ಅರ್ಪಣಾ ಮನೋಭಾವದ ಸಾಧನೆ ಜೀವಿತಕ್ಕೆ ಮಾದರಿ
ಚಿಕ್ಕಬಳ್ಳಾಪುರ, ಜು.೨೩-ಸತತ ಪರಿಶ್ರಮ ಅರ್ಪಣಾ ಮನೋಭಾವದಿಂದ ಸಾಧಿಸಿದ ಸಾಧನೆಯು ಜೀವಿತಕ್ಕೆ ಮಾದರಿ. ಮಾನವೀಯ ಸೇವೆಯ ಮೂಲಕ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯವು ಪರಿವರ್ತನೆಯ ಶಿಕ್ಷಣವನ್ನು ನೀಡಿ ಮನುಕುಲವನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಅಭಿಪ್ರಾಯಪಟ್ಟರು.
ತಾಲೂಕಿನ ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದ ಸತ್ಯಸಾಯಿ ಪ್ರೇಮಾಮೃತಂ ಸಭಾಂಗಣದಲ್ಲಿ ಸಭಾಂಗಣದಲ್ಲಿ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಡಾಕ್ಟರೇಟ್ ಮತ್ತು ಇತರ ಪದವಿ ಮತ್ತು ಇತರ ಪುರಸ್ಕಾರಗಳನ್ನು ಪ್ರದಾನ ಮಾಡಿ, ಘಟಿಕೋತ್ಸವ ಸಂದೇಶ ನೀಡಿದರು.
ವಿಜ್ಞಾನ ವೈದ್ಯಕೀಯ ವಿಜ್ಞಾನ ಹೀಗೆ ಶಿಕ್ಷಣದ ಅನೇಕ ಮಜಲುಗಳಲ್ಲಿ ಶ್ಲಾಘನೀಯ ಕೆಲಸವನ್ನು ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಮಾಡುತ್ತಿದೆ. ನೆಮ್ಮದಿಯ ಬದುಕಿಗೆ ಎಲ್ಲಾ ರೀತಿಯ ಜ್ಞಾನ ವಿಜ್ಞಾನವನ್ನು ಈ ವಿಶ್ವವಿದ್ಯಾಲಯ ಒದಗಿಸುತ್ತದೆ. ಭಾರತ ಸೇವೆಯಿಂದ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.
ಇಂದು ನೆರವೇರಿದ ಘಟಿಕೋತ್ಸವದಲ್ಲಿ ನಾನು ಭಾಗಿಯಾಗಿರುವುದು ನನ್ನ ಪಾಲಿಗೆ ಅನುಗ್ರಹವಾದಂತಾಗಿದೆ. ಅಭ್ಯುದಯವನ್ನು ಸಾಧಿಸಿದ ಅಭ್ಯರ್ಥಿಗಳು ನಿಸ್ವಾರ್ಥ ಸೇವೆಯ ರೂವಾರಿಗಳಾಗಿ ವಿಶ್ವಕ್ಕೆ ಮಾದರಿ ರಾಯಭಾರಿಯಾಗಬೇಕು ಎಂದು ಅವರು ನುಡಿದರು.
ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಬಿ ಎನ್ ನರಸಿಂಹಮೂರ್ತಿ ಅವರು ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣದ ಆತ್ಮ. ಆತ್ಮದ ಶಿಕ್ಷಣ. ಶಿಕ್ಷಣದಲ್ಲಿ ಆತ್ಮದ ಶಿಕ್ಷಣದ ಕೊರತೆ ಎಲ್ಲಾ ಸಮಸ್ಯೆಗಳಿಗೂ ಮೂಲ. ಸಮಸ್ಯೆ ಮುಕ್ತವಾದ ಶಿಕ್ಷಣವನ್ನು ನಮ್ಮ ವಿಶ್ವವಿದ್ಯಾಲಯವು ನೀಡುತ್ತದೆ ಎಂದರು.
ಪ್ರಾಚೀನ ಭಾರತದ ಗುರುಕುಲ ಶಿಕ್ಷಣವು ಈ ವಿಶ್ವವಿದ್ಯಾಲಯದಲ್ಲಿ ಲಭ್ಯವಿದ್ದು ಆಧುನಿಕ ವಿಜ್ಞಾನ ಮತ್ತು ಪುರಾತನ ವಿವೇಕದ ಸಾರವನ್ನು ಈ ವಿಶ್ವವಿದ್ಯಾಲಯ ಬೋಧಿಸುತ್ತದೆ. ಶಿಕ್ಷಣದ ಜೊತೆಗೆ ಜೀವಿತೋದ್ದೇಶಕ್ಕೆ ಅನುಕೂಲವಾಗುವ ಪಾರಮಾರ್ಥಿಕ ಶಿಕ್ಷಣ ಈ ವಿಶ್ವವಿದ್ಯಾಲಯದ ವೈಶಿಷ್ಟ್ಯ ಎಂದು ತಿಳಿಸಿದರು.
ಇದುವೇ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸಚಿವರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಏಳು ಸಾಧಕರುಗಳಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದರು.
