ಹಾಲಿನ ಬೆಲೆಯೇರಿಕೆಗೆ ಸರ್ಕಾರದ ಮೇಲೆ ಒತ್ತಡ
ಮುಳಬಾಗಿಲು,ಜು,೨೩-ಮಂಗಳವಾರ ಮತ್ತು ಬುಧವಾರ ನಡೆಯುವ ಅಧಿವೇಶನದಲ್ಲಿ ಹಾಲಿನ ಬೆಲೆ ಏರಿಕೆಗೆ ಸರ್ಕಾರದ ಮೇಲೆ ಒತ್ತಡ ಏರುವುದಾಗಿ ಶಾಸಕ ಸಮೃದ್ದಿ ಮಂಜುನಾಥ್ ತಿಳಿಸಿದರು.
ನಗರದ ಅಮರಜ್ಯೋತಿ ವಿದ್ಯಾಸಂಸ್ಥೆಯ ಮುಂಭಾಗದ ಆವರಣದಲ್ಲಿ ಕೋಚಿಮುಲ್, ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಪಶುಪಾಲನೆ ಪಶು ವೈದ್ಯ ಸೇವಾ ಇಲಾಖೆಯಿಂದ ಕ್ಷೀರ ಮಹೋತ್ಸವ ಹಾಗೂ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ೨ ದಿನಗಳಿಂದ ಅಧಿವೇಶನದಲ್ಲಿ ಗಲಾಟೆಗಳು ನಡೆಯುತ್ತಿವೆ, ನಮ್ಮ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು ನಮ್ಮ ಹೈಕಮಾಂಡ್ ಸೂಚನೆಯಂತೆ ನಮ್ಮ ಹಕ್ಕನ್ನು ಕಾಂಗ್ರೇಸ್ ಸರ್ಕಾರಕ್ಕೆ ಮನ ಮುಟ್ಟುವಂತೆ ಚಲಾಯಿಸಿದ್ದೇವೆ ಎಂದರಲ್ಲದೆ ಸಾಕಷ್ಟು ವಿದ್ಯಾವಂತರು ನಮ್ಮ ಗಲಾಟೆಯ ಬಗ್ಗೆ ಬೇರೆ ರೀತಿಯಲ್ಲಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.
ಕಳೆದ ೬ ತಿಂಗಳಿನಿಂದ ರೈತರಿಗೆ ನೀಡಬೇಕಾದ ಪ್ರೋತ್ಸಾಹಧನ ೭೮ ಲಕ್ಷ ರೂಗಳನ್ನು ಕಾಂಗ್ರೇಸ್ ಸರ್ಕಾರ ಬಿಡುಗಡೆ ಮಾಡದೇ ಇರುವುದರಿಂದ ಹಾಲು ಉತ್ಪಾದಕರು ಸಂಕಷ್ಟದಲ್ಲಿ ಇದ್ದಾರೆಂದು ಬೇಸರ ವ್ಯಕ್ತ ಪಡಿಸಿದರಲ್ಲದೆ ಹಾಲಿನ ಬೆಲೆ ಏರಿಕೆಗೆ ಕೋಲಾರ ಜಿಲ್ಲೆಯ ಕಾಂಗ್ರೇಸ್ ಶಾಕರು ಸಹ ಸರ್ಕಾರದಲ್ಲಿ ಧ್ವನಿ ಎತ್ತಿದರೆ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿದಂತಾಗುತ್ತದೆ ಎಂದು ಹೇಳಿದರು.
ಎಂಎಲ್‌ಸಿ ಇಂಚರ ಗೋವಿಂದರಾಜು ಮಾತನಾಡಿ, ನೀರಿನ ಲಭ್ಯತೆ ಹೆಚ್ಚಾದಷ್ಟು ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ ಎಂದರಲ್ಲದೆ ಕಾಡೇನಹಳ್ಳಿ ನಾಗರಾಜ್ ಕೋಚಿಮುಲ್ ಅಧ್ಯಕ್ಷರಾಗಿದ್ದಾಗ ಹಾಗೂ ನಿರ್ದೇಶಕರಾದ ಮೇಲೆ ಹೈನೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಶ್ರಮ ಪಟ್ಟಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಇವರ ಜೊತೆಗೆ ಸ್ಥಳೀಯ ಶಾಸಕ ಸಮೃದ್ದಿ ಮಂಜುನಾಥ್ ಸಹ ಸಾಥ್‌ನೀಡಿ ಹೈನುಗಾರಿಕೆ ಅಭಿವೃದ್ದಿಗೆ ಸಹಕರಿಸುತ್ತಿದ್ದಾರೆಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಕೋಲಾರ ಡಿವಿ ಹರೀಶ್, ಶ್ರೀನಿವಾಸಪುರ ಹನುಮೇಶ್, ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಜಿ.ಟಿ. ರಾಮಯ್ಯ, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಗೋಪಾಲಮೂರ್ತಿ, ಪ್ರಧಾನ ವ್ಯಸವಸ್ಥಾಪಕ ಡಾ. ಎ,ಸಿ. ಶ್ರೀನಿವಾಸಗೌಡ, ಮುಖಂಡರಾದ ರಘುಪತಿರೆಡ್ಡಿ, ಸಾಮೇಗೌಡ, ಬಿ.ಎಂಸಿ. ವೆಂಕಟ್ರಾಮೇಗೌಡ, ಎಂ.ಆರ್. ಮುರಳಿ, ಡೆಕ್ಕನ್ ಶಶಿಕಾಂತ್, ಗೊಲ್ಲಹಳ್ಳಿ ಪ್ರಭಾಕರ್, ಚಂದ್ರಹಾಸ್, ನಾಗಮಂಗಳ ಶಂಕರಪ್ಪ, ಚಿನ್ನಹಳ್ಳಿ ಗೋಪಾಲ್, ಉಪವ್ಯವಸ್ಥಾಪಕ ಡಾ. ಕಿರಣ್, ವಿಸ್ತರಣಾಧಿಕಾರಿಗಳಾದ ಟಿ.ಜಿ. ಶ್ರೀರಾಮ್, ವೇಣು, ರವಿಕುಮಾರ್, ಪುರುಷೋತ್ತಮ್, ಚಂದ್ರ, ಚೇತನ್ ಉಪಸ್ಥಿತರಿದ್ದರು.