ಕನ್ನಡ ವಿವಿಯಲ್ಲಿ ಅಪಘಾತ : ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಿ ಗೇಟ್‌ ಬಳಿ ವಿದ್ಯಾರ್ಥಿನಿ ಗೌರಮ್ಮ ಎಂಬವರಿಗೆ ಸೋಮವಾರ ಸಾರಿಗೆ ಬಸ್‌ ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡಿದ್ದಾರೆ. ವಿದ್ಯಾರ್ಥಿನಿಗೆ ಬಸ್‌ ಡಿಕ್ಕಿ ಹೊಡೆದ ವಿಷಯ ತಿಳಿಯುತ್ತಿದ್ದಂತೆಯೇ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದರಿಂದ ಎರಡು ತಾಸು ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಯಿತು. ಗಾಯಗೊಂಡಿರುವ ವಿದ್ಯಾರ್ಥಿನಿ ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿನಿ ಗಾಯಗೊಂಡಿದ್ದು, ಸೂಕ್ತ ಪರಿಹಾರ ಒದಗಿಸಬೇಕು ಎಂದು ವಿವಿ ವಿದ್ಯಾರ್ಥಿಗಳು ಒತ್ತಾಯಿಸಿದರು.
ಈ ಹಿಂದೆ ಕನ್ನಡ ವಿವಿಯ ಬಿ-ಗೇಟ್‌ ಬಳಿಯೇ ಅಪಘಾತದಲ್ಲಿ ತಂದೆ, ಮಗ ಮೃತಪಟ್ಟಿದ್ದಾರೆ. ಇಂತಹ ಅಪಘಾತಗಳು ನಡೆಯುತ್ತಿದ್ದರೂ ಪೊಲೀಸರು ಸೂಕ್ತ ಕ್ರಮವಹಿಸುತ್ತಿಲ್ಲ. ಕನ್ನಡ ವಿವಿ ವಿದ್ಯಾರ್ಥಿಗಳು ಓಡಾಡುವ ರಸ್ತೆಯಲ್ಲಿ ಸಂಚಾರ ನಿಯಮ ಪಾಲನೆ ಮಾಡಲಾಗುತ್ತಿಲ್ಲ, ಜಿ-20 ಸಂದರ್ಭದಲ್ಲಿ ಪೊಲೀಸರ ಮನವಿಗೆ ಬೆಲೆ ಕಟ್ಟು, ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್‌ಗಳ ರೂಮ್‌ ತೊರೆದು, ಪೊಲೀಸರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಆದರೆ, ವಿದ್ಯಾರ್ಥಿಗಳ ಮನವಿಯನ್ನೂ ಪೊಲೀಸರು ಗಾಳಿಗೆ ತೂರಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವರ್ಷಗಳ ಹಿಂದೆ ಪುರಸಭೆಯ ಅಧಿಕಾರಿಗಳಿಗೆ ಹಾಗೂ ಪಿಡಬ್ಲ್ಯೂಡಿ, ಜಿಲ್ಲಾ ಅಧಿಕಾರಿಗಳಿಗೂ ಮಾನವಿ ಮಾಡಿ ರಸ್ತೆ ಸಿಗ್ನಲ್, ಲೈಟ್ ಹಾಕಿಸಲು ಒತ್ತಾಯಿಸಲಾಗಿದೆ. ವಿವಿ ವಿದ್ಯಾರ್ಥಿಗಳ ಮನವಿಯನ್ನು ಕಿವಿಗೆ ಹಾಕಿಕೊಳ್ಳದ ಅಧಿಕಾರಿಗಳು ಅಪಘಾತಕ್ಕೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಡಿಕೆಗಳು:
ಅಪಘಾತದಲ್ಲಿ ಗಾಯಗೊಂಡಿರುವ ವಿದ್ಯಾರ್ಥಿನಿಗೆ ಸೂಕ್ತ ಪರಿಹಾರ ನೀಡಬೇಕು. ವಿಶ್ವವಿದ್ಯಾಲಯದ ಆವರಣದಲ್ಲಿ ಬ್ರೇಕ್ ಲೈನ್ಸ್ ಹಾಕಬೇಕು. ಅಜ್ಜಿ ಅಂಗಡಿಯಿಂದ, ಜಲಾಶಯದ ಕಾಲುವೆವರೆಗೆ ಲೈಟ್‌ ವ್ಯವಸ್ಥೆ ಮಾಡಬೇಕು. ಬಸ್‌ಗಳನ್ನು ನಿಲುಗಡೆ ಮಾಡಬೇಕು. ಜುಲೈ 29ರೊಳಗೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ವಾಪಾಸ್ ಪಡೆದರು. ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿಜಯ ಪೂಣಚ್ಚ ತಂಬಡ ಅವರು ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳ ಮನವಿ ಆಲಿಸಿದರು. ಬೇಡಿಕೆಗಳ ಈಡೇರಿಕೆಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.