ಸೇಡಂನಲ್ಲಿ ಜು.27ರಂದು ಪತ್ರಿಕಾ ದಿನಾಚರಣೆ ಹಿರಿಯ ಪತ್ರಕರ್ತ ಬಿ.ಮಹಾದೇವಪ್ಪ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ
ಸೇಡಂ :ಜು.23: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜು.27ರಂದು ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತ ಲಿಂ.ಬಿ.ಮಹಾದೇವಪ್ಪ ಅವರ ಹೆಸರಿನಲ್ಲಿ ಪ್ರಥಮ ವರ್ಷದ ಪ್ರಶಸ್ತಿ ಪ್ರದಾನ ಹಾಗೂ ಜಿಲ್ಲೆಯ ಪತ್ರಕರ್ತರು ಬರೆದಿರುವ ಕವನಗಳ ಸಂಪಾದನ ಕೃತಿ ಕಾವ್ಯ ಬೆಳಕು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶರಣು ಮಹಾಗಾಂವ ಹಾಗೂ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಆಡಕಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬೆಳೆಗ್ಗೆ 10.30ಕ್ಕೆ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಹಾಲಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ ಸಾನಿಧ್ಯವಹಿಸುವರು. ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡುವರು. ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಕಾವ್ಯ ಬೆಳಕು ಕವನ ಸಂಕಲನ ಬಿಡುಗಡೆಗೊಳಿಸುವರು.
ಮುಖ್ಯಅತಿಥಿಗಳಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ, ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ರಾಜ್ಯ ಕಾರ್ಯಕಾರಣಿ ಸದಸ್ಯ ಶಿವರಂಜನ್ ಸತ್ಯಂಪೇಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಶಂಕ್ರಯ್ಯಸ್ವಾಮಿ ಭಾಗವಹಿಸುವರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣು ಮಹಾಗಾಂವ ಅಧ್ಯಕ್ಷತೆವಹಿಸುವರು. ಇದೆ ವೇಳೆ ತಾಲೂಕಿನ ಮುಧೋಳ ಗ್ರಾಮದ ಹಿರಿಯ ಪತ್ರಿಕಾ ವಿತರಕ ಚಾಂದಪಾಶ ಇಂದನೂರ ಅವರಿಗೆ ವಿಶೇಷವಾಗಿ ಸತ್ಕರಿಸಲಾಗುವದು.
ಬಿ.ಮಹಾದೇವಪ್ಪ ಪ್ರಶಸ್ತಿಗೆ ರಶ್ಮಿ, ಜಯತೀರ್ಥ ಪಾಟೀಲ್ ಆಯ್ಕೆ
ನಾಡಿನ ಹಿರಿಯ ಪತ್ರಕರ್ತರಲ್ಲಿ ಒಬ್ಬರಾದ ತಾಲೂಕಿನ ಬೆನಕನಹಳ್ಳಿಯ ಮಹಾದೇವಪ್ಪನವರ ಹೆಸರಿನಲ್ಲಿ ಸ್ಥಾಪಿತಗೊಂಡ ಮೊದಲ ವರ್ಷದ ಪ್ರಶಸ್ತಿಗೆ ಪ್ರಜಾವಾಣಿ ಪತ್ರಿಕೆಯ ಮುಖ್ಯ ಉಪ-ಸಂಪಾದಕರಾಗಿರುವ ಬೆಂಗಳೂರಿನ ರಶ್ಮಿ ಎಸ್ ಹಾಗೂ ವಿಜಯವಾಣಿಯ ಕಲಬುರಗಿ ಮುಖ್ಯ ವರದಿಗಾರ ಜಯತೀರ್ಥ ಪಾಟೀಲ್ ಆಯ್ಕೆಗೊಂಡಿದ್ದಾರೆ. ಇವರಿಗೆ ಅಂದು ಪ್ರಶಸ್ತಿ ಪತ್ರ, ಫಲಕ ಮತ್ತು 2500/- ನಗದು ನೀಡಿ ಗೌರವಿಸಲಾಗುತ್ತದೆ.