನೋಡಿದರೆ ಸುಮಾರು ೮ ಕೋಟಿ ರೂ.ಗಳನ್ನು ನೌಕರರಿಗೆ ಕೊಡಬೇಕಾಗುತ್ತದೆ ಎಂದು ಅವರು ಹೇಳಿದರು.
ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಕಾಶಿನಾಥ್ ಬಂಡಿ, ಉಪಾಧ್ಯಕ್ಷ ಮೇಘರಾಜ್ ಕಠಾರೆ, ಶ್ರೀಮತಿ ಜ್ಯೋತಿ ದೊಡ್ಡಮನಿ, ಗೌತಮ್ ಯಳವಂತಗಿ ಮುಂತಾದವರು ಪಾಲ್ಗೊಂಡಿದ್ದರು.