ಘಟಿಕೋತ್ಸವ ಸಮಾರಂಭದ ಸಾನಿಧ್ಯವನ್ನು ವಹಿಸಿದ್ದ ಶ್ರೀ ಸತ್ಯಸಾಯಿ ಮಾನವ ಅಭ್ಯದಯ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂಧನ ಸಾಯಿ ಅವರು ಆಶೀರ್ವಚನವನ್ನು ನೀಡಿದರು. ಸದ್ಗುರುಗಳು ತಮ್ಮ ಉಪನ್ಯಾಸದಲ್ಲಿ ಪುರಸ್ಕಾರ ಪ್ರಶಸ್ತಿ ಪದಕ ಇತ್ಯಾದಿಗಳನ್ನು ಪಡೆದ ಸಾಧಕರು ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು.
ಘಟಿಕೋತ್ಸವ ಸಮಾರಂಭದ ಸಭಾ ವೇದಿಕೆಯಲ್ಲಿ ಶ್ರೀ ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ಸಿ ಶ್ರೀನಿವಾಸ್, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾಕ್ಟರ್ ಶ್ರೀಕಂಠ ಮೂರ್ತಿ, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಮತ್ತು ಶ್ರೀ ಸತ್ಯಸಾಯಿ ಮಾನವ ಅಭ್ಯದಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು ಆದ ಪ್ರೊ. ಜೆ.ಶಶಿಧರ ಪ್ರಸಾದ್ ಉಪಸ್ಥಿತರಿದ್ದರು.
ಗೌರವ ಡಾಕ್ಟರೇಟ್ ಪಡೆದ ಗಣ್ಯರು ವಿವರ
ಸಮಾಜ ಸೇವೆಗೆ ಮೀಸಲಾದ ಗೌರವ ಡಾಕ್ಟರೇಟ್ ಅನ್ನು ಪ್ರಸ್ತುತ ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಪಡೆದರು. ವೈದ್ಯಕೀಯ ಸೇವೆಗೆ ಮೀಸಲಾದ ಗೌರವ ಡಾಕ್ಟರೇಟ್ ಹೃದಯ ತಜ್ಞ ಪೊ?ರಫೇಸರ್ ಆಫ್ಕಾಸೆಂಡಿಯೋಸ್, ಅವರ ಪಾಲಾದರೆ ಶಿಕ್ಷಣ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ದರ್ಶನ್ ಶೇಖರ್ ಅವರಿಗೆ ಲಭಿಸಿತು.
ವ್ಯವಹಾರ ಮತ್ತು ತತ್ವಜ್ಞಾನ ಕ್ಷೇತ್ರದ ಗೌರವ ಡಾಕ್ಟರೇಟ್ ಅಮೇರಿಕಾದ ಹಾರ್ಡ್ ಕೆಫೆ ಸಂಸ್ಥಾಪಕ ಐಸಾಕ್ ಟೈಗ್ರೀಟ್ ಅವರ ಪಾಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದ ಡಾಕ್ಟರೇಟ್ ಪುರಸ್ಕಾರವನ್ನು ಜೈವಿಕ ಸಂಸ್ಥೆಯ ಲಕ್ಷ್ಮಿಪ್ರಸಾದ್ ಪಡೆದರು. ಪ್ರಪಂಚದ ೩೦ಕ್ಕೂ ಹೆಚ್ಚು ಸಂಗೀತ ಉಪಕರಣಗಳ ವಾದನ ಪರಿಶ್ರಮವನ್ನು ಹೊಂದಿರುವ ಡಿಮಿಟ್ರೀಸ್ ಲಾಂಬ್ರಿಯೋನಸ್ ಮತ್ತು ಸಂಗೀತ ಕ್ಷೇತ್ರದ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ಪಡೆದರು.ವಿಶ್ವವಿದ್ಯಾಲಯದಿಂದ ಪದವಿ ಹೊಂದಿದ ೧೫೪ ಮಂದಿ ವಿದ್ಯಾರ್ಥಿನಿಯರಲ್ಲಿ ೯೧ ಮಂದಿ ವಿದ್ಯಾರ್ಥಿನಿಯರು, ೬೩ ಮಂದಿ ವಿದ್ಯಾರ್ಥಿಗಳು ಇದ್ದು ಇದರಲ್ಲಿ ಶೇಕಡ ೭೦ರಷ್ಟು ಬಡತನ ರೇಖೆಗಿಂತ ಕೆಳಗಿರುವ ಕೌಟುಂಬಿಕ ಹಿನ್ನೆಲೆಯ ವಿದ್ಯಾರ್ಥಿಗಳಿದ್ದಾರೆ ಶೇಕಡಾ ೫೬ ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಗ್ರಾಮೀಣ ಪ್ರದೇಶದ ಹಿನ್ನೆಲೆಯನ್ನು ಹೊಂದಿದ್ದರೆ ಶೇಕಡ ೬೮ ಮಂದಿ ತಮ್ಮ ಕುಟುಂಬದ ಮೊದಲ ತಲೆಮಾರಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಾಗಿದ್ದಾರೆ.