ಕೃಷಿ ಮಹಾವಿದ್ಯಾಲಯದಲ್ಲಿ ಸೈಬರ್ ಕ್ರೈಮ್ ಜಾಗೃತಿ ಅಭಿಯಾನ
ಕಲಬುರಗಿ,ಜು.23-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೃಷಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸೈಬರ್ ಕ್ರೈಮ್ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡೀನ್ (ಕೃಷಿ) ಡಾ.ಮಹಾಲಿಂಗಪ್ಪ ಎಮ್.ಧನೋಜಿ ಅವರು ಮಾತನಾಡುತ್ತ, ದಿನದಿಂದ ದಿನಕ್ಕೆ ಸೈಬರ್ ಕ್ರೈಮ್ ಜಾಸ್ತಿಯಾಗುತ್ತಿದ್ದು, ಅದರ ಕುರಿತು ಜಾಗೃತಿ ಮೂಡಿಸುವುದು
ಅನಿವಾರ್ಯವಾಗಿದೆ. ಈ ದಿನ ತಮ್ಮೆಲ್ಲರಿಗೂ ನೀಡುತ್ತಿರುವ ಜಾಗೃತಿ ಉಪನ್ಯಾಸವನ್ನು ಅರ್ಥಮಾಡಿಕೊಂಡು ನಿಮ್ಮ ಜೀವನದಲ್ಲಿ ಸೈಬರ್ ಮೋಸ ಹೋಗದಂತೆ ಎಚ್ಚರ ವಹಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಷನ್ 4, ಇನ್ಫೋಸೆಕ್ ಎಲ್‍ಎಲ್‍ಪಿ ಡಿಜಿಟಲ್ ಫೋರೆನ್ಸಿಕ್ ಸಂಸ್ಥೆ ಸಿಇಓ ಮತ್ತು ನಿರ್ದೇಶಕ ಅಲ್ತಾಫ್ ಬಾಲಸಿಂಗ್ ಅವರು, ಸೈಬರ್ ಕ್ರೈಮ್ ಜಾಗೃತಿ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ರಾಜಶೇಖರ ಟಿ. ಬಸನಾಯಕ ಮಾತನಾಡಿ, ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಸೈಬರ್ ಕ್ರೈಮ್ ಜಾಲಕ್ಕೆ ಸಿಲುಕಿಕೊಳ್ಳುತ್ತಿದ್ದು, ಈ ಬಗ್ಗೆ ಜಾಗೃತಿ ಅಗತ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಅಧಿಕಾರಿ ಡಾ.ಹೆಚ್.ಸಿ. ಸೌಮ್ಯ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಘಟಕದ ಅರಾವಳಿ ತಂಡದ ವಿದ್ಯಾರ್ಥಿಗಳು ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಕೃಷಿ ಮಹಾವಿದ್ಯಾಲಯದ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.