ನಾಡಿನಾದ್ಯಂತ 770 ಪ್ರವಚನಗಳ ಸಂಕಲ್ಪ
ಬೀದರ್: ಜು.23:ಇಲ್ಲಿಯ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ನಾಡಿನಾದ್ಯಂತ 770 ಊರುಗಳಲ್ಲಿ ಪ್ರವಚನಗೈಯುವ ಸಂಕಲ್ಪ ಮಾಡಿದ್ದಾರೆ.
ಬಸವಗಿರಿಯಲ್ಲಿ ಗುರು ಪೂರ್ಣಿಮೆ ನಿಮಿತ್ತ ಭಾನುವಾರ ನಡೆದ ಗುರು ದರ್ಶನ ಕಾರ್ಯಕ್ರಮದಲ್ಲಿ ಅವರು ಈ ವಿಷಯ ಪ್ರಕಟಿಸಿದರು.
ಲಿಂಗೈಕ್ಯ ಅಕ್ಕ ಅನ್ನಪೂರ್ಣತಾಯಿ ಅವರ ಆಶಯದಂತೆ ಬಸವ ತತ್ವ ಪ್ರಚಾರ ಹಾಗೂ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಲು ಪ್ರವಚನ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಚನ ಸಾಹಿತ್ಯ ಮನೆ, ಮನೆಗೆ ತಲುಪಿಸುವುದು, ಜನರಲ್ಲಿಯ ದುಶ್ಚಟ, ದುರ್ಗುಣಗಳನ್ನು ದೂರ ಮಾಡಿ ಉತ್ತಮ ಜನಾಂಗ ರೂಪಿಸುವುದು ತಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಸದ್ಗತಿ ಪಥ ತೋರುವ ಗುರು:
ಗುರು ಎಂದರೆ ಸಾಮಾನ್ಯನಲ್ಲ. ಸಂಸಾರದಿಂದ ಮೇಲೆತ್ತಿ, ಸದ್ಗತಿ ಪಥ ತೋರುವವನೇ ನಿಜವಾದ ಗುರು ಎಂದು ಅವರು ಹೇಳಿದರು.
ಗುರುಗಳಲ್ಲಿ ಶಿಕ್ಷಾ ಗುರು, ದೀಕ್ಷಾ ಗುರು ಮತ್ತು ಮೋಕ್ಷ ಗುರು ಎಂಬ ಮೂರು ಪ್ರಕಾರಗಳಿವೆ. ಲೌಕಿಕ ಜ್ಞಾನ ನೀಡುವವ ಶಿಕ್ಷಾ ಗುರುವಾದರೆ, ಆಧ್ಯಾತ್ಮಿಕ ಅರಿವು ನೀಡುವವ ದೀಕ್ಷಾ ಗುರು. ಲಿಂಗಾಂಗ ಸಾಮರಸ್ಯ ಕರುಣಿಸುವವ ಮೋಕ್ಷಾ ಗುರು. ಅಂತೆಯೇ ಗುರುವಿನಲ್ಲಿ ಅಚಲ ನಂಬಿಕೆ ಇರಬೇಕು ಎಂದು ತಿಳಿಸಿದರು.
ಇವ ನಮ್ಮವನೆಂದು ಸಕಲ ಜೀವರಾಶಿಗಳನ್ನು ಪ್ರೀತಿಯಿಂದ ಇಂಬಿಟ್ಟುಕೊಂಡು, ಇಂದಿಗೂ ವಚನಗಳ ಮೂಲಕ ಅರಿವು ನೀಡುತ್ತಿರುವ ಬಸವಣ್ಣನವರು ಎನಗು, ನಿನಗೂ, ಜಗವೆಲ್ಲಕ್ಕೂ ಗುರು ಎಂದು ಅಲ್ಲಮ ಪ್ರಭುದೇವರು ಸಾರಿದ್ದರು ಎಂದು ಮಾರ್ಮಿಕವಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ರಮೇಶ ಮಠಪತಿ ಮಾತನಾಡಿ, ‘ಗು’ ಎಂದರೆ ಕತ್ತಲೆ, ‘ರು’ ಎಂದರೆ ಬೆಳಕು, ಕತ್ತಲೆಯಿಂದ ಬೆಳಕಿನೆಡೆಗೆ ನಡೆಸುವವನೇ ಗುರು ಎಂದು ತಿಳಿಸಿದರು.
ಗುರುವಿನಲ್ಲಿ ಅವಿಶ್ವಾಸ ಸಲ್ಲದು. ಗುರುವಿನಲ್ಲಿ ಭಕ್ತಿ, ಶ್ರದ್ಧೆ ಇರಬೇಕು. ವಿಶ್ವಗುರು ಎನಿಸಿದ ಬಸವಣ್ಣನವರು ಭಕ್ತಿ ಭಂಡಾರಿಯಾಗಿದ್ದರು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಉಮಾದೇವಿ ಚಿಲ್ಲರ್ಗಿ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಅವರ ಕಾರ್ಯವನ್ನು ಪ್ರಭುದೇವ ಸ್ವಾಮೀಜಿ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ನೀಲಮ್ಮ ರೂಗನ್ ಮಾತನಾಡಿ, ಅಡುಗೆ ಮನೆಗೆ ಸೀಮಿತವಾಗಿದ್ದ ನನ್ನಂಥ ಅನೇಕರಿಗೆ ಅಕ್ಕ ಅನ್ನಪೂರ್ಣತಾಯಿ ವೇದಿಕೆಗೆ ತಂದು ಮಾತನಾಡಲು ಕಲಿಸಿದರು ಎಂದು ಅಕ್ಕ ಅನ್ನಪೂರ್ಣ ತಾಯಿ ಕಾರ್ಯವನ್ನು ನೆನೆದು ಗದ್ಗದಿತರಾದರು.
ಕಲ್ಯಾಣ ಕರ್ನಾಟಕ ಲಿಂಗಾಯತ ಸಹಕಾರಿ ಸಂಘದ ಉಪಾಧ್ಯಕ್ಷ ಬಸವರಾಜ ಶೇರಿಕಾರ್ ಸಮ್ಮುಖ ವಹಿಸಿದ್ದರು. ರಾಜಕುಮಾರ ಪಾಟೀಲ ಸ್ವಾಗತಿಸಿದರು. ಪ್ರಸಾದ ದಾಸೋಹಿ ಜಗದೇವಿ ಜಗನ್ನಾಥ ಚಿಮಕೋಡೆ ಅವರು ಗುರು ಬಸವ ಪೂಜೆ ನೆರವೇರಿಸಿದರು. ಗೋದಾವರಿ ರಾಜೋಳೆ ಅವರ ನೇತೃತ್ವದಲ್ಲಿ ನೀಲಮ್ಮನ ಬಳಗದವರು ಪ್ರಾರ್ಥನೆ ಹಾಗೂ ಭಜನೆ ನಡೆಸಿಕೊಟ್ಟರು.